Site icon Vistara News

Cauvery Water Dispute: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ, ಕರ್ನಾಟಕದ ಅಳಲಿಗೆ ಸಿಗುತ್ತಾ ಮನ್ನಣೆ?

KRS Mandya

ಬೆಂಗಳೂರು: ಬರಗಾಲದ ಕಾರಣದಿಂದ ಕಾವೇರಿ ನೀರು ಹಂಚಿಕೆ ವಿವಾದ (Cauvery Water Dispute) ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ, ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ (CWRC) ನಡೆಯಲಿದೆ.

ಇಂದು ಮಧ್ಯಾಹ್ನ 2:30ಕ್ಕೆ ಸಭೆ ನಿಗದಿಯಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಭಾಗಿಯಾಗಲಿದ್ದಾರೆ. CWRC ಅಧ್ಯಕ್ಷರು ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದಿಂದ ಈ ಬಾರಿ ನೀರು (Cauvery Water) ಬಿಡುವುದು ಕಷ್ಟ ಸಾಧ್ಯ. ಕಳೆದ ಎರಡು ಬಾರಿಯೂ ಕಾವೇರಿ ನೀರು ಪ್ರಾಧಿಕಾರ (CWMA) ನೀಡಿದ ಆದೇಶಗಳನ್ನು ಚಾಚು ತಪ್ಪದೇ ಕರ್ನಾಟಕ ಪಾಲಿಸಿದೆ. ಆದರೆ ಕರ್ನಾಟಕದಲ್ಲಿ ಮುಂಗಾರು ಮಳೆಯಾಗಿಲ್ಲದಿರುವುದರಿಂದ ಈಗ ಕುಡಿಯುವ ನೀರಿಗೂ ತೊಂದರೆ ಇದೆ. ಕರ್ನಾಟಕದ ಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಈ ಮಧ್ಯೆ ತಮಿಳುನಾಡು ಸಹ ನಮಗೆ ನೀರಿನ ಅವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ವಿವರಣೆ ನೀಡಲಿದೆ. ಅತ್ತ ಮಂಡ್ಯ ಪ್ರಾಂತ್ಯದಲ್ಲಿ ರೈತರು ಕಾವೇರಿ ನೀರಿನ ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಇಂದಿನ CWRC ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. CWMA ಆದೇಶ ಹಾಗೇ ಮುಂದುವರಿಯಲಿದೆಯಾ ಅಥವಾ ಮರುಪರಿಶೀಲನೆ ನಡೆಯಲಿದೆಯಾ ಎಂಬುದೇ ಎರಡೂ ರಾಜ್ಯಗಳಿಗೂ ಕುತೂಹಲಕಾರಿ ಸಂಗತಿಯಾಗಿದೆ.

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಈ ಮೊದಲು ಪ್ರತಿ ದಿನ 15 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಕರ್ನಾಟಕ ಸರ್ಕಾರ ಅದನ್ನು ಒಪ್ಪಿರಲಿಲ್ಲ. ಆಗ ತಮಿಳುನಾಡು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ಆಗಸ್ಟ್‌ 25ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಮುಂದೆ ನೀರು ಬಿಡಲು ಅಸಾಧ್ಯ ಎಂದು ಹೇಳಿತ್ತು.

ಎರಡೂ ಸರ್ಕಾರಗಳ ಪರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ವಿಶೇಷ ಕಾವೇರಿ ಪೀಠ ಯಾವುದೇ ಆದೇಶವನ್ನು ಹೊರಡಿಸಿರಲಿಲ್ಲ. ತಕ್ಷಣವೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸುವಂತೆ ಸೂಚಿಸಿತ್ತು. ಈ ನಡುವೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತನ್ನ ಹಿಂದಿನ ಆದೇಶವನ್ನು ಪರಿಷ್ಕರಿಸಿ ನೀರು ಬಿಡುಗಡೆ ಪ್ರಮಾಣವನ್ನು 5000 ಕ್ಯೂಸೆಕ್‌ಗೆ ಇಳಿಸಿದೆ. ನಂತರ ಸಮಿತಿಯ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ.

ಇದನ್ನೂ ಓದಿ: Cauvery Water Dispute: ತಮಿಳುನಾಡಿಗೆ ನೀರು ನಿಲ್ಲಿಸದಿದ್ರೆ, ಸೆ.12ರ ನಂತರ ಕಾವೇರಿ ರಕ್ಷಣಾ ಯಾತ್ರೆ: ಬಸವರಾಜ ಬೊಮ್ಮಾಯಿ

Exit mobile version