Site icon Vistara News

Caste Politics: ಕಾಂಗ್ರೆಸ್‌ ಸಮಾವೇಶದ ಬೆನ್ನಿಗೇ ಸಿಎಂ ಬಸವರಾಜ ಬೊಮ್ಮಾಯಿಗೆ ತಿಗಳ ಸಮುದಾಯದ ಸನ್ಮಾನ

caste politics thigala community felicitation to cm basavaraja bommai

#image_title

ಬೆಂಗಳೂರು: ತಿಗಳ ಸಮುದಾಯವನ್ನು ತನ್ನತ್ತ ಸೆಳೆಯಲು ಇತ್ತೀಚೆಗೆ ಕಾಂಗ್ರೆಸ್‌ ಸಮಾವೇಶ ನಡೆಸಿದ ಬೆನ್ನಿಗೇ ತಿಗಳ ಸಮುದಾಯದ (Caste Politics) ಇನ್ನಿತರೆ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದಾರೆ.

ಮಾರ್ಚ್‌ 14ರಂದು ಬೆಂಗಳೂರಿನಲ್ಲಿ ತಿಗಳ ಸಮುದಾಯದ ಸಮಾವೇಶ ನಡೆಸಲಾಗಿತ್ತು. ಕಾಂಗ್ರೆಸ್‌ ನಾಯಕ ಪಿ.ಆರ್‌. ರಮೇಶ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಅನೇಕ ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು. ಅದೇ ದಿನ ಸಂಜೆ ರಾಜ್ಯ ಸರ್ಕಾರವು ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶಿಸಿತ್ತು.

ಇದೀಗ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು,ತುಮಕೂರಿನ ಜ್ಞಾನಂದಾಪುರಿ ಮಹಾಸ್ವಾಮಿ ನೇತೃತ್ವದಲ್ಲಿ ತಿಗಳ ಸಮುದಾಯದ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಕ್ಕೆ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಿಗಳ ಸಮಾಜವನ್ನು ಮೇಲೆತ್ತಬೇಕೆಂದೇ ನಿಗಮ ಸ್ಥಾಪನೆ ಮಾಡಲಾಗಿದೆ. ತಿಗಳ ಸಮಾಜದ ಬಾಂಧವರು ತಮ್ಮ ವೃತ್ತಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಯುವ ಜನಾಂಗಕ್ಕೆ ವಿದ್ಯೆ ಕೊಟ್ಟು ಮುಂದೆ ಬರಬೇಕೆಂದು ಎಂದು ಇಡೀ ಜೀವನವನ್ನೇ ಸವೆಸಿದ್ದಾರೆ. ತಿಗಳ ಸಮಾಜ ಶ್ರಮಿಕ ಸಮಾಜವಾಗಿದ್ದು, ಮಾಡಿಯೂ ಮಾಡಿದ್ದೇವೆ ಎಂದು ಹೇಳಿಕೊಳ್ಳದ ಸಮಾಜ. ಸಂಭಾವಿತ ಸಜ್ಜನ ಸಮಾಜ ಇದು. ಈ ಸಮಾಜವನ್ನು ಗುರುತಿಸಬೇಕೆಂದು ಮನದಾಳದ ಇಚ್ಛೆ ಇತ್ತು. ಇದಕ್ಕೆ ನೆ.ಲ.ನರೇಂದ್ರ ಬಾಬು ಅವರು ಬಹಳಷ್ಟು ಪುಷ್ಟಿ, ಶಕ್ತಿಯನ್ನು ನೀಡಿದ್ದಾರೆ. ಹಾಗಾಗಿ ನಿಗಮ ಸ್ಥಾಪನೆ ಮಾಡಲಾಯಿತು. ಇದಕ್ಕಾಗಿ ಆಯವ್ಯಯದಲ್ಲಿ ವಿಶೇಷವಾದ ಅನುದಾನವನ್ನು ಮೀಸಲಿಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಎಂಬ ಮಂತ್ರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಅವಕಾಶವನ್ನು ಸದುಪಯೋಗ ಮಾಡಲು ಸಮಾಜದ ಯುವಕರಿಗೆ, ಮಹಿಳೆಯರಿಗೆ ಇದನ್ನು ಉಪಯೋಗ ಮಾಡಿಕೊಳ್ಳಲು ತಿಳಿಸಬೇಕು. ಈ ಬಗ್ಗೆ ಪ್ರಚಾರವೂ ಆಗಬೇಕು. ಆಗ ಎಲ್ಲರಿಗೂ ಕಾರ್ಯಕ್ರಮ ಮುಟ್ಟುತ್ತದೆ.
ಒದಗಿಸಲಾಗಿರುವ ಅನುದಾನವನ್ನು ಸದ್ಬಳಕೆ ಮಾಡಿ, ಶ್ರಮ ವಹಿಸಿ ಮುಂದೆ ಬರಲು ಸಮಾಜದ ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು. ನಮ್ಮ ಕೆಲಸಗಳು ಮಾತನಾಡಬೇಕು. ಮನದಾಳದಿಂದ, ಪ್ರೀತಿಯಿಂದ, ವಿಶ್ವಾಸದಿಂದ ಈ ಕೆಲಸ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: Sadanandotsava : ಸರಳ ಸಜ್ಜನ ರಾಜಕಾರಣಿ ಸದಾನಂದ ಗೌಡ; ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ

Exit mobile version