ರಾಮನಗರ: ಜಾತಿ ಆಧಾರದ ಮೇಲೆಯೇ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಒಂದು ಕಡೆ ಜಾತ್ಯತೀತ ಎನ್ನುತ್ತಾರೆ, ಇನ್ನೊಂದು ಕಡೆ ಜಾತಿ ಗಣತಿ ವರದಿ (Caste Census) ಇಟ್ಟುಕೊಂಡು ಜಾತಿ ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿಯ ತೋಟದ ಮನೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರವು ರಾಜಕೀಯ ಮಾಡುತ್ತಿದೆ. ಕಾಂತರಾಜು ಎಂಬುವವರಿಂದ ವರದಿ ಕೊಡಿಸಿದ್ದೆವು. ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ, ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ಮಾತೆತ್ತಿದರೆ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ? ಇಲ್ಲ. ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ಒಮ್ಮೆಯೂ ಈ ಬಗ್ಗೆ ಸಿಎಂ ಆಗಿದ್ದ ನನ್ನ ಬಳಿ 14 ತಿಂಗಳಲ್ಲಿ ಒಮ್ಮೆಯೂ ಚರ್ಚೆ ನಡೆಸಲೇ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ | Karnataka Politics : ಎಚ್.ಡಿ. ದೇವೇಗೌಡ – ಸಿದ್ದರಾಮಯ್ಯ ಅಚ್ಚರಿ ಭೇಟಿ; ಆರೋಗ್ಯ ವಿಚಾರಿಸಿದ ಸಿಎಂ
ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದ ಅವರು, ಜಾತಿ ಎನ್ನುವ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಜಾತ್ಯತೀತ ಸಮಾಜ ನಿರ್ಮಾಣ ಮಾಡೋಣ ಎಂದು ಭಾಷಣ ಬಿಗಿಯುತ್ತಾರೆ. ಅದರ ಅರ್ಥವೇನು? ಜಾತ್ಯತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕು ಎಂದಲ್ಲವೇ? ಆದರೆ, ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ ಎಂದು ಟೀಕಾಪ್ರಹಾರ ನಡೆಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಕೊಂಡೇ ಬರುತ್ತಿದೆ. ಇವರು ಜಾತಿಗಣತಿ ಮಾಡಿ ಏನು ಸಾಧನೆ ಮಾಡುತ್ತಾರೆ? ಅದರ ಉಪಯೋಗ ಏನು? ಸಮಾಜ ಹೊಡೆಯಲು ಜಾತಿ ಗಣತಿ ಮಾಡುತ್ತೀರೋ ಅಥವಾ ಜಾತಿ ಬದಿಗಿಟ್ಟು ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುತ್ತೀರೋ? ಮೊದಲು ಜನರಿಗೆ ಅದನ್ನು ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka Politics : 2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ಜತೆ ಇನ್ನೆಂದೂ ಕೈಜೋಡಿಸಲ್ಲ: ಎಚ್‌ಡಿಕೆ
ಜೆಡಿಎಸ್ ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಮುಂತಾದವರು ಹಾಜರಿದ್ದರು.