ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 17 ಅಧಿಕಾರಿಗಳ ಮನೆ ಮೇಲೆ ದಾಳಿ (Lokayukta Raid) ಮಾಡಿ ಶೋಧ ನಡೆಸಿದ್ದು, ಇದರಲ್ಲಿ ನಗರದ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆಯೂ ದಾಳಿ ನಡೆದಿದೆ. 11 ಕಡೆ ದಾಳಿ ಮಾಡಿರುವ ಲೋಕಾಯುಕ್ತ ತಂಡದಿಂದ ಅಧಿಕಾರಿಗಳ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ.
ನಗರದಲ್ಲಿ ಕಾರ್ಮಿಕ ಇಲಾಖೆಯ ಬಾಯ್ಲರ್ ವಿಭಾಗದ ಉಪ ನಿರ್ದೇಶಕರಾದ ಶ್ರೀನಿವಾಸ್ ಎಸ್.ಆರ್ ಮತ್ತು ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್‌ನ ಅಸಿಸ್ಟೆಂಟ್ ರೆವಿನ್ಯೂ ಆಫೀಸರ್ ಚಂದ್ರಪ್ಪ ಬೀರಜ್ಜನವರ್ ಅವರಿಗೆ ಸೇರಿದ 11 ಕಡೆ ದಾಳಿ ಮಾಡಿ ಶೋಧ ನಡೆಸಲಾಗಿದೆ. ಇವರಲ್ಲಿ ಕಾರ್ಮಿಕ ಇಲಾಖೆ ಬಾಯ್ಲರ್ ವಿಭಾಗದ ಉಪ ನಿರ್ದೇಶಕ ಶ್ರೀನಿವಾಸ್ ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
8 ಲಕ್ಷ ರೂ, 10 ಬ್ರಾಂಡೆಡ್ ವಾಚ್, ಚಿನ್ನ, ಬೆಳ್ಳಿ ಪತ್ತೆ
ಶ್ರೀನಿವಾಸ್ 13 ವರ್ಷಗಳ ಹಿಂದೆ ಸರ್ಕಾರಿ ನೌಕರಿಗೆ ಸೇರಿದ್ದರು. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪ ಕೇಳಿಬಂದಿದ್ದರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಶ್ರೀನಿವಾಸ್ ಅವರ ಉಲ್ಲಾಳ ಉಪನಗರದ ಉಪಕಾರ್ ಲೇಔಟ್‌ನ ಮನೆ, ಬ್ಯಾಡರಹಳ್ಳಿಯ ತಂದೆ ಮನೆ ಸೇರಿ 9 ಕಡೆ ದಾಳಿ ನಡೆಸಿ ಶೋಧ ಕೈಗೊಂಡಿದ್ದರು. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶ್ರೀನಿವಾಸ್ ಮನೆಯಲ್ಲಿ 8 ಲಕ್ಷ ನಗದು, 10 ಬ್ರಾಂಡೆಡ್ ವಾಚ್‌ಗಳು, ಕೂಲಿಂಗ್ ಸನ್ ಗ್ಲಾಸ್, ಚಿನ್ನ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
2ನೇ ಬಾರಿ ಲೋಕಾಯುಕ್ತ ಕೆಂಗಣ್ಣಿಗೆ ಗುರಿಯಾದ ಅಧಿಕಾರಿ
ಹೆಗ್ಗನಹಳ್ಳಿ ವಾರ್ಡ್ ಬಿಬಿಎಂಪಿ ಅಸಿಸ್ಟೆಂಟ್ ರೆವಿನ್ಯೂ ಆಫೀಸರ್ ಚಂದ್ರಪ್ಪ ಬೀರಜ್ಜನವರ್ ಅವರಿಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಕೆ.ಆರ್. ಪುರದ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ. ಇನ್ನೂ ಆರೋಪಿತ ಅಧಿಕಾರಿ ಚಂದ್ರಪ್ಪ ಸೆಪ್ಪೆಂಬರ್ 30 ರಂದು ಲೋಕಾಯುಕ್ತ ಟ್ರ್ಯಾಪ್‌ಗೆ ಒಳಗಾಗಿದ್ದರು. ಜಮೀನೊಂದರ ಖಾತಾ ಬದಲಾಯಿಸಲು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, 10 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸದ್ಯ ಚಂದ್ರಪ್ಪ ಜೈಲಿನಲ್ಲಿದ್ದು, ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ | Lokayukta Raid: ಲೋಕಾಯುಕ್ತ ಮುಂಜಾನೆ ಶಾಕ್, ರಾಜ್ಯದ 90 ಕಡೆ ಮೆಗಾ ರೈಡ್
ಇಬ್ಬರು ಅಧಿಕಾರಿಗಳ ಮನೆಯಲ್ಲಿ ಚಿನ್ನ ಬೆಳ್ಳಿ, ನಗದು ಹಣ, ದುಬಾರಿ ಬೆಲೆಯ ವಸ್ತುಗಳು, ಆಸ್ತಿ ಪಾಸ್ತಿ ಪತ್ರಗಳು ಪತ್ತೆಯಾಗಿವೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ಆಸ್ತಿಯ ಮಾಹಿತಿ ಕಲೆ ಹಾಕಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ