Site icon Vistara News

Cauvery Dispute: ತಮಿಳುನಾಡಿಗೆ 8000 ಕ್ಯುಸೆಕ್ ನೀರು ಬಿಡುವುದು ಅನಿವಾರ್ಯ: ಸಿದ್ದರಾಮಯ್ಯ ಹೇಳಿಕೆ

Cauvery Dispute

ಬೆಂಗಳೂರು: ತಮಿಳುನಾಡಿಗೆ ಜುಲೈ 12ರಿಂದ 31ರವರೆಗೆ ಪ್ರತಿ ದಿನ 1 ಟಿಎಂಸಿ ನೀರು (Cauvery Dispute) ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ಸರ್ವಪಕ್ಷ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ತಮಿಳುನಾಡಿಗೆ 8000 ಕ್ಯುಸೆಕ್ ನೀರು ಬಿಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜುಲೈ 11ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ 3 ನೇ ಸಭೆ ನಡೆದಿದ್ದು, ಜುಲೈ 12ರಿಂದ 31ರವರೆಗೆ ಸುಮಾರು 20 ದಿನ ಪ್ರತೀ ದಿನ 1 ಟಿಎಂಸಿಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿದ್ದಾರೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜು.12 ರಂದು ಸಭೆ ನಡೆಸಿ ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು, CWMA ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಅವರು ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ ಶೇ.63 ಮಾತ್ರ ನೀರು ಭರ್ತಿ ಆಗಿದೆ. ಕಬಿನಿ ಜಲಾಶಯ ಭರ್ತಿಯಾಗಿದ್ದು, ಕಳೆದ ಎರಡು ದಿನ 20 ಸಾವಿರ, 19 ಸಾವಿರ ಹಾಗೂ ಇಂದು 13 ಸಾವಿರ ಕ್ಯುಸೆಕ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿದುಹೋಗಿದೆ.

ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, CWMC ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯುಸೆಕ್ ನೀರು ಬಿಡಬೇಕಾಗುತ್ತದೆ. ಇದರ ಜೊತೆಗೆ ಮೇಲ್ಮನವಿ ಹಾಕೋಣ. ನಾವು ಮೊಂಡಾಟ ಆಡ್ತೀವಿ ಎಂದು CWMCಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ | Cauvery Dispute: ತಮಿಳುನಾಡಿಗೆ ನಿತ್ಯ 8000 ಕ್ಯುಸೆಕ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಎಂಎಲ್‌ಸಿ ರವಿ ಕುಮಾರ್‌, ಸುರೇಶ್ ಬಾಬು, ನಾಗರಾಜ್ ಯಾದವ್, ಎಜಿ ಶಶಿಕಿರಣ್ ಶೆಟ್ಟಿ, ಮಂಜೇಗೌಡ, ಜಿಟಿ ದೇವೇಗೌಡ, ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಯದವೀರ್ ಒಡೆಯರ್‌, ದರ್ಶನ ಪುಟ್ಟಣ್ಣಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಮೋಹನ್‌ ಕಾತರಕಿ, ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Exit mobile version