Site icon Vistara News

Cauvery Protest: ಸಿಲಿಕಾನ್ ಸಿಟಿಯಲ್ಲೂ ಕಾವೇರುತ್ತಿದೆ ಕಾವೇರಿ ಕಿಚ್ಚು; ಇಂದು ಬೆಂಗಳೂರು ಬಂದ್‌ ಫಿಕ್ಸ್‌?

cauvery protest

ಬೆಂಗಳೂರು: ರಾಜಧಾನಿಯಲ್ಲಿ ಇಂದು ಕಾವೇರಿ ನೀರಿನ (Cauvery dispute) ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ (Supreme court) ಪ್ರತಿಭಟಿಸಿ ಸಾಲು ಸಾಲು ಪ್ರತಿಭಟನೆಗಳು (Cauvery Protest) ನಡೆಯಲಿವೆ. ಬೆಂಗಳೂರು ಮತ್ತು ಕರ್ನಾಟಕ ಬಂದ್‌ಗೂ ಇಂದೇ ದಿನ ಫಿಕ್ಸ್‌ ಆಗುವ ಸಾಧ್ಯತೆ ಇದೆ.

ಕಾವೇರಿಗಾಗಿ ಇಂದು ಕನ್ನಡಪರ ಹೋರಾಟಗಾರರು ರೋಡಿಗಿಳಿಯಲಿದ್ದು, ಕೇಂದ್ರ, ರಾಜ್ಯ ‌ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕವೂ ಘೋಷಣೆ ಮಾಡುವ ಸಾಧ್ಯತೆ ಇದೆ.

ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಇಂದು ಬೆಳಗ್ಗೆ 11 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿವೆ. ಬೆಂಗಳೂರಿನ ಪ್ರಮುಖ ಅಪಾರ್ಟ್ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಲಿವೆ. ಸಭೆ ಬಳಿಕ ಹೋರಾಟದ ರೂಪುರೇಷೆಯ ಬಗ್ಗೆ ನಿರ್ಧಾರವಾಗಲಿದೆ.

ಹಲವು ಪ್ರತಿಭಟನೆಗಳು

ರಾಜಧಾನಿಯಲ್ಲಿ ಇಂದು ಹಲವು ಸಂಘಟನೆಗಳಿಂದ ಪ್ರಮುಖ ಪ್ರತಿಭಟನೆಗಳು ನಡೆಯಲಿವೆ.

1) ಬೆಳಿಗ್ಗೆ 10.30ಕ್ಕೆ ಕರ್ನಾಟಕ ರಕ್ಷಣಾ ‌ವೇದಿಕೆ ಶಿವರಾಮೇಗೌಡ ಬಣದಿಂದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಲಿದ್ದು ಕರವೇಯ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

2) ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ- ತಮಿಳುನಾಡು ಅತ್ತಿಬೆಲೆ ಗಡಿ ಬಂದ್ ಆಗಲಿದ್ದು, ಕರವೇಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

3) ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರಿನಿಂದ ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಆಮ್ ಆದ್ಮಿ ‌ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

4) ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನಿಂದ ಬೆಳಿಗ್ಗೆ 11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ.

5) ಮಧ್ಯಾಹ್ನ 1-30 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ‌ಕನ್ನಡಪರ ಹೋರಾಟಗಾರ ಹೆಚ್.ವಿ ಗಿರೀಶ್ ಗೌಡ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Cauvery Protest: ಕಾವೇರಿ ಕಿಚ್ಚು: ಮಂಡ್ಯ ಬಂದ್‌; ಹೆದ್ದಾರಿಯಲ್ಲಿ ಉರುಳುಸೇವೆ, ರೈತರ ಜತೆ ಸೇರಿದ ಬಿಜೆಪಿ, ಜೆಡಿಎಸ್

Exit mobile version