ಬಾಗಲಕೋಟೆ: ಜಾತಿ ಗಣತಿಗೆ (Caste Census) ಸಂಬಂಧಿಸಿ ಕಾಂತರಾಜು ವರದಿಯನ್ನು (Kantharaju report) ಸ್ವೀಕರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಹಿನ್ನಡೆಯಾಗಲಿದೆ ಎಂದು ಹಿರಿಯ ವೀರಶೈವ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಎಚ್ಚರಿಕೆ ನೀಡಿದ ಬೆನ್ನಲ್ಲೇ ಈಗ ಮಾಜಿ ಸಚಿವ ಮುರುಗೇಶ ನಿರಾಣಿ (Murugesh Nirani) ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ರಾಜ್ಯದ 7 ಕೋಟಿ ಜನರಲ್ಲಿ 26% ವೀರಶೈವ ಸಮಾಜ ಇದೆ. ಅಂದರೆ, 1 ಕೋಟಿ 30 ಲಕ್ಷ ಜನರಿದ್ದಾರೆ. ಅವರು ತೋರಿಸುತ್ತಿರುವುದು ಕೇವಲ 60 ಲಕ್ಷ ಮಂದಿ ಇದ್ದಾರೆ ಎಂಬುದನ್ನು ಮಾತ್ರ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದೀಗ ಜಾತಿಗಣತಿ ವರದಿ ವಿರುದ್ಧ ಲಿಂಗಾಯತ ಸಮಾಜದವರು ಪಕ್ಷಾತೀತವಾಗಿ ಒಟ್ಟಾಗುತ್ತಿದ್ದು, ಈಗ ಮುರುಗೇಶ್ ನಿರಾಣಿ ಕೈಜೋಡಿಸಿದ್ದಾರೆ.
2018 ರಲ್ಲಿ ವೀರಶೈವ – ಲಿಂಗಾಯತ ಬೇರೆ ಎಂದು ಮಾಡಲು ಮುಂದಾಗಿದ್ದರಿಂದ ಕಾಂಗ್ರೆಸ್ ಸೋತಿದ್ದು ಎಂಬುದನ್ನು ಮರಿಯಬಾರದು. ಮತ್ತೆ ಈಗ ಜಾತಿ ಗಣತಿಯನ್ನು ತಪ್ಪು ತಪ್ಪಾಗಿ ಪ್ರಕಟ ಮಾಡಿದರೆ ರಾಜ್ಯದ ಜನ ಪಾಠ ಕಲಿಸುತ್ತಾರೆ ಎಂದು ಮುರುಗೇಶ್ ನಿರಾಣಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: BY Vijayendra : ಹೆದರಬೇಡಿ ನಾನಿದ್ದೇನೆ; ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಿಂತ ಬಿ.ವೈ. ವಿಜಯೇಂದ್ರ!
ಜನ ಗಣತಿ ವರದಿಯನ್ನು ಸ್ವೀಕಾರ ಮಾಡಿ ಬಿಡುಗಡೆ ಮಾಡುತ್ತಿರುವುದು ತಪ್ಪು ಎಂದು ಶಾಮನೂರು ಶಿವಶಂಕರಪ್ಪ ಅವರು ಈಗಾಗಲೇ ಹೇಳಿದ್ದಾರೆ. ರಾಜ್ಯದ 7 ಕೋಟಿ ಜನರಲ್ಲಿ 26% ವೀರಶೈವ ಸಮಾಜ ಇದೆ. ಅಂದರೆ, 1 ಕೋಟಿ 30 ಲಕ್ಷ ಜನರಿದ್ದಾರೆ. ಅವರು ತೋರಿಸುತ್ತಿರುವುದು ಕೇವಲ 60 ಲಕ್ಷ ಮಂದಿ ಇದ್ದಾರೆ ಎಂಬುದನ್ನು ಮಾತ್ರ. ತಮಗೆ ಬೇಕಿರುವ ಸಮಾಜದ ಸಂಖ್ಯೆ ಹೆಚ್ಚು ತೋರಿಸಿ, ಬೇಡವಾದ ಸಮಾಜವನ್ನು ಕಡಿಮೆ ಸಂಖ್ಯೆ ತೋರಿಸುವ ಹುನ್ನಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಿವಶಂಕರಪ್ಪ ಅವರು ಸೇರಿದಂತೆ ಕಾಂಗ್ರೆಸ್‌ನಲ್ಲಿರುವ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ. ಅದನ್ನು ಇಲ್ಲಿಗೆ ಕೈಬಿಟ್ಟು ಸರಿಯಾದ ರೀತಿಯಲ್ಲಿ ಜಾತಿ ಗಣತಿ ಅನೌನ್ಸ್ ಮಾಡಬೇಕು ಎಂದು ಮುರುಗೇಶ್ ನಿರಾಣಿ ಆಗ್ರಹಿಸಿದ್ದಾರೆ.
ಲೋಕಸಭೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ!
ಸ್ವಲ್ಪ ಕಾದು ನೋಡಿ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ. ಈ ಸರ್ಕಾರದಲ್ಲಿ ಈಗಾಗಲೇ ಎಷ್ಟು ಜನ ಅಸಮಾಧಾನಿತರು ಇದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಹಿರಿಯರನ್ನು ಕೈಬಿಟ್ಟು ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರೆಲ್ಲರೂ ಕುದಿಯುತ್ತಿದ್ದಾರೆ. ಯಾವ ಗ್ಯಾರಂಟಿ ಭಾಗ್ಯಗಳು ಸರಿಯಾಗಿ ಇಂಪ್ಲಿಮೆಂಟ್ ಆಗುತ್ತಿಲ್ಲ. ಭಾಗ್ಯಗಳನ್ನು ಪಡೆಯುವ ಫಲಾನುಭವಿಗಳೇ ಬೇಸತ್ತಿದ್ದಾರೆ. ಎಲ್ಲ ಕಾಮಗಾರಿಗಳೂ ಸಹ ನಿಂತು ಹೋಗಿವೆ. ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ 7 ಕೋಟಿ ಜನ ಹಿಡಿಶಾಪ ಹಾಕುತ್ತಿದ್ದಾರೆ. ಇದರಲ್ಲಿ ಈಗ ಜಾತಿ ಗಣತಿ ವಿಚಾರವೂ ಸೇರಿಕೊಂಡಿದೆ. ಇದರಿಂದಲೇ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸೀಟ್ ಗೆಲ್ಲುತ್ತೇವೆ. ಅವರವರಿಂದಲೇ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮುರುಗೇಶ್ ನಿರಾಣಿ ಕಿಡಿಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ ವಿರೋಧ ಯಾಕೆ?
ಜಾತಿ ಜನಗಣತಿ ವರದಿ ಸರಿ ಇಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿಲ್ಲ. ಎಲ್ಲೋ ಕೋಣೆಯಲ್ಲಿ ಕುಣಿತು ಮಾಡಲಾಗಿದೆ. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು, ವೈಜ್ಞಾನಿಕವಾಗಿ ಸಮಿಕ್ಷೆ ಆಗಬೇಕು ಎಂದು ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದರು.
ಕಾಂತರಾಜು ವರದಿಯಲ್ಲಿ ಏನಿದೆ ಎನ್ನುವುದೆಲ್ಲ ಲೀಕ್ ಆಗಿದೆ. ಕಾಂತರಾಜು ಅವರು ಕೊಟ್ಟ ಮೂಲ ವರದಿಯೇ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ. ಅದೇನೇ ಇರಲಿ, ಅದರಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಾಗಿದೆ. ಅದು ಲೋಪದಿಂದ ಕೂಡಿದೆ ಅಂತಲೇ ನಾವು ವಿರೋಧ ಮಾಡ್ತಾ ಇದ್ದೀವಿ. ಲಿಂಗಾಯದ ವೀರಶೈವ ಅಂತ ಬರೆದುಕೊಂಡೇ ಇಲ್ಲ ಅಂತ ಗೊತ್ತಾಗಿದೆ. ಅನೇಕ ಲೋಪದೋಷಗಳು ಎದ್ದು ಕಾಣುತ್ತಿದೆ. ಈ ಸಮಿಕ್ಷೆಯ ವರದಿಗೆ ಎಲ್ಲರ ವಿರೋಧವಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.
ಮನೆ ಮನೆಗೆ ಹೋಗಿ ಗಣತಿ ಮಾಡಲು ಶಾಮನೂರು ತಾಕೀತು
ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ, ಈಗಲಾದರೂ ಮನೆ ಮನೆಗೆ ಹೋಗಿ ಗಣತಿ ಮಾಡಿ. ಎಲ್ಲೊ ಕುಳಿತುಕೊಂಡು ಗಣತಿ ಮಾಡುವುದಲ್ಲ. ಲಿಂಗಾಯತರ ಒಟ್ಟಾರೆ ಜನಸಂಖ್ಯೆ 60-70 ಲಕ್ಷ ಅಂತ ಅದರಲ್ಲಿ ಇದೆಯಂತೆ. ಇದನ್ನೆಲ್ಲ ಒಪ್ಪಲು ಸಾಧ್ಯವೇ ಎಂದು ಕೇಳಿದ ಅವರು, ನಾವೂ ಸಹ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.
ಇದನ್ನೂ ಓದಿ: Online gambling : ಆನಂದದಿಂದ ಸಾಯುವುದು ಹೇಗೆ? ಗೂಗಲ್ ಸರ್ಚ್ ಮಾಡಿದ್ದ ದಂಡು ಮಂಡಳಿ ಸಿಇಒ ಆನಂದ!
ಬಿಜೆಪಿ, ಜೆಡಿಎಸ್ ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಈಗಾಗಲೇ ಈ ಬಗ್ಗೆ ಸಿದ್ದರಾಮಯ್ಯನವರ ಜತೆ ಚರ್ಚೆ ಮಾಡಿದ್ದೇನೆ. ನೋಡೋಣ ತಡಿಯಪ್ಪ ಎಂದು ಹೇಳಿದ್ದಾರೆ. ಯಾರು ವಿರೋಧ ಮಾಡುತ್ತಾರೋ ಅದನ್ನು ಸಿಎಂ ಬೇಕು ಅಂತಾರೆ, ಅವರು ಹಾಗೆಯೇ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.