Site icon Vistara News

Cauvery Dispute : ಕಾವೇರಿ ಅನ್ಯಾಯಕ್ಕೆ ಸಿಡಿದ ಅನ್ನದಾತರು, CWMA ಆದೇಶದ ವಿರುದ್ಧ ತೀರದಲ್ಲಿ ಪ್ರತಿಭಟನೆ

Farmers protest at Mandya

ಮಂಡ್ಯ: ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Commitee- CWRC) ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ರಾಜ್ಯಕ್ಕೆ ಭಾರಿ ಅನ್ಯಾಯವನ್ನು ಮಾಡಿದೆ. ಇದರ ವಿರುದ್ಧ ಮಂಡ್ಯದ ರೈತರು ಸಿಡಿದೆದ್ದಿದ್ದಾರೆ.

ಸೋಮವಾರ ದಿಲ್ಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority- CWMA)ದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ನಮ್ಮ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಗೋಗರೆದರೂ ಅದನ್ನು ಕೇಳಿಸಿಕೊಳ್ಳದೆ ನಿರ್ವಹಣಾ ಸಮಿತಿಯ ಆದೇಶ ಸರಿಯಾಗಿದೆ ಎಂದು ಹೇಳಿದ್ದು ರೈತರನ್ನು ಕೆರಳಿಸಿದೆ.

ಪ್ರಾಧಿಕಾರದ ಆದೇಶ ಬಿಡುಗಡೆಯಾಗುತ್ತಿದ್ದಂತೆಯೇ ಮಂಡ್ಯದಲ್ಲಿ ಮತ್ತೆ ಭುಗಿಲೆದ್ದ ಕಾವೇರಿ ಹೋರಾಟ ಭುಗಿಲೆದ್ದಿದ್ದು, ಪ್ರಾಧಿಕಾರದ ಆದೇಶಕ್ಕೆ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ಶ್ರೀರಂಗಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದ ಕಾವೇರಿ ನದಿ ಬಳಿ ಪ್ರತಿಭಟನೆ ನಡೆಸಿದ ರೈತರು ಈ ದೇಶದಲ್ಲಿ ಕಾನೂನೇ ಇಲ್ವಾ? ಕೆಆರ್‌ಎಸ್‌ನಲ್ಲಿ ನೀರು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುವ ವ್ಯವಸ್ಥೆಯೂ ಇಲ್ಲವೇ ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ಭೂಮಿತಾಯಿ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ʻʻಕಾವೇರಿ ನಿರ್ವಾಹಣಾ ಪ್ರಾಧಿಕಾರ ಕೊಟ್ಟಿರುವ ತಿರ್ಮಾನ ನೋಡಿದರೆ ಕಾನೂನು ಇಷ್ಟೊಂದು ದುರ್ಬಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ನಮಗೆ ಕೃಷಿಗಲ್ಲ, ಕುಡಿಯಲು ಕೂಡಾ ನೀರಿಲ್ಲ. ನೀರು ಬಿಟ್ಟು ಬಿಟ್ಟು ಎದೆಯ ಮೇಲೆ ಕಲ್ಲು ಹಾಕೊಂಡಿದ್ದಾರೆʼʼ ಎಂದು ಹೇಳಿದ ರೈತರು, ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಾದ ಜವಾಬ್ದಾರಿ ಇದೆ. ನೀರಿನ ಕೊರತೆ ಬಗ್ಗೆ ಮನದಟ್ಟು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು. ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದೆ ಎಲ್ಲಾ ನಾಯಕರು ಒಟ್ಟಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂ ದು ಹೇಳಿದರು. ಇಲ್ಲದಿದ್ದರೆ ಉಗ್ರ ಚಳುವಳಿ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Cauvery water dispute : ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಡಲು CWMA ಆದೇಶ!

ಆಘಾತಕಾರಿ ತೀರ್ಪು ಎಂದ ಸಂಸದೆ ಸುಮಲತಾ

ಮಂಡ್ಯ ಮತ್ತು ಕರ್ನಾಟಕದ ರೈತರು ಬರ ಕಾರಣದಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮಂಡ್ಯ ರೈತರ ಜೀವನಾಡಿ ಆಗಿರುವ ಕಾವೇರಿಯಿಂದ ನಿರಂತರವಾಗಿ ತಮಿಳು ನಾಡಿಗೆ ನೀರು ಬಿಡಲಾಗುತ್ತಿದೆ. ಮಂಡ್ಯ ಭಾಗದ ರೈತರ ಪರಿಸ್ಥಿತಿ ಚಿಂತಾಜನಕವಾಗಿರುವಾಗ ಮತ್ತೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ಅವರು ಟ್ವೀಟ್‌ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ರೈತರ ಗದ್ದೆಗಳಿಗೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈ ಎಲ್ಲ ಸಂಗತಿಗಳನ್ನು ದೆಹಲಿಯಲ್ಲಿ ಸೋಮವಾರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ವಿವರಿಸಿದ್ದೇನೆ. ಆಯಾ ರಾಜ್ಯಗಳ ಜಂಟಿ ಸಮಿತಿಯನ್ನು ರಚಿಸುವುದಾಗಿ ಮತ್ತು ಮುಂದಿನ ವಾರದಲ್ಲೇ ಸಮೀಕ್ಷೆ ನಡೆಸುವುದಾಗಿ, ನಮ್ಮ ರೈತರ ಪರವಾಗಿ ನಿಂತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಭರವಸೆ ಈಡೇರುತ್ತದೆ ಎನ್ನುವ ವಿಶ್ವಾಸ ನನ್ನದು ಎಂದಿದ್ದಾರೆ ಸುಮಲತಾ>

ರಾಜ್ಯ ಸರಕಾರ ಕೂಡ ಮಾನ್ಯ ಕೇಂದ್ರ ಸಚಿವರನ್ನು ಮತ್ತು ಸಂಬಂಧಿಸಿದ ಪ್ರಾಧಿಕಾರದ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ, ಭೀಕರವಾಗಿರುವ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿ. ತಮಿಳು ನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ನಾವೆಲ್ಲರೂ ನಮ್ಮ ರೈತರ ಪರವಾಗಿ ನಿಲ್ಲೋಣ ಎಂದು ಸುಮಲತಾ ಮನವಿ ಮಾಡಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಈಗ ನೀರೆಷ್ಟಿದೆ?

ಗರಿಷ್ಠಮಟ್ಟ 124.80 ಅಡಿ
ಇಂದಿನ ಮಟ್ಟ 96.86 ಅಡಿ
ಗರಿಷ್ಠ ಸಾಮರ್ಥ್ಯ 49.452 tmc
ಇಂದಿನ ಸಂಗ್ರಹ 20. 448 tmc.
ಒಳ ಹರಿವು 4176 ಕ್ಯುಸೆಕ್
ಹೊರ ಹರಿವು 4730 ಕ್ಯುಸೆಕ್

Exit mobile version