Site icon Vistara News

Cauvery Expressway | ಬೆಂ-ಮೈಸೂರು ಎಕ್ಸ್‌ಪ್ರೆಸ್‌ವೇಗೆ ʼಕಾವೇರಿ ಎಕ್ಸ್‌ಪ್ರೆಸ್‌ ವೇʼ ಹೆಸರಿಡಲು ಪ್ರತಾಪ್‌ ಸಿಂಹ ಮನವಿ

Cauvery Expressway

ಮೈಸೂರು: ದೇಶದ ವಿವಿಧ ಎಕ್ಸ್‌ಪ್ರೆಸ್‌ ವೇಗಳಿಗೆ ಪವಿತ್ರ ನದಿಗಳ ಹೆಸರು ನಾಮಕರಣ ಮಾಡಿರುವಂತೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೂ ʻಕಾವೇರಿ ಎಕ್ಸ್‌ಪ್ರೆಸ್‌ವೇʼ (Cauvery Expressway) ಎಂದು ಹೆಸರಿಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸಂಸದ ಪ್ರತಾಪ ಸಿಂಹ ಮನವಿ ಮಾಡಿದ್ದಾರೆ.

ಈ ಬಗ್ಗೆ ಮನವಿ ಪತ್ರ ಸಲ್ಲಿಸಿರುವ ಅವರು, ದೇಶದಲ್ಲಿ ಈಗಾಗಲೇ ನಿರ್ಮಿಸಲಾದ ಹಾಗೂ ನಿರ್ಮಾಣವಾಗುತ್ತಿರುವ ಅನೇಕ ಎಕ್ಸ್‌ಪ್ರೆಸ್‌ ವೇಗಳಿಗೆ ಪವಿತ್ರ ನದಿಗಳ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇ, ಗಂಗಾ ಎಕ್ಸ್‌ಪ್ರೆಸ್‌ವೇ, ಮಧ್ಯಪ್ರದೇಶದಲ್ಲಿ ನರ್ಮದಾ ಎಕ್ಸ್‌ಪ್ರೆಸ್‌ ವೇ ಎಂದು ಹೆಸರಿಡಲಾಗಿದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ʼಕಾವೇರಿ ಎಕ್ಸ್‌ಪ್ರೆಸ್‌ವೇʼ ಎಂದು ಹೆಸರಿಡಬೇಕು ಎಂದು ಕೋರಿದ್ದಾರೆ.

ಭಾರತಮಾಲಾ ಯೋಜನೆ ಹಂತ-1ರ ಅಡಿಯಲ್ಲಿ ನಿರ್ಮಿಸುತ್ತಿರುವ 119-ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭಾಗಶಃ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿ ಹಲವು ಪ್ರಯೋಜನಗಳು ಈ ಎಕ್ಸ್‌ಪ್ರೆಸ್‌ವೇನಿಂದ ಆಗಲಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Border Dispute | ಕರ್ನಾಟಕಕ್ಕೆ ನೀರು ಬಂದ್‌ ಮಾಡಲು ಡ್ಯಾಂ ಅವರ ತಾತನದಲ್ಲ: ಮಹಾರಾಷ್ಟ್ರ ಶಾಸಕರು, ಸಚಿವರಿಗೆ ಕಾರಜೋಳ ಖಾರದ ಉತ್ತರ

ಭಾರತೀಯ ಸಂಸ್ಕೃತಿಯಲ್ಲಿ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿಯನ್ನು ಭಾರತದ ಏಳು ಅತ್ಯಂತ ಪವಿತ್ರ ನದಿಗಳೆಂದು ಪರಿಗಣಿಸಲಾಗುತ್ತದೆ. ಋಗ್ವೇದ ಕಾಲದಲ್ಲೂ ಈ ಪವಿತ್ರ ಜಲಮೂಲಗಳ ಬಗ್ಗೆ ಉಲ್ಲೇಖವಾಗಿದೆ. ಈ ನದಿಗಳ ಉಗಮಸ್ಥಾನಗಳೆಲ್ಲವೂ ಪವಿತ್ರ ಕ್ಷೇತ್ರಗಳಾಗಿವೆ. ಅದರಂತೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲೂ ದೇವಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾವೇರಿ ನದಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿಯಲ್ಲಿ ಉಗಮಸ್ಥಾನ ಹೊಂದಿದೆ. ಈ ನದಿಯು ಭಗವಾನ್ ವಿಷ್ಣುವಿನ ದಂತಕಥೆಗಳಿಗೆ ಸಂಬಂಧಿಸಿದೆ. ಹೀಗಾಗಿ ಕಾವೇರಿ ನದಿಯ ಮೂರು ದ್ವೀಪಗಳೂ ಮೈಸೂರಿನ ಬಳಿಯ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಮಹಾ ವಿಷ್ಣು ದೇವಾಲಯಗಳ ತಾಣಗಳಾಗಿ ಮಾರ್ಪಟ್ಟಿವೆ. ಆದ್ದರಿಂದ ಐತಿಹಾಸಿಕ ಹಿನ್ನೆಲೆಯುಳ್ಳ ಕಾವೇರಿ ನದಿ ಹೆಸರನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಇಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ: ಸಿಎಂಗೆ ಸಚಿವ ಅಶ್ವತ್ಥನಾರಾಯಣ ಪತ್ರ

Exit mobile version