Site icon Vistara News

Cauvery Dispute : ಮೋದಿ ಮಧ್ಯಪ್ರವೇಶಕ್ಕೆ ಮನವಿ, CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಸಿಎಂ ಸಿದ್ದರಾಮಯ್ಯ

Siddaramaiah Press meet at delhi

ಬೆಂಗಳೂರು: ತಮಿಳುನಾಡಿಗೆ ನೀರು ಬಿಡಬೇಕು (Cauvery Dispute) ಎನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority- CWMA) ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಕಟಿಸಿದರು. ಇದೇವೇಳೆ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯಪ್ರವೇಶ ಮಾಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ದೆಹಲಿಯಲ್ಲಿ ನಡೆಸಿದ ಸರ್ವ ಪಕ್ಷ ಸಭೆ ನಾಯಕರು, ಕೇಂದ್ರ ಸಚಿವರು ಮತ್ತು ಲೋಕಸಭೆ, ರಾಜ್ಯಸಭೆ ಸದಸ್ಯರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾವೇರಿ ನೀರು ನಿಯಂತ್ರಣ ಸಮಿತಿಯು ಕಳೆದ ಸೆಪ್ಟೆಂಬರ್‌ 13ರಂದು ಪ್ರತಿ ದಿನವೂ ತಮಿಳುನಾಡಿಗೆ 5000 ಕ್ಯೂಸೆಕ್‌ ನೀರು ಬಿಡುವಂತೆ ನೀಡಿದ ಆದೇಶವನ್ನು ಸೆ. 18ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿತ್ತು. ಕಾವೇರಿ ವಿವಾದಕ್ಕೆ ಸಂಬಂಧಿಸಿ ಮಹತ್ವದ ವಿಚಾರಣೆ ನಾಳೆ (ಸೆ. 21ರಂದು) ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಲಿದೆ.

ಸಂಜೆ ಜಲಸಂಪನ್ಮೂಲ ಸಚಿವರ ಜತೆ ಸಭೆ

ಸಂಜೆ ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವರ ಜತೆ ಸಭೆ ನಡೆಸಲಿದ್ದೇವೆ. ಅವರಿಗೆ ವಿಷಯದ ಮನವರಿಕೆ ಮಾಡುತ್ತೇವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಎರಡೂ ರಾಜ್ಯದವರನ್ನು ಕರೆದು ಅಹವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ತಧಾನಿಯವರಿಗೆ ಇದೆ. ಹೀಗಾಗಿ ನಾವು ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಸಭೆ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಇತರ ಅಂಶಗಳು

  1. ನಿರ್ಮಲಾ ಸೀತಾರಾಮನ್ ಒಬ್ಬರನ್ನು ಹೊರತುಪಡಿಸಿ ರಾಜ್ಯದಿಂದ ಆಯ್ಕೆಯಾದ ಎಲ್ಲಾ ಸಂಸದರು, ಕೇಂದ್ರ ಸಚಿವರು ಸಭೆಯಲ್ಲಿ ಹಾಜರಿದ್ದರು. ನಿರ್ಮಲಾ ಸೀತಾರಾಮನ್ ಅವರು ಅನ್ಯಕಾರ್ಯ ನಿಮಿತ್ತ ಭಾಗವಹಿಸಲು ಸಾಧ್ಯವಾಗಿಲ್ಲ.
  2. ಈಗಾಗಲೇ ರಾಜ್ಯದಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಿದ್ದೇವೆ. 123 ವರ್ಷಗಳಲ್ಲೇ ಆಗಸ್ಟ್ ತಿಂಗಳಿನಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ.
  3. ವಾಡಿಕೆಗಿಂತ ಅತಿ ಕಡಿಮೆ ಮಳೆ ಸಂಕಷ್ಟ ಹೆಚ್ಚಲು ಕಾರಣ. 177.2 TMC ನೀರು ಸಾಮಾನ್ಯ ವರ್ಷದಲ್ಲಿ, ಮಳೆ ಚೆನ್ನಾಗಿದ್ದಾಗ ನೀರು ಬಿಡಬೇಕು ಎಂದು ಹೇಳಿದೆ. ಆದರೆ ಇಂಥಾ ಸಂಕಷ್ಟದ ಸಂದರ್ಭದಲ್ಲಿ ಎಷ್ಡು ನೀರು ಬಿಡಬೇಕು ಎನ್ನುವ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿದೆ.
  4. ನಮಗೆ ಕುಡಿಯುವ ನೀರು, ಬೆಳೆ ರಕ್ಷಣೆ, ಕೈಗಾರಿಕೆಗೂ ನೀರಿಲ್ಲ. ಹೀಗಾಗಿ ನಾವು ಬಹಳ ಕಷ್ಟದಲ್ಲಿದ್ದೇವೆ. CWMA, CWRA ಮುಂದೆ ಸಮರ್ಥವಾಗಿ ನಮ್ಮ ವಾಸ್ತವ ಪರಿಸ್ಥಿತಿಯನ್ನು ಮಂಡಿಸಿದ್ದೇವೆ.
  5. ತಮಿಳುನಾಡು ವಾದ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ನಮ್ಮ ತಕರಾರು ಮಂಡಿಸಿದ್ದೇವೆ. ಒಟ್ಟು ಮೂರು ಬಾರಿ ಸರ್ವ ಪಕ್ಷ ಸಭೆ ನಡೆಸಿದ್ದೇವೆ. 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿಲ್ಲ ಎಂದು CWMA ಮುಂದೆಯೂ ಮನವಿ ಸಲ್ಲಿಸಲಿದ್ದೇವೆ.
  6. 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎನ್ನುವ ಆದೇಶ ಬಂದಾಗ, 5 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಅಂದಾಗೆಲ್ಲಾ ಒಟ್ಟು ಮೂರು ಬಾರಿ ನಾವು ಸರ್ವ ಪಕ್ಷ ಸಭೆ ಕರೆದಿದ್ದೇವೆ.

ಇದನ್ನು ಓದಿ: Cauvery Dispute : ಸಂಸದರ ಸಭೆಯಲ್ಲಿ ಸಿದ್ದರಾಮಯ್ಯ- ಪ್ರಹ್ಲಾದ್‌ ಜೋಶಿ ಜಟಾಪಟಿ; ಮೋದಿಯನ್ನು ಎಳೆಯಬೇಡಿ ಎಂದ ಜೋಶಿ

ಮೋದಿ ಮಧ್ಯಪ್ರವೇಶ ಬೇಡಿಕೆ, ನೀರು ಬಿಟ್ಟಿದ್ದಕ್ಕೆ ಬಿಜೆಪಿ ಸಂಸದರ ಆಕ್ಷೇಪ

ಅದಕ್ಕಿಂತ ಮೊದಲು ನಡೆದ ಸಂಸದರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಪದೇಪದೆ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹಿಸುವುದನ್ನು ಆಕ್ಷೇಪಿಸಲಾಯಿತು. ಜತೆಗೆ ಆರಂಭದಲ್ಲೇ ತೀರ್ಪುಗಳನ್ನು ಆಕ್ಷೇಪಿಸದೆ, ಕೇಳಿದಾಗಲೆಲ್ಲ ನೀರು ಬಿಟ್ಟು ಈಗ ಆಕ್ಷೇಪಿಸುತ್ತಿರುವುದು ಸಮಂಜಸ ನಡೆ ಅಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಮುಖವಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಆಕ್ಷೇಪ ಎತ್ತಿದರು.

Exit mobile version