Site icon Vistara News

Cauvery Water Dispute: ತಮಿಳುನಾಡಿಗೆ ನೀರು ನಿಲ್ಲಿಸದಿದ್ರೆ, ಸೆ.12ರ ನಂತರ ಕಾವೇರಿ ರಕ್ಷಣಾ ಯಾತ್ರೆ: ಬಸವರಾಜ ಬೊಮ್ಮಾಯಿ

Basavaraj Bommai and Pratap simha

ಮಂಡ್ಯ: ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು (Cauvery Water Dispute) ಬಿಡುವುದನ್ನು ನಿಲ್ಲಿಸದಿದ್ದರೇ ಸೆಪ್ಟೆಂಬರ್ 12 ರ ನಂತರ ಕಾವೇರಿ ಕೊಳ್ಳದ ಜಿಲ್ಲೆಗಳ ಜನರೊಂದಿಗೆ ಸೇರಿ ಕಾವೇರಿ ರಕ್ಷಣಾ ಯಾತ್ರೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಬಿಜೆಪಿ ನಾಯಕರೊಂದಿಗೆ ಭೇಟಿ ನೀಡಿ ನೀರಿನ ವಸ್ತು ಸ್ಥಿತಿ ಪರಿಶೀಲನೆಯ ನಂತರ ಮಾತನಾಡಿದ ಅವರು, ಈ ವರ್ಷ ಮಳೆ ಕೊರತೆಯಾಗಿರುವುದು ಮೇ, ಜೂನ್ ತಿಂಗಳ ಪ್ರಾರಂಭದಲ್ಲಿಯೇ ಗೊತ್ತಾಗಿದೆ. ಆದರೂ ಸರ್ಕಾರ ಸಂಪೂರ್ಣವಾಗಿ ಕಾವೇರಿ ವ್ಯಾಪ್ತಿಯ ನಾಲ್ಕು ಡ್ಯಾಂಗಳ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.

ಕುಡಿಯುವ ನೀರಿಗೆ ಅನುಕೂಲವಾಗಲು ಕೆರೆಗಳಿಗೆ ರೈತರ ಹೊಲಗಳಿಗೆ ಜೂನ್ ತಿಂಗಳಲ್ಲಿ ನೀರು ಬಿಡಬೇಕಿತ್ತು. ನೀರಾವರಿ ಸಲಹಾ ಸಮಿತಿ (ಐಸಿಸಿ) ಮೀಟಿಂಗ್ ಜೂನ್‌ನಲ್ಲಿ ಕರೆಯುವ ಬದಲು ಆಗಸ್ಟ್‌ನಲ್ಲಿ ಕರೆದಿದ್ದಾರೆ. ತಮಿಳುನಾಡಿನವರು 15000 ಕ್ಯೂಸೆಕ್‌ ನೀರು ಕೇಳಿದ ಮೇಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಕಾಲ ಹರಣ ಮಾಡಿದೆ ಎಂದು ಆರೋಪಿಸಿದರು.

ಇದನ್ನೂ ಓದಿ | BJP-JDS Alliance : ಬಿಜೆಪಿ ಜತೆ ಕೈಜೋಡಿಸಲು ಜೆಡಿಎಸ್‌ ಶಾಸಕರಿಂದಲೇ ಒತ್ತಡ ಇತ್ತು ಎಂದ ದೇವೇಗೌಡ

ತಮಿಳುನಾಡಿನವರು ಕುರುವೈ ಬೆಳೆಗೆ ಈಗಾಗಲೇ 32 ಟಿಎಂಸಿ ಬದಲು 60 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ. ಆದರೂ ಅವರ ಬೇಡಿಕೆಯಂತೆ ಪ್ರತಿದಿನ ನೀರು ಹರಿಸುತ್ತಿದ್ದಾರೆ. ಈ ಬಗ್ಗೆ ಸರ್ವ ಪಕ್ಷ ಸಭೆಯಲ್ಲೆ ಕೇಳಿದಾಗ ಇನ್ನು ಮುಂದೆ ನೀರು ಬಿಡುವುದಿಲ್ಲ ಅಂತ ಹೇಳಿ, ನಿರಂತರ ನೀರು ಹರಿಸುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಎಂಎ) ಎದುರು ಸರಿಯಾಗಿ ವಾದ ಮಾಡಿದ್ದರೆ ಸುಮಾರು 15 ಟಿಎಂಸಿ ನೀರು ಉಳಿಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ನೀರು ಹರಿಸುವುದನ್ನು ನಿಲ್ಲಿಸಬೇಕು

ರಾಜ್ಯ ಸರ್ಕಾರ ಸೆ. 12ರ ನಂತರವೂ ನೀರು ಬಿಡುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ವಿಚಾರಣೆ ನಡೆಯುವವರೆಗೂ ನೀರು ಹರಿಯುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಂಡ್ಯ ಜಿಲ್ಲೆಯೊಂದರಲ್ಲೆ ಸುಮಾರು 4 ಲಕ್ಷ ಎಕರೆ ಬೆಳೆ ಒಣಗುತ್ತಿದೆ. ಹೀಗಾಗಿ ಕೃಷಿ ಅಧಿಕಾರಿಗಳು ಒಣ ಬೇಸಾಯದ ಬೆಳೆ ಬೆಳೆಯುವಂತೆ ಸೂಚನೆ ನೀಡುತ್ತಿದ್ದಾರೆ. ತಮಿಳುನಾಡಿನ ಬೆಳೆಗೆ ನೀರು ಹರಿಸುತ್ತಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜ್ಯದ ಕಡೆಗೆ ಗಮನ ಹರಿಸಿಲ್ಲ. ಸಿಎಂ ನೀರು ಬಿಡುವುದಿಲ್ಲ ಅಂತ ಹೇಳಿದ 24 ಗಂಟೆಯಲ್ಲಿ ಆದೇಶ ಇದೆ ನೀರು ಬಿಟ್ಟಿದ್ದೇವೆ ಅಂತ ಡಿಸಿಎಂ ಹೇಳುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 13 ಟಿಎಂಸಿ ನೀರು ಮಾತ್ರ ಬಳಕೆಗೆ ಇದೆ. ಮುಂದಿನ ಮವರೆಗೂ ಇನ್ನೂ ಎರಡು ಟಿಎಂಸಿ ನೀರು ಆವಿಯಾಗಿ ಹೋಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಜನರು ಇದನ್ನು ಕ್ಷಮಿಸುವುದಿಲ್ಲ ಎಂದ ಅವರು, ರಾಜ್ಯ ಸರ್ಕಾರ ಇದುವರೆಗೂ ನಮ್ಮ ರೈತರಿಗೆ 33 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಕೇವಲ 7 ಟಿಎಂಸಿ ನೀರು ಬಿಟ್ಟಿದ್ದಾರೆ. ಹೀಗಾದರೆ ನಮ್ಮ ರೈತರು ಎಲ್ಲಿಗೆ ಹೋಗಬೇಕು. ಕಾವೇರಿ ಭಾಗದ ಜನರು ನಿಮಗೆ ಬಹುಮತ‌ ನೀಡಿದ್ದಾರೆ. ಅವರಿಗೆ ಇದೇ ಬಹುಮಾನಾನಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Chetan Ahimsa : ಸನಾತನ ಧರ್ಮ, ಸಮಾನ ನಾಗರಿಕ ಸಂಹಿತೆ ಸಮರ್ಥನೆ; ಗ್ಯಾರಂಟಿ ವಿರುದ್ಧ ಸಿಡಿಮಿಡಿ; ಬದಲಾದ್ರಾ ನಟ ಚೇತನ್‌?

ಡಿಸಿಎಂ ಡಿಕೆ ಶಿವಕುಮಾರ್ ಅವರು ಮೇಕೆದಾಟು ಬಗ್ಗೆ ಹೇಳಿದ್ದಾರೆ. ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಕಾರ್ಪೊರೇಶನ್ ನವರು ವಿದ್ಯುತ್ ಉತ್ಪಾದನೆಗೆ ನಾಲ್ಕು ಡ್ಯಾಂಗಳಿಗೆ ಅನುಮತಿ ನೀಡಿದ್ದರು. ಆದರೆ, ತಮಿಳುನಾಡು ವಿರೋಧ ಮಾಡಿತು. ನಾನು 2012ರಲ್ಲಿ ನೀರಾವರಿ ಸಚಿವನಾಗಿದ್ದಾಗ ಮೇಕೆದಾಟು ಯೋಜನೆ ಮಾಡಲು ತೀರ್ಮಾನಿಸಿ, ಫಿಜಿಬಿಲಿಟಿ ರಿಪೊರ್ಟ್ ಸಿದ್ಧಪಡಿಸಿದ್ದೆವು. ಆದರೆ, ಡಿಪಿಆರ್ ಸಿದ್ಧಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮೇಕೆದಾಟು ಪಾದಯಾತ್ರೆ ಮಾಡಿದರು. ಪ್ರಕರಣ ಕೊರ್ಟ್‌ನಲ್ಲಿದೆ ಅಂತ ಹೇಳಿದಾಗ ಒಪ್ಪಲಿಲ್ಲ. ಈಗ ಅವರೇ ಸತ್ಯ ಒಪ್ಪಿಕೊಂಡಿದ್ದಾರೆ ಎಂದರು.

ರೈತ ಸಂಘದವರು ಕಾವೇರಿ ರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ರಾಜಕಾರಣ ಮಾಡಬಾರದು ಅಂತ ಕಾದು ನೋಡಿದೆವು. ಸಿಡಬ್ಲುಸಿ ಸಭೆ ಕರೆಯುವ ಮೊದಲು ನಾನು ಸಿಎಂಗೆ ಪತ್ರ ಬರೆದಿದ್ದೆ, ಸರ್ವಪಕ್ಷ ಸಭೆ ಕರೆಯುವಂತೆ ಒತ್ತಡ ಹೇರಿದ್ದೇವೆ. ಸರ್ಕಾರ ಈಗಲೂ ನೀರು ಹರಿಸುವುದನ್ನು ತಡೆಯುವಂತೆ ಒತ್ತಡ ಹೇರಲು ವಸ್ತುಸ್ಥಿತಿ ಅರಿಯಲು ಬಂದಿದ್ದೇವೆ ಎಂದರು.

ಇದನ್ನೂ ಓದಿ | Basanagowda pateel yatnal : ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ರೂ ದಮ್‌ ಇಲ್ಲ, ಬಿಜೆಪಿಯವರ ವೀರ್ಯಾಣು ಬೇಕಂತೆ; ಯತ್ನಾಳ್‌ ಹೇಳಿಕೆ

ಕಾಂಗ್ರೆಸ್‌ನಿಂದ ಓಲೈಕೆ ರಾಜಕಾರಣ

ಕಾಂಗ್ರೆಸ್ ‌ನಾಯಕರ ಹೇಳಿಕೆಗಳನ್ನು ನೋಡಿದರೆ, ತಮಿಳುನಾಡಿನ ಓಲೈಕೆಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಎನಿಸುತ್ತದೆ. ಕಾವೇರಿ ಹಿನ್ನೀರು ಸಂಪೂರ್ಣ ಖಾಲಿಯಾಗಿದೆ. ಸರ್ಕಾರ ಇನ್ನೂ ನೀರು ಹರಿಸಿದರೆ ಈ ಪರಿಸ್ಥಿತಿಯಲ್ಲಿ ನಾವು ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ ಇದ್ದರು.

Exit mobile version