ಚೆನ್ನೈ: ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ರಾಜ್ಯ ಸರ್ಕಾರವು ತಮಿಳುನಾಡಿಗೆ ಹೇರಳವಾಗಿ ಕಾವೇರಿ ನದಿ ನೀರು (Cauvery Dispute) ಹರಿಸಿದೆ. ಸಾಕಷ್ಟು ನೀರು ಪಡೆದಿದ್ದರೂ ತಮಿಳುನಾಡು ಸರ್ಕಾರವು ಮತ್ತೊಂದು ಕುತಂತ್ರದ ನಡೆ ಅನುಸರಿಸಿದೆ. ಕಾವೇರಿ ನದಿ ನೀರು ಹರಿಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ (Central Government) ನಿರ್ದೇಶನ ನೀಡಬೇಕು ಎಂಬುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಮುಖ್ಯಮಂತ್ರಿಯ ನಿಲುವಳಿಗೆ ಸರ್ವಪಕ್ಷಗಳೂ ಬೆಂಬಲ ಸೂಚಿಸಿವೆ.
“ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನದಂತೆ ತಮಿಳುನಾಡಿಗೆ ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನದಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು” ಎಂಬುದಾಗಿ ತಮಿಳುನಾಡು ಸರ್ಕಾರವು ನಿರ್ಣಯ ಮಂಡಿಸಿದೆ. ಇದಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ದೊರೆತಿದೆ. ಇದರೊಂದಿಗೆ ಕರ್ನಾಟಕದ ಮೇಲೆ ಕೇಂದ್ರ ಸರ್ಕಾರದಿಂದ ಒತ್ತಡ ಹೇರುವುದು ಎಂ.ಕೆ.ಸ್ಟಾಲಿನ್ ಸರ್ಕಾರದ ತಂತ್ರವಾಗಿದೆ ಎಂದು ತಿಳಿದುಬಂದಿದೆ.
Tamil Nadu CM MK Stalin moves a resolution on behalf of the State Government in the Tamil Nadu Assembly to direct the Karnataka Government to release Cauvery water as per the orders of the Cauvery Water Management Authority. pic.twitter.com/f9hng3WSOH
— ANI (@ANI) October 9, 2023
ಸಿಡಬ್ಲ್ಯೂಎಂಎ ಆದೇಶವೇನು?
ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಬೇಕು ಎಂಬುದಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಆದರೆ, ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ನೂರಾರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂಬುದಾಗಿ ಘೋಷಿಸಲಾಗಿದೆ. ಹಾಗಾಗಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ತಮಿಳುನಾಡು ಸರ್ಕಾರ ನಿರ್ಣಯ ಮಂಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Cauvery Dispute: ಕೇಂದ್ರವು 4 ರಾಜ್ಯಗಳ ಜತೆ ಚರ್ಚಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಲಿ: ಎಸ್.ಎಂ. ಕೃಷ್ಣ
ಕಾವೇರಿ ನದಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದು ಕನ್ನಡ ಸಂಘಟನೆಗಳು ಈಗಾಗಲೇ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಿವೆ. ಕಾವೇರಿ ನದಿ ನೀರು ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಎಂ.ಕೆ.ಸ್ಟಾಲಿನ್ ಅವರು ಕೆಲ ದಿನಗಳ ಹಿಂದಷ್ಟೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಕೂಡ ಮಾಡಿದ್ದರು.