ಮಂಡ್ಯ: ತಮಿಳುನಾಡಿಗೆ ಹದಿನೈದು ದಿನಗಳ ವರೆಗೆ ಪ್ರತೀ ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಸೂಚನೆ (Cauvery Dispute) ಕರ್ನಾಟಕಕ್ಕೆ ಆಘಾತ ಉಂಟುಮಾಡಿದೆ. ಹೀಗೆ ನೀರಿಸಲು ಸಾಧ್ಯವೇ, ಇಷ್ಟು ನೀರು ಹರಿಸಿದರೆ ಕೆಆರ್‌ಎಸ್‌ನಲ್ಲಿ ಏನು ಉಳಿಯುತ್ತದೆ, ಎಂಬುದರ ವಾಸ್ತವ ಚಿತ್ರಣ ಇಲ್ಲಿದೆ.
ಸಮಿತಿಯ ಸೂಚನೆಯಂತೆ ನೀರು ಹರಿಸಿದ್ದೇ ಆದರೆ ಮತ್ತೆ 75 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗುತ್ತದೆ. 11 ಸಾವಿರ ಕ್ಯೂಸೆಕ್‌ಗೆ 1 tmc ನೀರು ಅಂದುಕೊಂಡರೂ 75 ಸಾವಿರ ಕ್ಯೂಸೆಕ್‌ಗೆ ಸುಮಾರು 6.5ರಿಂದ 7 tmc ನೀರು ಹರಿದು ಹೋಗಲಿದೆ. ಕೆಆರ್‌ಎಸ್‌ನಲ್ಲಿ ಈಗ ಇರುವುದೇ 21.252 tmc ನೀರು. ಇದರಲ್ಲಿ 4ರಿಂದ 5 tmc ನೀರು ಡೆಡ್ ಸ್ಟೋರೇಜ್. ಬಳಕೆಗೆ ಯೋಗ್ಯ ಇರುವುದು ಕೇವಲ 16 tmc.
ಈ 16 tmcಯಲ್ಲಿ 6.5 tmc ನೀರು ಬಿಟ್ಟಿದ್ದೆ ಆದ್ರೆ ಉಳಿಯೋದು ಸುಮಾರು 10 tmc ನೀರು ಮಾತ್ರ. ಈ 10 tmc ನೀರು ಬೆಂಗಳೂರು, ಮೈಸೂರು ಮಂಡ್ಯ ನಗರಗಳಿಗೆ ಕುಡಿಯುವುದಕ್ಕೂ ಸಾಕಾಗುವುದಿಲ್ಲ. ಈ ಮೂರು ನಗರಗಳಿಗೆ ತಿಂಗಳಿಗೆ 2 tmc ನೀರು ಅಗತ್ಯ ಇದೆ. ಡ್ಯಾಂನಲ್ಲಿ ಬಾಕಿ ಉಳಿಯುವ ನೀರು ಮೂರು ನಗರಗಳಿಗೆ ಮೂರ್ನಾಲ್ಕು ತಿಂಗಳಿಗಷ್ಟೇ ಕುಡಿಯಲು ಸಾಕಾಗಲಿದೆ. ಈಗಲೇ ನೀರಿಗೆ ಹಾಹಾಕಾರ ಉಂಟಾಗಿದೆ; ಮುಂದೆ ಎದುರಾಗಲಿರುವ ಬೇಸಿಗೆಯಲ್ಲಿ ನಮ್ಮ ಜನ ಏನು ಮಾಡಬೇಕು ಅನ್ನುವುದೇ ಪ್ರಶ್ನೆ.
ಕಳೆದ ಬಾರಿ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದಾಗ ಸರ್ಕಾರ ಕೆಆರ್‌ಎಸ್ ಡ್ಯಾಂ ಒಂದರಿಂದಲೇ ನೀರು ಬಿಡಲು ಹೇಳಿಲ್ಲ ಎಂದು ಹೇಳಿತ್ತು. ಹಾಗಾದರೆ ಕೆಆರ್‌ಎಸ್ ಡ್ಯಾಂನಲ್ಲಿ ಕಳೆದ ಒಂದು ತಿಂಗಳಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡಲಾಗಿದೆ ಎಂಬುದನ್ನು ನೋಡೋಣ.
ಕಳೆದ ಆಗಸ್ಟ್ 13ರಂದು ಅಂದರೆ ಸರಿಯಾಗಿ ಇಂದಿಗೆ ಒಂದು ತಿಂಗಳ ಹಿಂದೆ ಡ್ಯಾಂನ ನೀರಿನ ಮಟ್ಟ 112 ಅಡಿ ಇತ್ತು. ಆದರೆ ಈಗ ಅದು 97 ಅಡಿಗೆ ಕುಸಿದಿದೆ. ಅಂದರೆ ಈ ಒಂದು ತಿಂಗಳಲ್ಲಿ 15 ಅಡಿ ನೀರನ್ನು ಬಿಡಲಾಗಿದೆ. ಇದನ್ನೇ tmcಯಲ್ಲಿ ಹೇಳುವುದಾದರೆ ಆಗಸ್ಟ್ 13ರಂದು ಡ್ಯಾಂನಲ್ಲಿ 34 tmc ನೀರು ಸಂಗ್ರಹ ಇತ್ತು. ಇಂದು 21 tmc ಇದೆ. ಅಂದರೆ 13 tmc ನೀರನ್ನು ಕೆಆರ್‌ಎಸ್ ಡ್ಯಾಂನಿಂದಲೇ ಹರಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾವೇರಿ ನೀರು; ಜನ ರೊಚ್ಚಿಗೇಳುವ ಮುನ್ನ ಎಚ್ಚೆತ್ತುಕೊಳ್ಳಿ