ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Disputes Tribunal) ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವ ವಿಚಾರದಲ್ಲಿ (Cauvery dispute) ರೈತರ ಪ್ರತಿಭಟನೆ ದಿನೇ ದಿನೆ ಬಿಗಡಾಯಿಸುತ್ತಿದೆ. ತಮಿಳುನಾಡಿನ ಒತ್ತಡ, ಪ್ರಾಧಿಕಾರದ ಆದೇಶ ಹಾಗೂ ಅದಕ್ಕೆ ಮಣಿದಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ರೈತರು ಇಂದೂ ಪ್ರತಿಭಟನೆ ನಡೆಸಲಿದ್ದಾರೆ.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಇಂದು ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಇಂದು ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಬೆಳಗ್ಗೆ 10 ಗಂಟೆ ವೇಳೆಗೆ ಪ್ರತಿಭಟನಾ ಧರಣಿಗೆ ಸಮಿತಿ ಕಡೆ ನೀಡಿದೆ. ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಎಲ್ಲರ ಜೊತೆಗೆ ಚರ್ಚಿಸಿ ಮುಂದಿನ ಹೋರಾಟದ ರೂಪು ರೇಷೆಗಳ ಬಗೆಗೆ ರೈತ ಹಿತ ರಕ್ಷಣಾ ಸಮಿತಿ ಪ್ರಕಟ ಮಾಡಲಿದೆ.
ದರ್ಶನ್ ಪುಟ್ಟಣ್ಣಯ್ಯ ಧರಣಿ
ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಕೆಆರ್‌ಎಸ್‌ನ ಬೃಂದಾವನದ ಬಳಿ ಶಾಮಿಯಾನ ಹಾಕಿ ರೈತರ ಜೊತೆಗೆ ದರ್ಶನ್ ಪುಟ್ಟಣ್ಣಯ್ಯ ಧರಣಿ ಆರಂಭಿಸಿದ್ದಾರೆ. ಪ್ರಾಧಿಕಾರದ ಆದೇಶದಂತೆ ಕಳೆದ ರಾತ್ರಿಯಿಂದಲೇ ರಾಜ್ಯ ಸರ್ಕಾರ ನೀರು ಬಿಟ್ಟಿದೆ. ಕೆಆರ್‌ಎಸ್ ಡ್ಯಾಂನ 80 ಪ್ಲಸ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಶಾಸಕ ದರ್ಶನ್ ಪುಟ್ಟಣಯ್ಯ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಇಂದೂ ಸಹ ರೈತರ ಜೊತೆಗೆ ಕೆಆರ್‌ಎಸ್‌ನಲ್ಲಿ ಧರಣಿ ಮುಂದುವರೆಸಲಿದ್ದಾರೆ.
ಅರೆ ಬೆತ್ತಲೆ ಮೆರವಣಿಗೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಇಂದು ಶ್ರೀರಂಗಪಟ್ಟಣದಲ್ಲಿ ರೈತರಿಂದ ಅರೆಬೆತ್ತಲೆ ಮೆರವಣಿಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದಿಂದ ತಾಲೂಕು ಕಚೇರಿವರೆಗೆ ರೈತರು ಅರೆ ಬೆತ್ತಲೆ ಮೆರವಣಿಗೆ ನಡೆಸಲಿದ್ದಾರೆ. ಶ್ರೀರಂಗಪಟ್ಟಣದ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಇದು ನಡೆಯುತ್ತಿದೆ.
ಇದನ್ನೂ ಓದಿ: Cauvery Dispute : ಕಾವೇರಿ ನದಿ ಪ್ರಾಧಿಕಾರ ಬಿಡಲು ಹೇಳಿದಷ್ಟು ನೀರಿದೆಯಾ ನಮ್ಮ KRSನಲ್ಲಿ? ಬಿಟ್ರೆ ಏನಾಗುತ್ತದೆ?