Site icon Vistara News

Caste Census : ರಾಜ್ಯದ ಜಾತಿಗಣತಿ ವರದಿ ಬಿಡುಗಡೆಗೆ ರಾಹುಲ್‌ ಸೂಚನೆ, ಸಿದ್ದರಾಮಯ್ಯ ಒಪ್ಪಿಗೆ

Siddaramaiah and Rahul Gandhi after CWC Meet

ನವದೆಹಲಿ: ಕರ್ನಾಟಕ ಸೇರಿದಂತೆ ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಜಾತಿ ಗಣತಿ (Caste Census) ನಡೆಸಬೇಕು, ಈಗಾಗಲೇ ನಡೆಸಿದ್ದರೆ ಬಿಹಾರ ಮಾದರಿಯಲ್ಲಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ (CWC Meeting) ನಿರ್ಧರಿಸಲಾಗಿದೆ.

ಛತ್ತೀಸ್‌ಗಢ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಮುಖ್ಯಮಂತ್ರಿಗಳ ಜತೆ ವಿಸ್ತೃತವಾದ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಮುಂದಿನ ಪಂಚ ರಾಜ್ಯಗಳ ಚುನಾವಣೆ ಬಳಿಕ ಎಲ್ಲೆಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆಯೋ ಅಲ್ಲಿಯೂ ಜಾತಿ ಗಣತಿ ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಸಾಮಾಜಿಕ-ಆರ್ಥಿಕ ಗಣತಿಯ ವರದಿ ನವೆಂಬರ್‌ನಲ್ಲಿ ಸಲ್ಲಿಕೆಯಾಗಲಿದ್ದು, ಅದನ್ನು ಕೂಡಾ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಹುಲ್‌ ಗಾಂಧಿ ಅವರು ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಸಲ್ಲಿಕೆಯಾಗಲಿರುವ ಜಾತಿ ಗಣತಿ ವರದಿ ವಿಚಾರದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರ ಜತೆ ಮಾತನಾಡಿದ್ದೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಉತ್ತರ ನೀಡಲಿದ್ದಾರೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಹೇಳಿದರು.

ವರದಿ ಸಲ್ಲಿಸಲು ಸೂಚಿಸಿದ್ದೇನೆ ಎಂದ ಸಿದ್ದರಾಮಯ್ಯ

2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ನಮ್ಮ ಹಿಂದಿನ ಸರ್ಕಾರ ಜಾತಿ ಸಮೀಕ್ಷೆ ಮಾಡಿತ್ತು. 2014 -15ರಲ್ಲಿ ನಮ್ಮ ಸರ್ಕಾರ ಜಾತಿ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ಆಸಕ್ತಿ ತೋರಿತು. ಆದರೆ, ನಮ್ಮ ಅವಧಿ ಮುಗಿಯುವ ವೇಳೆಗೆ ವರದಿ ಸಿದ್ಧವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಸಿಎಂ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಸಮೀಕ್ಷೆ ವರದಿ ಪಡೆಯಲಿಲ್ಲ. ಇದೀಗ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಸೂಚಿಸಿದ್ದೇವೆ. ನವೆಂಬರ್‌ನಲ್ಲಿ ಅದನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಅದು ಬಂದ ಬಳಿಕ ವರದಿ ಪ್ರಕಟಿಸಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

2017ರಲ್ಲಿ ವರದಿ ಯಾಕೆ ಜಾರಿಯಾಗಲಿಲ್ಲ ಕೇಳಿದ ಹರಿಪ್ರಸಾದ್‌

ಈ ನಡುವೆ, ಸಿದ್ದರಾಮಯ್ಯ ಸರ್ಕಾರದ ನಿಲುವುಗಳನ್ನು ಪ್ರಶ್ನೆ ಮಾಡುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರ ನಡೆ ದಿಲ್ಲಿಯಲ್ಲೂ ಮುಂದುವರಿಯಿತು. ಮಾಧ್ಯಮಗಳ ಜತೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ʻಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಲ್ಕು ಗಂಟೆಗಳ ಕಾಲ ಜಾತಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಯಿತು. ರಾಜ್ಯ ಅಥವಾ ರಾಷ್ಟ್ರದಲ್ಲಿ ಜಾತಿ ಸಮೀಕ್ಷೆ ಆಗಬೇಕು ಎನ್ನುವ ನಿಲುವು ರಾಹುಲ್ ಗಾಂಧಿ ಅವರದ್ದಾಗಿತ್ತು. ಇದು ಜನರ, ಸಾಮಾಜಿಕ ವ್ಯವಸ್ಥೆ ಸುಧಾರಿಸಲು ಸಹಾಯಕವಾಗಲಿದೆʼʼ ಎಂದು ಹೇಳಿದರು.

ಇದನ್ನೂ ಓದಿ: CWC Meeting: 4 ಕಾಂಗ್ರೆಸ್‌ ಸಿಎಂಗಳಲ್ಲಿ ಮೂವರು OBC, 10 ಬಿಜೆಪಿ ಸಿಎಂಗಳಲ್ಲಿ ಒಬ್ಬರೇ OBC!

ʻʻಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೇ ಜಾತಿ ಗಣತಿ ಆಗಿತ್ತು. 2017ರಲ್ಲಿ ಆಯೋಗದ ವರದಿ ಸಲ್ಲಿಕೆಯಾಗಿದ್ದರೂ ಯಾಕೆ ಜಾರಿ ಆಗಲಿಲ್ಲ ಎನ್ನುವ ಬಗ್ಗೆ ಸರ್ಕಾರದಲ್ಲಿದ್ದವರನ್ನು ಕೇಳಿದ್ರೆ ಗೊತ್ತಾಗುತ್ತದೆʼʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಿದ ಪ್ರಮುಖ ಕಾಂಗ್ರೆಸ್‌ ನಾಯಕರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು, ಕರ್ನಾಟಕ ಸಿಎಂ ಸಿದ್ದರಾಮಯ್ಯ, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ಜೈರಾಮ್ ರಮೇಶ್, ಸುಖಜೀಂದರ್ ರಾಂಧವಾ, ಗೌರವ್ ಗೊಗೊಯ್, ಗುಲಾಮ್ ಅಹ್ಮದ್ ಮಿರ್, ಅಜಯ್ ಮಾಕೆನ್, ಚರಂಜಿತ್ ಸಿಂಗ್ ಚನ್ನಿ, ಕುಮಾರಿ ಸೆಲ್ಜಾ, ಬಿ.ಕೆ ಹರಿಪ್ರಸಾದ್, ಮಾಣಿಕಂ ಠಾಗೋರ್, ಮಾಣಿಕ್ರಾವ್ ಠಾಕ್ರೆ, ಪ್ರತಿಭಾ ಸಿಂಗ್, ಗುರುದೀಪ್ ಸಪ್ಪಲ್, ವೀರಪ್ಪ ಮೊಯ್ಲಿ, ಅಧೀರ್ ರಂಜನ್ ಚೌಧರಿ, ಅಂಬಿಕಾ ಸೋನಿ, ತಾರಿಕ್ ಅನ್ವರ್, ಮುಕುಲ್ ವಾಸ್ನಿಕ್, ರಾಣಿ ಪಾಟೀಲ್, ಮನೀಶ್ ತಿವಾರಿ,
ದಿಗ್ವಿಜಯ್ ಸಿಂಗ್, ಭನ್ವರ್ ಜಿತೇಂದರ್ ಸಿಂಗ್, ಶಶಿ ತರೂರ್, ಅಜೋಯ್ ಕುಮಾರ್, ಹರೀಶ್ ಚೌಧರಿ, ದೀಪೇಂದರ್ ಹೂಡಾ, ಸಚಿನ್ ಪೈಲಟ್


Exit mobile version