Site icon Vistara News

Cauvery Dispute : ಕರ್ನಾಟಕ ಪರ ವಾಲಿದ ಪ್ರಾಧಿಕಾರ; ಸಿಡಿದೆದ್ದ ತಮಿಳುನಾಡು; ನಾಳೆ ಸುಪ್ರೀಂ ವಿಚಾರಣೆ ಅನುಮಾನ

Cauvery water dispute

ನವ ದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority-CWMA) ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ (Affidavit to Supreme court) ಕರ್ನಾಟಕದ ಪರವಾದ ಅಂಶಗಳನ್ನು ಉಲ್ಲೇಖಿಸಿದೆ. ಇದರ ಬೆನ್ನಿಗೇ ತಮಿಳುನಾಡು (Tamilnadu objection) ಇದನ್ನು ಆಕ್ಷೇಪಿಸಿದೆ. ಇದರ ನಡುವೆ ಸುಪ್ರೀಂಕೋರ್ಟ್‌ನ ಕಾವೇರಿ ಪೀಠದಲ್ಲಿ ಸೆಪ್ಟೆಂಬರ್‌ 1ರಂದು ನಡೆಯಬೇಕಾಗಿರುವ ವಿಚಾರಣೆ (Cauvery Dispute) ನಡೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಬಿಡುಗಡೆ ವಿವಾದಕ್ಕೆ ಸಂಬಂಧಿಸಿ ಸ್ಥಾಪಿಸಲಾದ ಕಾವೇರಿ ಪೀಠದಲ್ಲಿ ಸೆಪ್ಟೆಂಬರ್‌ 1ರಂದು ವಿಚಾರಣೆಗೆ ದಿನ ನಿಗದಿಯಾಗಿದೆ. ಕರ್ನಾಟಕವು ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee-CWRC)ಯ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆಕ್ಷೇಪಿಸಿ ತಮಿಳುನಾಡು ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಕಾವೇರಿಗಾಗಿ ವಿಶೇಷ ಪೀಠವನ್ನು ಸ್ಥಾಪನೆ ಮಾಡಿ ಸೆ. 1ರಂದು ವಿಚಾರಣೆ ನಡೆಸಲು ದಿನ ನಿಗದಿ ಮಾಡಿತ್ತು.

ಅದರ ನಡುವೆಯೇ ಅದು ವಿಚಾರಣೆಗೆ ಮುನ್ನ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ- CWMA ಎರಡು ರಾಜ್ಯಗಳ ನೀರಿನ ಪರಿಸ್ಥಿತಿ, ನೀರು ಬಿಡುಗಡೆಯ ಸ್ಥಿತಿಯನ್ನು ಹೊತ್ತಿರುವ ಅಫಿಡವಿಟ್‌ ಸಲ್ಲಿಸುವಂತೆ ಕೋರಿತ್ತು. ಇದೀಗ ಕಾವೇರಿ ನದಿ ಪ್ರಾಧಿಕಾರ ಆಗಸ್ಟ್‌ 31ರಂದು ಅಫಿಡವಿಟ್‌ ಸಲ್ಲಿಸಿದೆ. ಅದರಲ್ಲಿ ಅದು ಕರ್ನಾಟಕ ಸರ್ಕಾರ ತೆಗೆದುಕೊಂಡ ನಿಲುವುಗಳ ಬಗ್ಗೆ ಪಾಸಿಟಿವ್‌ ಅಭಿಪ್ರಾಯವನ್ನು ಮಂಡಿಸಿದೆ.

ಅಫಿಡವಿಟ್‌ನಲ್ಲಿ ಕಾವೇರಿ ಪ್ರಾಧಿಕಾರ ಹೇಳಿದ್ದೇನು?

ಇತ್ತ ಸುಪ್ರೀಂಕೋರ್ಟ್‌ ವಿಚಾರಣೆಯ ಬಳಿಕ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೊಂದು ಸಭೆ ನಡೆಸಿ ದಿನಕ್ಕೆ 5000 ಕ್ಯೂಸೆಕ್‌ನ ಹಾಗೆ 15 ದಿನ ನೀರು ಬಿಡುವಂತೆ ಸೂಚಿಸಿತ್ತು. ಕರ್ನಾಟಕ ಎರಡು ದಿನಗಳಿಂದ ಈ ಆದೇಶವನ್ನು ಪಾಲಿಸುತ್ತಿದೆ. ಕಾವೇರಿ ಪ್ರಾಧಿಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ವಿಚಾರಗಳನ್ನು ಉಲ್ಲೇಖ ಮಾಡಲಾಗಿದೆ. ಜತೆಗೆ ಕರ್ನಾಟಕದಲ್ಲಿ ನೀರು ಕಡಿಮೆ ಇರುವುದು, ಮಳೆ ಇಲ್ಲದಿರುವ ಪರಿಸ್ಥಿತಿಯನ್ನು ಕೂಡಾ ಉಲ್ಲೇಖಿಸಲಾಗಿದೆ. ಇದು ಪ್ರಾಧಿಕಾರದ ಅಫಿಡವಿಟ್‌ ಕರ್ನಾಟಕದ ಪರವಾಗಿದೆ ಎಂಬಂತೆ ತೋರಿಸುತ್ತಿದೆ.

  1. ಕರ್ನಾಟಕವು ಪ್ರಾಧಿಕಾರ ನೀಡಿದ ಆದೇಶವನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದೆ. CWMA ಹೇಳಿದಷ್ಟು ಕಾವೇರಿ ನೀರು ಬಿಡುಗಡೆ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕಾವೇರಿ ಆಯೋಗ ವರದಿ ಸಲ್ಲಿಸಿದೆ.
  2. ಆಗಸ್ಟ್ 11 ರಂದು ನಡೆದ ಕಾವೇರಿ ನೀರು ನಿರ್ವಹಣಾ ಆಯೋಗದ ಸಭೆಯಲ್ಲಿ ನೀಡಿದ ಆದೇಶವನ್ನು ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ಜಾರಿಗೊಳಿಸಿದೆ.
  3. ಆ.28ರಂದು ನಡೆದ ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯಲ್ಲಿ ಆ.29ರಿಂದ ಸೆ.12ರವರೆಗೆ 15 ದಿನಗಳ ಕಾಲ ಸೆಕೆಂಡಿಗೆ 5000 ಕ್ಯೂಬಿಕ್ ಅಡಿಯಂತೆ ಕಾವೇರಿಯಿಂದ ನೀರು ಬಿಡುವಂತೆ ಆದೇಶ ಹೊರಡಿಸಲಾಗಿತ್ತು. ಅದನ್ನೂ ಪಾಲಿಸಿದೆ.
  4. ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದ ನಂತರ ಅ.12 ರಿಂದ 27 ರವರೆಗೆ ತಮಿಳುನಾಡಿಗೆ 154281 ಘನ ಮೀಟರ್ ನೀರನ್ನು (ಅಂದರೆ 13.328 ಟಿಎಂಸಿ ನೀರು) ಬಿಡುಗಡೆ ಮಾಡಿದೆ.
  5. ಪ್ರಸಕ್ತ ನೀರಾವರಿ ವರ್ಷದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಗೊತ್ತುಪಡಿಸಿದ ಜಲಾಶಯಗಳಲ್ಲಿ ಸಂಚಿತ ನೀರಿನ ಒಳಹರಿವು 51.22% ಕೊರತೆಯಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
  6. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ 2023-24 ರ ಸಾಲಿನಲ್ಲಿ ಸಮರ್ಪಕ ನೀರಿತ್ತು. ಅದನ್ನು ಮಳೆ ಕೊರತೆ ವರ್ಷದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

ಕಾವೇರಿ ಪ್ರಾಧಿಕಾರದ ವರದಿಗೆ ತಮಿಳುನಾಡು ಆಕ್ಷೇಪ

ಇತ್ತ ಕಾವೇರಿ ನದಿ ಪ್ರಾಧಿಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸುತ್ತಿದ್ದಂತೆಯೇ ಅತ್ತ ತಮಿಳುನಾಡು ಸಿಡಿದೆದ್ದಿದೆ. ಪ್ರಾಧಿಕಾರದ ವರದಿ ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮಳೆ ಕೊರತೆ ವರ್ಷಗಳಲ್ಲಿ ಪಾಲಿಸಬೇಕಾದ ವೈಜ್ಞಾನಿಕ ವಿಧಾನವನ್ನು ಕಾವೇರಿ ಪ್ರಾಧಿಕಾರ ಸಿದ್ಧಪಡಿಸಿಲ್ಲ. ವೈಜ್ಞಾನಿಕ ವಿಧಾನದ ಸೂತ್ರವನ್ನು ಸಿದ್ದಪಡಿಸಲು ಸುಪ್ರೀಂ ಕೋರ್ಟ್ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಅದು ಸುಪ್ರೀಂಕೋರ್ಟನ್ನು ಕೋರಿದೆ.

ಮಳೆ ಕೊರತೆ ವರ್ಷ ಎಂದು ತೀರ್ಮಾನಿಸಿ ತಮಿಳುನಾಡಿನ ಪಾಲು ಹಂಚಿಕೆ ಮಾಡುವಾಗ‌ ಪಾರದರ್ಶಕತೆ, ನ್ಯಾಯಯುತವಾಗಿ ಮಾಡುವಂತೆ cwmaಗೆ ನಿರ್ದೇಶನ ನೀಡಬೇಕು. 10 ದಿನಕ್ಕೊಮ್ಮೆ ನೀರು ಹಂಚಿಕೆ ಕುರಿತು ಸೂಕ್ತ ನಿರ್ದೇಶನ ನೀಡುತ್ತಿರಬೇಕು. ನಮ್ಮ ಉಳಿಕೆಯ ಪಾಲು 8.98 ಟಿಎಂಸಿ ನೀರು ಬಿಡುವಂತೆ ಆದೇಶಿಸಬೇಕು ಎಂದು ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮುಂದೆ ತಮಿಳುನಾಡು ನಿವೇದಿಸಿಕೊಂಡಿದೆ.

ದಿಲ್ಲಿಯಲ್ಲಿ ಸಭೆ ನಡೆಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌

Cauvery water dispute

ಸುಪ್ರೀಂಕೋರ್ಟ್‌ ವಿಚಾರಣೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ನೀರಾವರಿ ತಜ್ಞರ ಜತೆ ಮಾತುಕತೆ ನಡೆಸಿ ಸಮರ್ಥ ವಾದ ಮಂಡಿಸುವುದಕ್ಕಾಗಿ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದಿಲ್ಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ರಾಜ್ಯದ ಪರ ವಕೀಲ ಮೋಹನ್ ಕಾತರಕಿ ಸೇರಿ ಹಲವರ ಜತೆ ಸಭೆ ನಡೆಸಿದರು. ಅವರ ಜತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಭೆಯಲ್ಲಿ ಭಾಗಿಯಾಗಿದ್ದರು.

ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ದಿಲ್ಲಿಯ ಕಾನೂನು ತಂಡ ಮತ್ತು ಟೀಮ್‌ ಜತೆ ಮಾತುಕತೆ ನಡೆಸಿದ್ದೇನೆ. ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ನಮ್ಮ ಅಧಿಕಾರಿಗಳು ದೊಡ್ಡ ಹೋರಾಟ ಮಾಡಿದ್ದಾರೆ. ತಮಿಳುನಾಡು ಆರಂಭದಲ್ಲಿ ದಿನಕ್ಕೆ 24 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಕೇಳಿತ್ತು. ಈಗ ಅದು ದಿನಕ್ಕೆ ಐದು ಸಾವಿರ ಕ್ಯೂಸೆಕ್‌ಗೆ ಇಳಿಯುವುದಕ್ಕೆ ಅಧಿಕಾರಿಗಳ ಹೋರಾಟವೇ ಕಾರಣ ಎಂದು ವಿವರಿಸಿದರು.

ನಮಗೆ ರೈತರ ಹಿತ ಕಾಪಾಡುವುದು ತುಂಬ ಮುಖ್ಯ. ಅದಕ್ಕೆ ಪೂರಕವಾಗಿ ಸಾಧಕ ಬಾಧಕ ಚರ್ಚೆ ಮಾಡಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಗೆ ಸಂಬಂಧಿಸಿ ಜಾಗರೂಕತೆ ವಹಿಸಿದ್ದೇವೆ. ಹಿರಿಯ ವಕೀಲ ಶ್ಯಾಮ್ ದಿವಾನ್ ಅವರನ್ನ ಭೇಟಿ ಮಾಡಿ ಅವರ ಸಲಹೆ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಹೇಳಿದರು ಶಿವಕುಮಾರ್‌.

ನೀರಿನ ಸಮಸ್ಯೆಯನ್ನು ವಾಸ್ತವಾಂಶದ ನೆಲೆಯಲ್ಲಿ ನೋಡಬೇಕು. ಸಮಸ್ಯೆಗೆ ಮೇಕೆದಾಟು ಡ್ಯಾಮ್ ಒಂದು ಪರಿಹಾರ. ಇದರಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ಅದನ್ನು ಕೋರ್ಟ್ ಗೆ ಮನವರಿಕೆ ಮಾಡಬೇಕು. ಎಲ್ಲ ವಿಚಾರಗಳನ್ನು ವಾಸ್ತವಾಂಶ ಕಣ್ಣಲ್ಲಿ ಬಂದು ನೋಡಬೇಕು. ತಜ್ಞರೂ ಬರಬೇಕು, ಅದರ ಬಗ್ಗೆ ಕಾವೇರಿ ಸಮಿತಿ ಮತ್ತು ಪ್ರಾಧಿಕಾರದವರು ಬರಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಇದನ್ನೂ ಓದಿ: Cauvery Dispute : ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ KRS ಮಟ್ಟ; ಹೀಗೇ ಆದ್ರೆ ಡ್ಯಾಂ ಫುಲ್‌ ಖಾಲಿ

ನಾಳೆ ಅರ್ಜಿ ವಿಚಾರಣೆ ಅನುಮಾನ?

ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ಶುಕ್ರವಾರ 370ನೇ ವಿಧಿ ಕುರಿತ ವಿಚಾರಣೆ ನಡೆಯಲಿದೆ. ಕಾವೇರಿ ಪೀಠದಲ್ಲಿರುವ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರು ಸಾಂವಿಧಾನಿಕ ಪೀಠದಲ್ಲೂ ಇದ್ದಾರೆ. ಹೀಗಾಗಿ ಸೆ. 1ಕ್ಕೆ ನಿಗದಿಯಾದ ಕಾವೇರಿ ನೀರು ಅರ್ಜಿ ವಿಚಾರಣೆ ಅನುಮಾನ ಎಂದು ಹೇಳಲಾಗುತ್ತಿದೆ. ಮುಂದಿನ ಸೋಮವಾರಕ್ಕೆ ಇದು ಮುಂದೂಡಲ್ಪಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Exit mobile version