ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ (LoK Sabha Election 2024) ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ದಕ್ಷಿಣ ಭಾರತದಲ್ಲಿ (South India) ಬಿಜೆಪಿಗೆ ಪ್ರಬಲ ರಾಜ್ಯವೆಂದರೆ ಕರ್ನಾಟಕ ಮಾತ್ರವೇ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 25 + 1 ಸ್ಥಾನವನ್ನು ಗೆದ್ದುಕೊಂಡು ಇತಿಹಾಸ ಬರೆದಿತ್ತು. ಈಗ ಆ ಇತಿಹಾಸ ಮರುಕಳಿಸಬೇಕು ಎಂಬ ನಿಟ್ಟಿನಲ್ಲಿ ಪ್ರಬಲ ತಂತ್ರಗಾರಿಕೆಯನ್ನು ಬಿಜೆಪಿ ವರಿಷ್ಠರು ಹೆಣೆಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಜೆಡಿಎಸ್ ಜತೆಗೆ ಮೈತ್ರಿಗೆ (BJP JDS Alliance) ಮುಂದಾಗಿದೆ. ಜಾತಿ ಹಾಗೂ ಪಕ್ಷವಾರು ಪ್ರಾಬಲ್ಯದ ಲೆಕ್ಕಾಚಾರದ (Calculation of caste and party wise dominance) ಮೂಲಕ ಈಗ ನಾಲ್ಕು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳ ಜಾತಿ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ. ಇದರಿಂದ ತಮ್ಮ ಪಕ್ಷಕ್ಕೆ ಎಷ್ಟು ಪ್ಲಸ್ ಆಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಇದು ಯಾವ ರೀತಿ ಸಹಾಯವನ್ನು ಮಾಡಲಿದೆ ಎಂಬ ಬಗ್ಗೆಯೂ ಚಿಂತನೆ ನಡೆಸಿದೆ. ಅಲ್ಲದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Congress guarantee scheme) ದಾಟಿ ಮತ ಪಡೆಯುವ ಸವಾಲು ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಇದೆ. ಈ ನಿಟ್ಟಿನಲ್ಲಿ ಒಟ್ಟಾಗಿ ಹೋರಾಟ ಮಾಡುವ ಬಗ್ಗೆ ಮಾತುಕತೆಗಳು ನಡೆದಿವೆ. ಮೈತ್ರಿ ಬಗ್ಗೆ ಬಹಳ ಹಿಂದೆ ಸುದ್ದಿಯಾಗಿದ್ದರೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಹಿತ ಬಿಜೆಪಿ ನಾಯಕರೂ ಅಲ್ಲಗಳೆದಿದ್ದರು. ಆದರೆ, ಶುಕ್ರವಾರ (ಸೆಪ್ಟೆಂಬರ್ 08) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ನೀಡಿರುವ “ಮೈತ್ರಿ” ಹೇಳಿಕೆಯು ಸಂಚಲನ ಮೂಡಿಸಿದೆ.
ಇದನ್ನೂ ಓದಿ: BS Yediyurappa : ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಅನಿವಾರ್ಯವಾದ ಬಿಎಸ್‌ವೈ; ಬಿ.ಎಲ್. ಸಂತೋಷ್ ಪ್ಲ್ಯಾನ್ ಉಲ್ಟಾ!
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮಗೆ ಖುಷಿಯಾಗುತ್ತಿದೆ. ಅವರಿಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಒಪ್ಪಿದ್ದಾರೆ ಎಂದು ಹೇಳಿದ್ದರು. ಬಿಜೆಪಿ ವರಿಷ್ಠರು ಮೈತ್ರಿಗೆ ಒಪ್ಪಿಗೆ ನೀಡಿರುವುದರ ಹಿಂದೆ ಜಾತಿ ಲೆಕ್ಕಾಚಾರವನ್ನು ಹಲವಾರು ರೀತಿಯಲ್ಲಿ ವರ್ಕೌಟ್ ಮಾಡಿದ್ದಾರೆನ್ನಲಾಗಿದೆ.
24+4 = 28 ಕ್ಷೇತ್ರದಲ್ಲಿ ಹೇಗಿದೆ ಜಾತಿ ಪ್ರಾಬಲ್ಯ?
ಹಾಲಿ ಮೈತ್ರಿ ಮಾತುಕತೆಯ ಭಾಗವಾಗಿ ಜೆಡಿಎಸ್‌ಗೆ ಕೋಲಾರ, ಮಂಡ್ಯ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರವನ್ನು ಬಿಟ್ಟುಕೊಡುವ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಇಲ್ಲಿಯ ಜಾತಿ ಸಮೀಕರಣವನ್ನು ನಾವು ಗಮನಿಸುವುದಾದರೆ, ಕೋಲಾರದಲ್ಲಿ ಒಕ್ಕಲಿಗ ಪ್ರಾಬಲ್ಯ ಹೆಚ್ಚಿದೆ. ಮಂಡ್ಯದಲ್ಲಿಯೂ ಒಕ್ಕಲಿಗ ಪ್ರಾಬಲ್ಯ ಹೆಚ್ಚಾಗಿದೆ. ಇನ್ನು ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲೂ ಒಕ್ಕಲಿಗ ಸಮುದಾಯದ್ದೇ ಪಾರುಪತ್ಯವಿದೆ. ಹೀಗಾಗಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಬೆಂಬಲ ನೀಡಿದರೆ ಆ ಸ್ಥಾನಗಳನ್ನು ಸಹ ಆರಾಮವಾಗಿ ಗೆಲ್ಲಬಹುದಾಗಿದೆ.
ಬೆಂಗಳೂರಲ್ಲಿ ಜೆಡಿಎಸ್‌ಗಿದೆ ಸಂಘಟನೆ ಕೊರತೆ
ಇನ್ನು ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟು ಕೊಡಲು ಜೆಡಿಎಸ್ ತೀರ್ಮಾನ ಮಾಡಿದೆ. ಕಾರಣ, ಬೆಂಗಳೂರಿನಲ್ಲಿ ಜೆಡಿಎಸ್‌ಗೆ ಸಂಘಟನೆ ಕೊರತೆ ಇದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಜತೆಗೆ ಒಬಿಸಿ ಕೂಡಿದರೆ ಬಿಜೆಪಿಗೆ ಪ್ಲಸ್ ಆಗಲಿದೆ.
ಚಾಮರಾಜನಗರದಲ್ಲಿ ದಲಿತ ಸಮದಾಯ ಸಹಿತ ಒಕ್ಕಲಿಗೂ ಹೆಚ್ಚಿದ್ದಾರೆ. ಹೀಗಾಗಿ ಇಲ್ಲಿ ಮೈತ್ರಿ ಆದರೆ ಬಿಜೆಪಿಗೆ ಪ್ಲಸ್ ಆಗಲಿದೆ. ಒಂದು ವೇಳೆ ಜೆಡಿಎಸ್ ಸ್ಪರ್ಧೆ ಮಾಡಿದರೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರವನ್ನು ಗಮನಿಸುವುದಾದರೆ ಇಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ದಲಿತ ಸಮುದಾಯದವರೂ ಇದ್ದಾರೆ. ಇನ್ನು ಇದು ಬಿಜೆಪಿ ಕೋಟೆಯಾಗಿದ್ದರೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದುಕೊಂಡಿರುವುದರಿಂದ ಮೈತ್ರಿಯಾದರೆ ಮಾತ್ರ ಬಿಜೆಪಿಗೆ ಪ್ಲಸ್ ಆಗಲಿದೆ. ಈ ಎಲ್ಲ ಲೆಕ್ಕಾಚಾರಗಳು ಇದರ ಹಿಂದೆ ಇದೆ.
ಇನ್ನು ಬಿಜೆಪಿಯ ಭದ್ರಕೋಟೆ ಶಿವಮೊಗ್ಗದಲ್ಲಿ ಸಹ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರ ಜತೆಗೆ ಈಡಿಗ ಸೇರಿ ಇನ್ನಿತರ ಸಮುದಾಯದವರ ಮತಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಆದರೆ, ಇಲ್ಲಿ ಮೈತ್ರಿ ಮಾಡಿಕೊಂಡರೆ ಜೆಡಿಎಸ್‌ನ ಬಹುತೇಕ ಮತಗಳ ಕ್ರೋಢೀಕರಣದಿಂದ ಬಿಜೆಪಿಗೆ ಪ್ಲಸ್ ಆಗಲಿದೆ.
ಕಲ್ಯಾಣ ಕರ್ನಾಟಕದಲ್ಲೂ ಇದೆ ಜೆಡಿಎಸ್ ಮತ!
ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಜೆಡಿಎಸ್ ಮತ ಇದೆ. ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಮೈತ್ರಿಯಾದರೆ ಬಿಜೆಪಿಗೆ ಪ್ಲಸ್ ಆಗಲಿದೆ.
ಉತ್ತರ ಕರ್ನಾಟಕದಲ್ಲೇನು ಅನುಕೂಲ?
ಕಲ್ಯಾಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ 14ಕ್ಕೂ ಅಧಿಕ ಸ್ಥಾನ ಗೆದ್ದರೆ ಉತ್ತರ ಕರ್ನಾಟಕ ಭಾಗದಲ್ಲಿ ಹತ್ತು ಸ್ಥಾನ ಗೆಲುವು ಪಕ್ಕಾ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.
ಇದನ್ನೂ ಓದಿ: HD Kumaraswamy : ಸೆ. 10ಕ್ಕೆ ಜೆಡಿಎಸ್ ಸಮಾವೇಶವೆಂದ ಎಚ್‌ಡಿಕೆ; ಬಿಜೆಪಿ ಜತೆಗಿನ ಮೈತ್ರಿ ಪ್ರಸ್ತಾಪ?
ಉತ್ತರ ಕರ್ನಾಟಕದ ದಾವಣಗೆರೆ, ಹಾವೇರಿ, ಹುಬ್ಬಳ್ಳಿ – ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆ ಉತ್ತಮವಾಗಿಯೇ ಇದೆ. ಅಲ್ಲದೆ, ಇಲ್ಲಿ ಜೆಡಿಎಸ್ ಅಲ್ಪಮಟ್ಟಿಗೆ ಪ್ರಭಾವನ್ನು ಹೊಂದಿದೆ. ಹಾಗಾಗಿ ಜೆಡಿಎಸ್ ಮತಗಳೂ ಸೇರಿಕೊಂಡರೆ ಗೆಲುವು ಮತ್ತಷ್ಟು ಸುಲಭ ಎಂದು ಬಿಜೆಪಿ ನಾಯಕರು ತಂತ್ರ ಹೆಣೆದಿದ್ದಾರೆ.