Site icon Vistara News

Cauvery Water Dispute : ಕಾವೇರಿ ಒಳಹರಿವು ಹೆಚ್ಚಳ, ರಾಜ್ಯ ನಿರಾಳ: ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar talk on Cauvery water dispute

ಬೆಂಗಳೂರು: ರಾಜ್ಯದ ಕಾವೇರಿ ಪಾತ್ರದ ಅಣೆಕಟ್ಟುಗಳ (Cauvery basin dams) ಒಳಹರಿವು 15 ಸಾವಿರ ಕ್ಯೂಸೆಕ್‌ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಅವರು ಕಾವೇರಿ ಜಲ ವಿವಾದಕ್ಕೆ (Cauvery Water Dispute) ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರಕಲಾ ಪರಿಷತ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ರಾಜ್ಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ವಕೀಲರ ಜತೆ ಚರ್ಚೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರವೇ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Lingayat CM : ಲಿಂಗಾಯತರು ಸಿಎಂ ಆಗಬೇಕೆಂಬ ಶಾಮನೂರು ಹೇಳಿಕೆಯಲ್ಲಿ ಅರ್ಥ ಇದೆ: ಬಿ.ವೈ. ವಿಜಯೇಂದ್ರ

ಕಾವೇರಿ ಕಣಿವೆಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಮಳೆ ಬೀಳಲಿ ಎಂದು ಸಾರ್ವಜನಿಕರೆಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಬೇಕಿದೆ. ನಮ್ಮ ರೈತರ ಬೆಳೆ ಹಾಳಾಗದಂತೆ ಈಗಾಗಲೇ ನೀರು ಬಿಟ್ಟಿದ್ದೇವೆ. ತಮಿಳುನಾಡಿಗೆ ಕೆಆರ್‌ಎಸ್ ಅಣೆಕಟ್ಟು ಮೂಲಕ ನೀರು ಹರಿಸದಿದ್ದರೂ ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಲ್ಲಿ ಬಿದ್ದ ಮಳೆ ಹಾಗೂ ಸೀಪೇಜ್ ಮೂಲಕ ಆರೂವರೆ ಸಾವಿರ ಕ್ಯೂಸೆಕ್ ನೀರು ಅನಿಯಂತ್ರಿತವಾಗಿ ಹರಿದಿದೆ. ಹೀಗಾಗಿ ನಮ್ಮಲ್ಲಿ ಮಳೆ ಬಂದಷ್ಟು ನಮಗೆ ಶಕ್ತಿ ಬರುತ್ತದೆ. ಉಳಿದಂತೆ ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ನಾವು ಬದ್ಧವಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಎಲ್ಲರನ್ನೂ ಗಮನಿಸಬೇಕು

ಶಾಮನೂರು ಶಿವಶಂಕರಪ್ಪ ಅವರು ತಮ್ಮ ಹೇಳಿಕೆಗೆ ಬದ್ಧ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಅವರು ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ, ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಸಿಎಂ ಆಡಳಿತದ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಪ್ರಶ್ನೆ ಮಾಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಮುಖ್ಯಮಂತ್ರಿಗಳಿಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮಂತ್ರಿಗಳಾದ ನಮ್ಮಲ್ಲೂ ಸಾಮಾನ್ಯ ಪ್ರಜ್ಞೆ ಇರಬೇಕು. ನಾವು ಯಾರಾದರೂ ಒಬ್ಬರಿಗೆ ಪೋಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸರ್ಕಾರ ಎಂದರೆ ಎಲ್ಲವೂ ಮುಖ್ಯಮಂತ್ರಿ ಮೇಲೆ ಹಾಕಬಾರದು. ಸಚಿವರಾದ ನಾವುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಎಲ್ಲ ಕಾಲದಲ್ಲೂ ಇದು ನಡೆದುಕೊಂಡು ಬಂದಿದೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ನಾಯಕರು. ಒಂದು ಸಮಾಜದ ಸಂಘದ ಅಧ್ಯಕ್ಷರು. ಅವರ ಮೇಲೂ ಒತ್ತಡ ಇರುತ್ತದೆ. ಕೆಲವು ಅಧಿಕಾರಿಗಳು ಸಚಿವರ ಬಳಿಯೂ ಹೋಗಿ ಮನವಿ ಮಾಡಿದ್ದಾರೆ. ಈ ರೀತಿ ಕೇಳುವುದರಲ್ಲಿ ತಪ್ಪಿಲ್ಲ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮುಂದಿನ ಒಂದು ವರ್ಷದ ಒಳಗೆ ಸರ್ಕಾರ ಬೀಳುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇದಕ್ಕೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: BJP JDS alliance : ಮೈತ್ರಿಯಾಗಿದೆಯಷ್ಟೇ, ವರಿಷ್ಠರು ಸೀಟು ಹಂಚಿಕೆ ಮಾಡ್ತಾರೆ: ಬಿ.ಎಸ್.‌ ಯಡಿಯೂರಪ್ಪ

ಆಮಿಷ ಒಡ್ಡಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಅವರು ನಿಮ್ಮ ವಿರುದ್ಧ ಆರೋಪಿಸಿದ್ದಾರೆ ಎಂದು ಕೇಳಿದಾಗ, “ಅವರು ಆಪರೇಷನ್ ಕಮಲದ ಬಗ್ಗೆ ಯೋಚಿಸಲಿ. ಸದನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಅವರು ಏನು ಹೇಳಿದರು. ಹೊರಗಡೆ ಏನೆಲ್ಲ ನಡೆಯಿತು ಎಂದು ಯೋಚಿಸಲು ಹೇಳಿ. ಅವರ ಸಂಸತ್ ಕ್ಷೇತ್ರದಲ್ಲಿ ಏನೆಲ್ಲ ಆಗಿದೆ ಎಂದು ಮೆಲುಕು ಹಾಕಲಿ” ಎಂದು ತಿರುಗೇಟು ನೀಡಿದರು.

Exit mobile version