Site icon Vistara News

Cauvery Protest: ಮಂಡ್ಯದಲ್ಲಿ ಕಾವೇರಿ ಕಿಚ್ಚು; ರೈತರ ಬಂದ್ ಕರೆಗೆ ಸರ್ವವೂ ಸ್ತಬ್ಧ, ಹೋರಾಟಕ್ಕೆ ರಾಜ್ಯದೆಲ್ಲೆಡೆ ಬೆಂಬಲ

Mandya Bandh

ಮಂಡ್ಯ: ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್‌ (Mandya bandh) ಯಶಸ್ವಿಯಾಯಿತು. ರೈತರು ನಗರ ಮತ್ತು ಜಿಲ್ಲೆಯ ನಾನಾ ಭಾಗಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸಂಘಟಿಸಿದ್ದರೆ, ಜನರು ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳನ್ನು ನಿಲ್ಲಿ ಸಿ ತಮ್ಮ ಬೆಂಬಲ ಸಾರಿದರು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು.

ಆರಂಭದಲ್ಲಿ ಇದು ಮಂಡ್ಯ ನಗರಕ್ಕೆ ಸೀಮಿತವಾಗಿ ಘೋಷಣೆಯಾಗಿದ್ದರೂ ಮದ್ದೂರು, ಭಾರತಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು (Shops Closed) ಮುಚ್ಚಿ ಜನರು ಬೆಂಬಲ ನೀಡಿದರು. ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳು, ಹೋಟೆಲ್‌ಗಳು, ಬೇಕರಿಗಳು, ಚಿತ್ರಮಂದಿರಗಳು, ಖಾಸಗಿ ಕಚೇರಿಗಳು ಮುಚ್ಚಿದ್ದವು.

ಹೆಚ್ಚಿನ ಖಾಸಗಿ ಶಾಲೆ-ಕಾಲೇಜುಗಳು ಮೊದಲೇ ರಜೆ ಘೋಷಿಸಿದ್ದರೆ ಕೆಲವು ಶಾಲೆಗಳು ಓಪನ್‌ ಇದ್ದವು. ಪ್ರತಿಭಟನಾಕಾರರು ಅವುಗಳನ್ನು ಮುಚ್ಚಿಸಿದ ಬಳಿಕ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಇಳಿದರು. ನಗರ ವ್ಯಾಪ್ತಿಯಲ್ಲಿ ಬಸ್‌ ಸಂಚಾರ ಇರಲಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್ ಸೇವೆ ಎಂದಿನಂತೆ ಇತ್ತು. ನಗರದಲ್ಲಿ ಮಧ್ಯಾಹ್ನದವರೆಗೆ ಆಟೋಗಳ ಸೇವೆ ಬಂದ್‌ ಇತ್ತು.

ರಸ್ತೆತಡೆ, ಪ್ರತಿಭಟನಾ ಮೆರವಣಿಗೆ, ರಸ್ತೆಯಲ್ಲಿ ಉರುಳು ಸೇವೆ, ಬಾಯಿ ಬಡಿದುಕೊಳ್ಳುವುದು, ಮಕ್ಕಳಿಂದ ಖಾಲಿ ಕೊಡಗಳ ಪ್ರದರ್ಶನ, ಮಾನವ ಸರಪಳಿ ರಚನೆ, ಶ್ವಾನ ಪ್ರದರ್ಶನ, ಎಮ್ಮೆ ಮತ್ತು ಎಮ್ಮೆ ಕರುವಿನೊಂದಿಗೆ ಪ್ರತಿಭಟನೆ ಹೀಗಾಗಿ ಹತ್ತಾರು ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸ್ಥಳ ಜೆ.ಸಿ ವೃತ್ತದಲ್ಲಿ ಇಡೀ ದಿನ ಜನಸಾಗರ, ರಾಜಕಾರಣಿಗಳ ಬೆಂಬಲ

ಪ್ರತಿಭಟನೆಯ ಕೇಂದ್ರ ಸ್ಥಳ ಜೆ.ಸಿ.ವೃತ್ತದಲ್ಲಿ ಇಡಿ ದಿನ ಜನಸಾಗರ ನೆರೆದಿತ್ತು. ಮಾಜಿ ಸಚಿವ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕರ‍್ಯಕರ್ತರು ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೊಂದಿಗೆ ಧರಣಿಯಲ್ಲಿ ಭಾಗವಹಿಸಿದ್ದರು.

ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.‌ಡಿ ಕುಮಾರಸ್ವಾಮಿ ಅವರು ಕೆಆರ್‌ಎಸ್‌ನಲ್ಲಿ ಪರಿಶೀಲನೆ ನಡೆಸಿ ರಸ್ತೆ ಮಾರ್ಗವಾಗಿ ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಿದರು. ಸಂಜೆ ಐದು ಗಂಟೆಯ ನಂತರ ಎಲ್ಲ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು.

ಇದನ್ನೂ ಓದಿ: Cauvery Protest : ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ; ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಾಥ್‌

ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಸುಗಮ

ಮಂಡ್ಯದಲ್ಲಿ ಬಂದ್‌ ನಡೆಯುತ್ತಿದ್ದರೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಿರಲಿಲ್ಲ. ಬೆಂಗಳೂರು-ಮೈಸೂರು ನಡುವೆ ಎಂದಿನಂತೆ ವಾಹನಗಳು ಸಂಚರಿಸುತ್ತಿದ್ದವು. ಮಂಡ್ಯ ನಗರಕ್ಕೆ ಬರುತ್ತಿದ್ದ ಬಸ್‌ಗಳು ಕೂಡ ಹೆದ್ದಾರಿಯಲ್ಲೇ ಸಂಚಾರ ನಡೆಸಿದವು.

Exit mobile version