ಮಂಡ್ಯ: ರಾಜ್ಯ ಸರ್ಕಾರ ಕಾವೇರಿ ನದಿ ವಿವಾದಕ್ಕೆ (Cauvery Water Dispute) ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಕಾನೂನು ತಜ್ಞರು, ಹೋರಾಟಗಾರರು ಹಾಗೂ ಪ್ರತಿಪಕ್ಷಗಳ ಅಭಿಪ್ರಾಯ ಪಡೆದು ಸರ್ವ ಸಮ್ಮತವಾದ ಸಂಕಷ್ಟ ಸೂತ್ರ (Distress formula) ಸಿದ್ಧಪಡಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority-CWMA) ಹಾಗೂ ಸುಪ್ರೀಂ ಕೋರ್ಟ್ (Supreme Court) ಮುಂದೆ ಮಂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ (Raita Hitarakshana Samiti) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯದಲ್ಲಿ ಕಾವೇರಿ ಹೋರಾಟವನ್ನು ಜೀವಂತ ಇಟ್ಡಿರುವ ಸುನಂದಮ್ಮ, ಅಂಬುಜಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
“ನಾವು ಎಲ್ಲರೂ ನಿಮ್ಮ ಜೊತೆಗೆ ಇದ್ದೇವೆ. ಇಡೀ ಕರ್ನಾಟಕ ವಿಶೇಷವಾಗಿ ಬೆಂಗಳೂರಿನ ಜನ ಹೋರಾಟಗಾರರ ಜೊತೆಗೆ ಇದ್ದೇವೆ. ಕಾವೇರಿ ವಿವಾದ ಯಾಕೆ ಪದೇಪದೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಪರಿಹಾರ ಯಾವಾಗ ಅನ್ನುವುದರ ಆಧಾರದ ಮೇಲೆ ನಮ್ಮ ಹೋರಾಟ ನಡೆಯುತ್ತದೆʼʼ ಎಂದು ಬೊಮ್ಮಾಯಿ ಹೇಳಿದರು.
ʻʻಕಾವೇರಿ ನದಿ ಹುಟ್ಟಿ ಅತಿ ಹೆಚ್ಚು ಹರಿಯುವುದು ನಮ್ಮ ರಾಜ್ಯದಲ್ಲಿ. ಕಡಿಮೆ ಕ್ಯಾಚ್‌ಮೆಂಟ್ ಏರಿಯಾ ಇದ್ದರೂ ಅತಿ ಹೆಚ್ಚು ನೀರು ಹರಿಯುತ್ತಿದೆ. ತಮಿಳುನಾಡಿಗೆ ಎರಡು ಮಾನ್ಸೂನ್‌ಗಳಿವೆ. ಅವರಿಗೆ ನೀರಿನ ಕೊರತೆಯಿಲ್ಲ. ಅವರು ಹೆಚ್ಚುವರಿ ನೀರು ಸಮುದ್ರಕ್ಕೆ ಬಿಡುತ್ತಾರೆ. ನಾವು ನೀರು ಉಳಿಸಿಕೊಳ್ಳಲು ನಾಲ್ಕು ಡ್ಯಾಮ್ ಕಟ್ಟಿದ್ದೇವೆ. ಅವರು ಕಾವೇರಿ ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನೇ ಮಾಡಲಿಲ್ಲ. ಕೇವಲ ಎರಡು ಡ್ಯಾಮ್ ಕಟ್ಟಿದ್ದಾರೆ. ಶತಮಾನಗಳಿಂದಲೂ ಕನ್ನಂಬಾಡಿ ಕಟ್ಟುವಾಗಲೇ ತಮಿಳು ನಾಡಿನ ವಿರೋಧ ಇತ್ತು. ಅವರ ಜೊತೆಗೆ ಮಾಡಿಕೊಂಡ ಒಪ್ಪಂದದಿಂದ ಈ ಪರಿಸ್ಥಿತಿ ಬಂದಿದೆʼʼ ಎಂದರು.
ಕಾವೇರಿ ನ್ಯಾಯಾಧಿಕರಣದಲ್ಲಿ ನಮ್ಮ ವಿರುದ್ಧ ಆದೇಶವಾಗಿರುವುದು ದುರಂತ. ಕಾವೇರಿ ನೀರು ಸಮಿತಿ (CMRC), ಕಾವೇರಿ ನೀರು ಪ್ರಾಧಿಕಾರ (CWMA) ಅಧಿಕಾರಿಗಳು ನ್ಯಾಯ ಮಂಡಳಿ ಆದೇಶವನ್ನು ಒಮ್ಮೆ ಓದಿ, ತಮಿಳುನಾಡು ಎಷ್ಟು ನಿರು ಬಳಕೆ ಮಾಡಬೇಕು ಯಾವ ಬೆಳೆ ಬೆಳೆಯಬೇಕು. ಕರ್ನಾಟಕವೂ ಯಾವ ಬೆಳೆ ಬೆಳೆಯಬೇಕು, ಎಷ್ಟು ನೀರು ಬಳಕೆ ಮಾಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರ ಇದನ್ನು ಬಲವಾಗಿ ವಿರೋಧಿಸಬೇಕಿತ್ತು. ತಮಿಳುನಾಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ನೀರಾವರಿ ಮಾಡಿದೆ. ಸುಮಾರು 67 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ . ರಾಜ್ಯ ಸರ್ಕಾರದ ಅಧಿಕಾರಿಗಳು ಇದನ್ನು ಯಾಕೆ ಹೇಳುತ್ತಿಲ್ಲ. ಎಲ್ಲಿಯವರೆಗೂ ಇದನ್ನು ಹೇಳುವುದಿಲ್ಲವೊ ಅಲ್ಲಿಯವರೆಗೂ ಅವರು ನಮ್ಮ ನೀರನ್ನು ಕೇಳುತ್ತಲೇ ಇರುತ್ತಾರೆ ಎಂದರು.
ನೀರು ಬಿಡುವುದಿಲ್ಲ ಎಂದಿದ್ದೆ ಎಂದ ಬೊಮ್ಮಾಯಿ
ʻʻ2012ರಲ್ಲಿ ಸುಪ್ರೀಂಕೋರ್ಟ್ 12 ಟಿಎಂಸಿ ಅಡಿ ನೀರು ಬಿಡುವಂತೆ ಹೇಳಿತ್ತು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೀರಾ ಇಲ್ಲಾ ನೀರು ಬಿಡುತ್ತಿರಾ ಎಂದು ಕೇಳಿದರು. ನಾನು ಆಗ ನೀರಾವರಿ ಸಚಿವನಾಗಿದ್ದೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೇನೆ, ಆದರೆ, ನೀರು ಬಿಡುವುದಿಲ್ಲ ಎಂದು ಹೇಳಿದೆ. ದೆಹಲಿಗೆ ತೆರಳಿ ನಮ್ಮ ವಕೀಲರನ್ನು ಭೇಟಿ ಮಾಡಿ, ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಹೇಳಲು ಹೇಳಿದೆ. ಅವರು ನೀರು ಬಿಟ್ಟರೆ ಮಾತ್ರ ಸುಪ್ರೀಂ ಕೋರ್ಟ್ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಮಾಜಿ ಅಡ್ವೋಕೇಟ್ ಉದಯ ಹೊಳ್ಳ ಅವರನ್ನು ಕರೆದು, ವಸ್ತು ಸ್ಥಿತಿ ಹೇಳಲು ಹೇಳಿದೆ, ಅವರು ವಾದ ಮಾಡುತ್ತೇನೆ ಎಂದಾಗ ನಮ್ಮ ವಕೀಲರು ತಾವೇ ವಾದ ಮಾಡುವುದಾಗಿ ಹೇಳಿ ಬಲವಾಗಿ ವಾದ ಮಾಡಿದರು. ಅದರ ಪರಿಣಾಮ ಕಡಿಮೆ ನೀರು ಬಿಡುವಂತಾಯಿತು. ಸುದೈವವಶಾತ್ ಮಳೆಯೂ ಆಯಿತು. ಸಮಸ್ಯೆ ಪರಿಹಾರವಾಯಿತುʼʼ ಎಂದು ಹೇಳಿದರು.
ಕನ್ನಂಬಾಡಿ ಅಣೆಕಟ್ಟಿನ ಲೀಕೇಜ್ ರಿಪೇರಿ ಮಾಡಿದ ತೃಪ್ತಿ
ʻʻನಾನು ನೀರಾವರಿ ಸಚಿವನಾಗಿದ್ದಾಗ ಲೀಕೇಜ್ ರಿಪೇರಿ ಮಾಡಲು ಮುಂದಾಗಿದ್ದೆ. ಆಗ ಎಂಜಿನಿಯರ್‌ಗಳು ಮಹಾರಾಜರು ಕಟ್ಟಿಸಿರುವ ಆಣೆಕಟ್ಟು ಮುಟ್ಟಲು ಕಷ್ಟ, ಏನಾದರೂ ಹೆಚ್ಚು ಕಡಿಮೆ ಆದರೆ, ನೀವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ನನಗೆ ಹೆದರಿಸಿದರು. ನಾನು ಒಬ್ಬ ಎಂಜಿನಿಯರ್ ಆಗಿ ಅದನ್ನು ಸುಮ್ಮನೇ ಒಪ್ಪಿಕೊಳ್ಳಲು ಮನಸಾಗಲಿಲ್ಲ. ನಾನೇ ಹೋಗಿ ರಿಪೇರಿ ಮಾಡಿಸಲು ಮುಂದಾದೆ. ಈಗ 18 ಗೆಟ್ ಲೀಕೇಜ್ ತಡೆಯಲಾಗಿದೆ. ಇನ್ನು ಐವತ್ತು ವರ್ಷ ಯಾವುದೇ ಸಮಸ್ಯೆ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ವಿಶ್ವೇಶ್ವರಯ್ಯ ಅವರು ಕಟ್ಟಿದ ಕಣ್ಣಂಬಾಡಿಗೆ ನನ್ನ ಸೇವೆಯೂ ಆಗಿರುವುದಕ್ಕೆ ತೃಪ್ತಿ ಇದೆʼʼ ಎಂದರು ಬಸವರಾಜ ಬೊಮ್ಮಾಯಿ.
ಸರ್ವ ಸಮ್ಮತ ಸಂಕಷ್ಟ ಸೂತ್ರ ರಚಿಸಲಿ
ರಾಜ್ಯ ಸರ್ಕಾರ ಕಾವೇರಿ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ತನ್ನ ಕಾನೂನು ತಜ್ಞರೊಂದಿಗೆ ಕುಳಿತು ಸಂಕಷ್ಟ ಸೂತ್ರ ಏನಿರಬೇಕು ಎಂದು ತೀರ್ಮಾನ ಮಾಡಿ, ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಅಭಿಪ್ರಾಯ ಪಡೆದು ಸಂಕಷ್ಟ ಸೂತ್ರ ರಚನೆ ಮಾಡಬೇಕು. ಸಂಕಷ್ಟ ಸೂತ್ರ ಸರ್ವ ಸಮ್ಮತವಾಗಿರಬೇಕು ಎಂದು ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ಎಡವುತ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ನೀರು ಕಡಿಮೆ ಬಿಡುತ್ತಿರುವುದೇ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಸುಪ್ರೀಂ ಕೊರ್ಟ್ ನಲ್ಲಿ ಮಧ್ಯಂತರ ಅರ್ಜಿ ಹಾಕಿದ್ದರೆ ನಮಗೆ ವಾಸ್ತವ ಸ್ಥಿತಿ ಹೇಳಲು ಹೆಚ್ಚು ಅವಕಾಶ ಇರುತ್ತದೆ. ರಾಜ್ಯ ಸರ್ಕಾರ ಮೊದಲು ಐಸಿಸಿ ಮೀಟಿಂಗ್ ಮಾಡಿ ರಾಜ್ಯದ ರೈತರ ಹೊಲಗಳಿಗೆ ನೀರು ಬಿಟ್ಟಿದ್ದರೆ ಈಗ ರಾಜ್ಯದ ರೈತರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆಗಸ್ಟ್ ನಲ್ಲಿ ಐಸಿಸಿ ಸಭೆ ನಡೆಸಿದ್ದರಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುವಂತೆ ಸೂಚನೆ ಬರುವಂತಾಗಿದೆ ಎಂದರು.
ಸಹಕರಿಸಲು ನಾವು ರೆಡಿ ನೀರು ಬಿಟ್ಟಾದ ಮೇಲೆ ಏನು ಚರ್ಚೆ: ಅಶೋಕ್ ಪ್ರಶ್ನೆ
ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಿದ್ಧರಿದ್ದೇವೆ. ನಮ್ಮ ಲೋಕಸಭಾ ಸದಸ್ಯರು ನೀರಾವರಿ ಸಚಿವರನ್ನ ಭೇಟಿ ಮಾಡಿದ್ದಾರೆ. ಆದರೆ, ಸರ್ಕಾರ ನೀರು ಬಿಟ್ಟಾದ ಮೇಲೆ ಸಭೆ ಕರೆಯುತ್ತದೆ. ಸಭೆಯಲ್ಲಿ ಯಾವುದೇ ವಿಚಾರ ಚರ್ಚೆ ಮಾಡುವುದಿಲ್ಲʼʼ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಆರ್. ಅಶೋಕ್ ಹೇಳಿದರು.
ʻʻಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ನೀರು ಬಿಟ್ಟಿದ್ದಾರೆ. ಕೇಳಿದರೆ ಲೀಕೇಜ್ ಹೋಗುತ್ತಿದೆ ಎನ್ನುತ್ತಾರೆ. ರಾಜ್ಯ ಸರ್ಕಾರದ ಮೇಲೆ ಜನರಿಗೆ ಭರವಸೆ ಹೋಗಿದೆ. ಯಾವ ಮುಲಾಜಿಗೆ ನೀರು ಬಿಡುತ್ತಿದ್ದಾರೆ,
ಜನರನ್ನು ವಂಚನೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆʼʼ ಎಂದು ಅಶೋಕ್ ಹೇಳಿದರು.
ʻʻಕಾವೇರಿ ಕರ್ನಾಟಕದ ಜೀವ ನದಿ. ಆದರೆ, ಕಾವೇರಿ ನಮ್ಮದಲ್ಲ ಸೌತ್ ಇಂಡಿಯಾದ್ದು ಎನ್ನುತ್ತಾರೆ.
ಹಾಗಾದ್ರೆ ಸ್ಟಾಲಿನ್ ನದಿ, ಪಳನಿಸ್ವಾಮಿ ನದಿ ಎಂದು ಹೆಸರು ಇಡಿʼʼ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: Cauvery Dispute : ಬಿಜೆಪಿ ರಾಜಕೀಯ ಬಿಟ್ಟು ಕೇಂದ್ರಕ್ಕೆ ಒತ್ತಡ ಹೇರಲಿ: ಡಿಕೆಶಿ, ದಾರಿ ತಪ್ಪಿಸೋದು ನಿಲ್ಲಿಸಲಿ: ಬೊಮ್ಮಾಯಿ