Site icon Vistara News

Robbery | ಗ್ರಾಪಂ ಸದಸ್ಯನ ಮನೆಗೆ ನುಗ್ಗಿ 23.60 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ದರೋಡೆ

Robbery

ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯನ ಮನೆಗೆ ದರೋಡೆಕೋರರು ನುಗ್ಗಿ ಹಲ್ಲೆ ನಡೆಸಿ, ನಗದು, ಚಿನ್ನಾಭರಣ ಸೇರಿ 23.60 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ (Robbery) ಮಾಡಿರುವುದು ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರು ತಾಂಡಾದಲ್ಲಿ ನಡೆದಿದೆ.

8 ದರೋಡೆಕೋರರು ಗ್ರಾಮ ಪಂ‌ಚಾಯಿತಿ ಸದಸ್ಯ ಚಂದ್ರು ಶಂಕರ ರಜಪೂತ ಎಂಬುವವರ ಮನೆಯಲ್ಲಿ ದರೋಡೆ ಮಾಡಿದ್ದಾರೆ. ಗ್ರಾಪಂ ಸದಸ್ಯನ ಮನೆ ದರೋಡೆಗೆ ಖದೀಮರು ಮಂಗಳವಾರ ನಸುಕಿನ ಜಾವದಲ್ಲಿ ಹೊಂಚು ಹಾಕಿ ಬಂದಿದ್ದಾರೆ. ದರೋಡೆಕೋರರು ಬಾಗಿಲು ಬಡಿದಾಗ ಗ್ರಾಮ ಪಂಚಾಯಿತಿ ಸದಸ್ಯನ ಪತ್ನಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಏಕಾಏಕಿ ಆಕೆಯ ಮೇಲೆ ಹಲ್ಲೆ ಮಾಡಿ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ.

ತಕ್ಷಣವೇ ಬೆಡ್‌ರೂಂನಿಂದ ಹೊರಗೆ ಬಂದ ಚಂದ್ರು ರಜಪೂತಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆ ಗಲಾಟೆ ಕೇಳಿ ಚಂದ್ರು ಸೊಸೆ ಹೊರ ಬರುತ್ತಿದ್ದಂತೆ ಇಬ್ಬರನ್ನೂ ಕಟ್ಟಿಹಾಕಿ, ಲಾಕರ್ ಕೀ ಕೊಡುವಂತೆ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ಮಾಡಿ ದರೋಡೆಕೋರರೇ ಟ್ರಜರಿ ಒಡೆದು ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಮಹಲಿಂಗ ನಂದಗಾವಿ, ರಾಮದುರ್ಗ ‌ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ‌ತಾಲೂಕಿನ ಕಟಕೋಳ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Accident Case | ಬೆಳಗಾವಿಯಲ್ಲಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ; ಐವರಿಗೆ ಗಾಯ

Exit mobile version