ಮಂಡ್ಯ: ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ಕಿಚ್ಚು (Cauvery Dispute) ಕಾವೇರಿದ್ದು, ಇಂದು ಮಂಡ್ಯ ಪೂರ್ತಿ ಬಂದ್ (Mandya Bundh) ಆಗಿದೆ. ವರ್ತಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಪ್ರತಿಭಟನಾಕಾರರು (Cauvery protest) ಮುಂಜಾನೆಯಿಂದಲೇ ಹೆದ್ದಾರಿಯಲ್ಲಿ ಮಲಗಿ, ಕಬ್ಬಿನ ಜಲ್ಲೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದಿನ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಾಥ್ ನೀಡಲಿದ್ದಾರೆ. ಇಂದಿನ ರೈತರ ಹೋರಾಟದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಿ.ಟಿ ರವಿ ಹಾಗೂ ಮಧ್ಯಾಹ್ನ 12ಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿ ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟದಲ್ಲಿ ಭಾಗಿಗಳಾಗಲಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ರೈತರ ಪ್ರತಿಭಟನೆ ಹಲವು ದಿನಗಳಿಂದ ನಡೆಯುತ್ತಿದೆ. ಇಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ. ಮಂಡ್ಯದ ಸಂಜಯ ವೃತ್ತದಲ್ಲಿ ಟೀ ತಯಾರಿಸಿ ಪ್ರತಿಭಟನೆಯನ್ನು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಆಯೋಜಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಪ್ರತಿಯಿಂದ ಟೀ ತಯಾರಿಸಿ ಪ್ರತಿಭಟನೆ ನಡೆಯಲಿದೆ. ಹಾಗೆಯೇ ಕಿವಿಗೆ ಹೂ ಮುಡಿದು, ಪಟ್ಟೆ ಪಟ್ಟೆ ಚಡ್ಡಿ ಧರಿಸಿಯೂ ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಭದ್ರತೆಗಾಗಿ 6 ಡಿಎಆರ್, 4 ಕೆ ಎಸ್ ಆರ್ ಪಿ ತುಕಡಿ ಜೊತೆಗೆ 200 ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಿದ್ದಾರೆ.
ಬೆಳಗೆಯಿಂದ ಕಾರ್ಯ ನಿರ್ವಹಿಸ್ತಿದ್ದ ಪೆಟ್ರೋಲ್ ಬಂಕ್‌ಗಳನ್ನು ಬೆಂಬಲ ನೀಡುವಂತೆ ಹಿತ ರಕ್ಷಣಾ ಸಮಿತಿ ಸದಸ್ಯರು ಬಂದ್ ಮಾಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ರ್ಯಾಪಿಡ್ ಆಕ್ಸನ್ ಪೋರ್ಸ್ ಆಗಮಿಸಿದ್ದು, ಮಂಡ್ಯದ ಸಂಜಯ ವೃತ್ತದಲ್ಲಿ ನಿಯೋಜಿಸಲಾಗಿದೆ. ಬೆಳವಣಿಗೆಗಳ ಮೇಲೆ ಭದ್ರತಾ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಪ್ರತಿಭಟನೆ ತೀವ್ರಗೊಂಡಿದ್ದು, ಹೆದ್ದಾರಿಯಲ್ಲೇ ಮಲಗಿ ಪ್ರತಿಭಟಿಸುತ್ತಿದ್ದಾರೆ.
ಮದ್ದೂರು ಪಟ್ಟಣದಲ್ಲಿಯೂ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕರಿಸಲು ವರ್ತಕರು ನಿರ್ಧರಿಸಿದ್ದಾರೆ. ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್, ಹಾಲಿನ ಮಳಿಗೆಗಳು, ಹೋಟೆಲ್ ಸೇರಿ ಅತ್ಯಗತ್ಯ ಸೇವೆಗಳು ಮಾತ್ರ ಲಭ್ಯವಿವೆ. ಕೆ. ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಲಭ್ಯವಿದೆ.
“ಇಂದು ಮಂಡ್ಯ ರೈತ ಹಿತ ರಕ್ಷಣಾ ಸಮಿತಿ ಬಂದ್‌ಗೆ ಕರೆ ನೀಡಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಮಂಡ್ಯ ಸಂಪೂರ್ಣ ಬಂದ್ ಮಾಡಲಾಗುವುದು. ಬಂದ್‌ಗೆ ಸ್ವಯಂಪ್ರೇರಿತವಾಗಿ ಸಾರ್ವಜನಿಕರು ಬೆಂಬಲ ನೀಡಿದ್ದಾರೆʼʼ ಎಂದು ಜೆಡಿಎಸ್ ಮುಖಂಡ ಶ್ರೀಕಂಠೇ ಗೌಡ ಹೇಳಿದ್ದಾರೆ.
ಇದನ್ನೂ ಓದಿ: Cauvery Protest : ಮಂಡ್ಯದಲ್ಲಿ ಬೆಳಗ್ಗಿನಿಂದಲೇ ಜಲಾಕ್ರೋಶ; ತಮಿಳುನಾಡಿಗಷ್ಟೇ ಅಲ್ಲ ಬೆಂಗಳೂರಿಗೂ ನೀರು ಬಿಡಬೇಡಿ!