Site icon Vistara News

Cauvery Dispute: ತಮಿಳುನಾಡಿಗೆ ನಿತ್ಯ 8000 ಕ್ಯುಸೆಕ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

Cauvery Dispute

ಬೆಂಗಳೂರು: ತಮಿಳುನಾಡಿಗೆ ಜುಲೈ 12ರಿಂದ 31ರವರೆಗೆ ಪ್ರತಿ ದಿನ 1 ಟಿಎಂಸಿ ನೀರು (Cauvery Dispute) ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಸದ್ಯಕ್ಕೆ ತಮಿಳುನಾಡಿಗೆ 8000 ಕ್ಯುಸೆಕ್‌ ನೀರು (Cauvery Dispute) ಬಿಡಲು ತೀರ್ಮಾನ ಮಾಡಲಾಗಿದೆ.

ತಮಿಳುನಾಡಿಗೆ ನೀರು ಹರಿಸಲು ಸಿಡಬ್ಲ್ಯುಆರ್‌ಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದಿದ್ದರು. ಈ ವೇಳೆ CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಸಹಮತ ಸೂಚಿಸಿದ್ದು, ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು ಒತ್ತಾಯಿಸಿದರು. ಬಳಿಕ ಅಂತಿಮವಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ಧಾರ ಮಾಡಲಾಗಿದೆ.

Assembly Session

ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. 31.24 ಜುಲೈ ತಿಂಗಳಲ್ಲಿ ಬಿಡಬೇಕು. ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.

8 ಸಾವಿರ ಕ್ಯುಸೆಕ್ ನೀರು ಬಿಡಲು ಸಲಹೆ

ಲೀಗಲ್ ಟೀಮ್‌ನ ಮೋಹನ್ ಕಾತರಕಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಶೇ. 30 ಕಡಿಮೆ ಮಳೆಯಾಗಿದೆ.
ಕಬಿನಿ ಜಲಾಶಯ ಶೇ.96 ಭರ್ತಿಯಾಗಿದ್ದು, ಹಾರಂಗಿಯಲ್ಲಿ ಶೇ.76, ಹೇಮಾವತಿ ಶೇ.56, ಕೆಆರ್‌ಎಸ್‌ನಲ್ಲಿ ಶೇ. 52 ನೀರು ಇದೆ. ಒಟ್ಟು ಶೇ. 63 ಮಾತ್ರ ನೀರು ಸಂಗ್ರಹ ಆಗಿದೆ ಎಂದು ತಿಳಿಸಿದರು.

ವಿಪಕ್ಷ ಹಾಗೂ ನಮ್ಮ ಶಾಸಕರು, ಸಚಿವರ ಅಭಿಪ್ರಾಯ ಒಂದೇ ಆಗಿದೆ. ನಿತ್ಯ 1 ಟಿಎಂಸಿ ಬದಲಿಗೆ 8 ಸಾವಿರ ಕ್ಯುಸೆಕ್ ನೀರು ಬಿಡೋಣ. ಒಂದು ವೇಳೆ ಮಳೆ ಬಾರದಿದ್ದರೆ ಕಡಿಮೆ ಹರಿಸೋಣ, ಇಲ್ಲದಿದ್ದರೆ CWMAಗೆ ಮೇಲ್ಮನವಿ ಸಲ್ಲಿಸೋಣ ಎಂಬ ಎಂಬ ಸಲಹೆ ಬಂದಿದೆ. 24 ಗಂಟೆಯಲ್ಲಿ 11,500 ಕ್ಯುಸೆಕ್‌ ನೀರು ಹರಿದರೆ 1 TMC ಆಗಲಿದೆ. ಅಷ್ಟು ನೀರು ಇಲ್ಲದಿರುವ ಹಿನ್ನೆಲೆಯಲ್ಲಿ 8 ಸಾವಿರ ಕ್ಯುಸೆಕ್ ನೀರು ಬಿಡೋಣ. ಮಳೆ ಜಾಸ್ತಿ ಬಂದರೆ ಜಾಸ್ತಿ ಬಿಡೋಣ ಅಂತ ನಿರ್ಧಾರ ಮಾಡಿದ್ದೇವೆ ಎಂದರು.

ಸಭೆಯಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಎಂಎಲ್‌ಸಿ ರವಿ ಕುಮಾರ್‌, ಸುರೇಶ್ ಬಾಬು, ನಾಗರಾಜ್ ಯಾದವ್, ಎಜಿ ಶಶಿಕಿರಣ್ ಶೆಟ್ಟಿ, ಮಂಜೇಗೌಡ, ಜಿಟಿ ದೇವೇಗೌಡ, ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಯದವೀರ್ ಒಡೆಯರ್‌, ದರ್ಶನ ಪುಟ್ಟಣ್ಣಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಮೋಹನ್‌ ಕಾತರಕಿ, ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ | Recruitment Delay: ನೇಮಕಾತಿ ವಿಳಂಬ; ದಯಾಮರಣ ಕೋರಿ ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪತ್ರ!

ನಾಳೆಯಿಂದ ಮುಂಗಾರು ಅಧಿವೇಶನ: ಚರ್ಚೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ

Assembly Session

ಬೆಂಗಳೂರು: ನಾಳೆ ಪ್ರಾರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ (Assembly Session) ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಬಾರಿ ಸಂಪೂರ್ಣ ಬಜೆಟ್‌ಗೆ ಮಾರ್ಚ್‌ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್‌ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ. ಯಾವಗಲೂ ಮಾರ್ಚ್‌ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತಿತ್ತು. ಈ ಬಾರಿ ಪೂರ್ಣ ಬಜೆಟ್‌ ಅನುಮೋದನೆ ಆಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ | Recruitment Delay: ನೇಮಕಾತಿ ವಿಳಂಬ; ದಯಾಮರಣ ಕೋರಿ ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪತ್ರ!

ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಮಾಹಿತಿ ಪಡೆದರು. ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸೂಚನೆ ನೀಡಿದರು.

ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು. ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು. ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ತಿಳಿಸಿದರು.

ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಸೂಚನೆ ನೀಡಿದರು.

ಇದನ್ನೂ ಓದಿ | LKG UKG in Anganwadis: ಜು.22ಕ್ಕೆ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ; ಕಾರ್ಯಕರ್ತೆಯರಿಗೆ ಜೀವ ವಿಮೆ

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Exit mobile version