ಹೊಸದಿಲ್ಲಿ: ಬಿಗಡಾಯಿಸಿರುವ ಕಾವೇರಿ ಬಿಕ್ಕಟ್ಟಿನ (Cauvery Dispute) ನಿವಾರಣೆಗೆ ದಾರಿ ಹುಡುಕಲು ರಾಷ್ಟ್ರ ರಾಜಧಾನಿಯಲ್ಲಿ ಇಂದು ರಾಜ್ಯ ಸರ್ಕಾರ ಸರ್ವಪಕ್ಷಗಳ ಸಂಸದರ ಹಾಗೂ ರಾಜ್ಯ ಸಚಿವ ಸಂಪುಟ ಸದಸ್ಯರ ಸಭೆಯನ್ನು ಕರೆದಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳು ಈ ಮಹತ್ವದ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.
ನಮಗೇ ಕುಡಿಯಲು ನೀರಿಲ್ಲ, ಇನ್ನು ತಮಿಳುನಾಡಿಗೆ ಹೇಗೆ ನೀರು ಬಿಡೋದು ಅಂತ ಸರ್ಕಾರ ಹೇಳುತ್ತಲೇ ಇದ್ದರೂ ಸಹ ಕಳೆದ 3 CWMA ಸಭೆಯಲ್ಲೂ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸಭೆ ಕರೆದಿದ್ದು, ಬ್ರೇಕ್‌ಫಾಸ್ಟ್‌ನೊಂದಿಗೆ ಸಭೆ ಆರಂಭವಾಯಿತು. ಮುಂದಿನ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
CWMA ಆದೇಶ ಪರಿಪಾಲನೆ ಮಾಡಬೇಕೋ, ಅಥವಾ ಆದೇಶ ಧಿಕ್ಕರಿಸುವುದೋ, ಅಥವಾ ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಮೆಲ್ಮನವಿ ಸಲ್ಲಿಸುವುದೋ ಎಂಬ ಬಗ್ಗೆ ಪ್ರಮುಖವಾಗಿ ಸಭೆಯಲ್ಲಿ ಚರ್ಚೆಯಾಗಲಿದೆ. ಈ ವಿಚಾರವಾಗಿ ಪ್ರಧಾನಿ ಮೋದಿ ಭೇಟಿ ಮಾಡಬಹುದೇ ಅಥವಾ ಜಲಶಕ್ತಿ ಸಚಿವರಿಗೆ ಮನವಿ ಮಾಡುವುದೇ ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾನೂನು ತಜ್ಞರೊಂದಿಗೂ ಸಹ ಸಿಎಂ, ಡಿಸಿಎಂ ಹಾಗೂ ಸಚಿವರು ಸಭೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಸಭೆ ನಡೆಸುವ ಮೂಲಕ ರಾಜ್ಯದ ಶಕ್ತಿ ಪ್ರದರ್ಶನಕ್ಕೆ ಸರ್ಕಾರ ಮುಂದಾಗಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಸಂಬಂಧ ರಾಜ್ಯದ ಒಗ್ಗಟ್ಟು ಪ್ರದರ್ಶನಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಸಚಿವರ ಜತೆ ಸಭೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ತಮಿಳುನಾಡು ಸಚಿವರು ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಸಹ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ರಾಜ್ಯ ರೈತರ ಹಿತವೇ ನಮಗೆ ಮುಖ್ಯ ಎಂಬ ರೀತಿಯಲ್ಲಿ ಸಕಲ ಪ್ರಯತ್ನ ನಡೆಸುತ್ತಿದೆ.
ದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂದು ಸಂಸದರ ಜೊತೆ ಸಭೆ ಕರೆಯಲಾಗಿದೆ. ಎಲ್ಲರೂ ಪಕ್ಷ ಭೇದ ಮರೆತು ಸಹಕಾರ ನೀಡುತ್ತಿದ್ದಾರೆ. ಸಭೆಯಲ್ಲಿ ಎಲ್ಲಾ ಸಂಸದರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಕೆಲವು ಹಿರಿಯ ಸಂಸದರು ಬಿಟ್ಟು ಎಲ್ಲರೂ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರನ್ನೂ ಸಭೆಗೆ ಕರೆಯಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನೂ ಭೇಟಿ ಮಾಡಿ ಮಾತನಾಡಿದ್ದೇನೆ. ಇಂದು ಯಾರೆಲ್ಲ ಭೇಟಿಗೆ ಅವಕಾಶ ನೀಡುತ್ತಾರೀ ಅವರನ್ನು ಭೇಟಿ ಮಾಡುತ್ತೇವೆ. ಇಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಅವಕಾಶ ಕೇಳಿದ್ದೇವೆ. ರಾಜ್ಯದ ಹಿತಾಸಕ್ತಿ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲೂ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Cauvery Dispute: ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದರೆ, ಖರ್ಗೆ ಮೌನವಾಗಿದ್ದರು ಎಂದ ಎಚ್‌ಡಿಕೆ
ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಕಾವೇರಿ ಸಭೆ ಕರೆಯಲಾಗಿದೆ. ಮುಂಜಾನೆ ಬ್ರೇಕ್‌ಫಾಸ್ಟ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹೆಚ್ಚಿನ ನಾಯಕರು ಭಾಗವಹಿಸಿದ್ದರು.
ಯಾರೆಲ್ಲಾ ಭಾಗವಹಿಸಿದ್ದಾರೆ?
ಗದ್ದಿಗೌಡರ ಪಿ.ಸಿ
ಪಿ.ಸಿ. ಮೋಹನ್
ಡಿ ವಿ ಸದಾನಂದ ಗೌಡ
ಡಿ ಕೆ ಸುರೇಶ
ತೇಜಸ್ವಿ ಸೂರ್ಯ
ಮಂಗಳಾ ಸುರೇಶ ಅಂಗಡಿ
ವೈ.ದೇವೇಂದ್ರಪ್ಪ
ಭಗವಂತ ಖೂಬಾ
ರಮೇಶ ಜಿಗಜಿಣಗಿ
ಬಿ.ಎನ್. ಬಚ್ಚೆಗೌಡ
ಅಣ್ಣಾಸಾಹೇಬ ಜೊಲ್ಲೆ
ಎ.ನಾರಾಯಣಸ್ವಾಮಿ
ನಳಿನ್ ಕುಮಾರ್ ಕಟೀಲ್
ಜಿ ಎಂ ಸಿದ್ದೇಶ್ವರ
ಪ್ರಲ್ಹಾದ್ ಜೋಶಿ
ಡಾ.ಉಮೇಶ್ ಜಿ.ಜಾಧವ್
ಶಿವಕುಮಾರ ಉದಾಸಿ
ಎಸ್.ಮುನಿಸ್ವಾಮಿ
ಕರಡಿ ಸಂಗಣ್ಣ
ಸುಮಲತಾ ಅಂಬರೀಶ್
ಪ್ರತಾಪ್ ಸಿಂಹ
ರಾಜಾ ಅಮರೇಶ್ವರ ನಾಯ್ಕ್
ಬಿ.ವೈ. ರಾಘವೇಂದ್ರ
ಜಿ ಎಸ್ ಬಸವರಾಜ್
ಶೋಭಾ ಕರಂದ್ಲಾಜೆ
ಪ್ರಜ್ವಲ್ ರೇವಣ್ಣ
ರಾಜೀವ್ ಚಂದ್ರಶೇಖರ್
ಈರಣ್ಣ ಕಡಾಡಿ
ಎಲ್ ಹನುಮಂತಯ್ಯ
ಜಗ್ಗೇಶ್
ವೀರೇಂದ್ರ ಹೆಗ್ಗಡೆ
ಲೆಹರ್ ಸಿಂಗ್
ನಾಸೀರ್ ಹುಸೇನ್
ಕೆ ನಾರಾಯಣ
ಯಾರೆಲ್ಲಾ ಗೈರುಹಾಜರಿ?
ಮಲ್ಲಿಕಾರ್ಜುನ ಖರ್ಗೆ
ಹೆಚ್.ಡಿ ದೇವೆಗೌಡ
ನಿರ್ಮಲಾ ಸೀತಾರಾಮನ್
ಶ್ರೀನಿವಾಸ್ ಪ್ರಸಾದ್
ಅನಂತ್ ಕುಮಾರ್ ಹೆಗಡೆ