ಮಂಡ್ಯ: ಸಕ್ಕರೆ ನಾಡಿನಲ್ಲಿ ಕಾವೇರಿ ಕಿಚ್ಚು. ಮುಂದುವರಿದಿದೆ. ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು (Cauvery Water Dispute) ಖಂಡಿಸಿ ಬಿಜೆಪಿ ಹೋರಾಟ ನಡೆಸಿದ ಬೆನ್ನಲ್ಲೇ ರಾಜ್ಯ ರೈತ ಸಂಘದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಮಾಡಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ನಗರದ ಇಂಡುವಾಳು ಬಳಿ ಟ್ರ್ಯಾಕ್ಟರ್, ಎತ್ತಿನಗಾಡಿ ಹಾಗೂ ಜಾನುವಾರುಗಳ ಜತೆ ಹೆದ್ದಾರಿಯಲ್ಲಿ ಜಮಾಯಿಸಿದ ನೂರಾರು ರೈತರು, ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ 5 ಡಿಎಆರ್ ತುಕಡಿ ಸೇರಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ | Cauvery Water Dispute: ಮಂಡ್ಯದಲ್ಲಿ ಧಗಧಗಿಸಿದ ಕಾವೇರಿ ಕಿಚ್ಚು; ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ
ಮಂಡ್ಯ ರೈತರು ರೊಚ್ಚಿಗೆದ್ದರೆ ಹೆದ್ದಾರಿ ಬಂದ್ ಆಗುತ್ತದೆ
ಹಲವು ಬಾರಿ ಪ್ರತಿಭಟನೆ ನಡೆಸಿದರೂ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆಯಾಗುತ್ತಿದೆ. ಮೆಟ್ಟೂರು ಡ್ಯಾಂನಿಂದ ನಿತ್ಯ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಅವರು ಜಲ ವಿದ್ಯುತ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರಕ್ಕೆ ಮೆಟ್ಟೂರು ಡ್ಯಾಂನಿಂದ ಎಷ್ಟು ನೀರು ಬಿಡುಗಡೆಯಾಗುತ್ತಿದೆ ಎಂಬುವುದು ಗೊತ್ತಿಲ್ಲವೇ? ಎಂದ ರೈತರು, ತಕ್ಷಣ ತಮಿಳುನಾಡಿಗೆ ನೀರು ಹರಿಸುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಇಡೀ ಮಂಡ್ಯ ಜಿಲ್ಲೆಯ ರೈತರು ರೊಚ್ಚಿಗೆದ್ದರೆ ಹೆದ್ದಾರಿ ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಹೆದ್ದಾರಿಯಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ರೈತರು ಆಕ್ರೋಶ ಹೊರಹಾಕಿದರು. ಈ ವೇಳೆ ಸರ್ವೀಸ್ ರಸ್ತೆಯಲ್ಲೇ ರೈತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ವಾಗ್ದಾದ ನಡೆಯಿತು. ಪೊಲೀಸರನ್ನು ನೂಕಿ ಮುನ್ನುಗ್ಗಲು ಪ್ರಯತ್ನಿಸಿದ್ದರಿಂದ ರೈತರನ್ನು ಬಂಧಿಸಿ ವಾಹನಗಳಲ್ಲಿ ಕರೆದೊಯ್ದರು.
ನಮ್ಮನ್ನು ಬಂಧಿಸಿದರೂ, ಗಡಿಪಾರು ಮಾಡಿದರೂ ನಾವು ಹೆದರಲ್ಲ. ಈ ಸರ್ಕಾರ ಇದ್ದರೆ ಇನ್ನು 6 ತಿಂಗಳು ಇರಬಹುದು, ಇವರನ್ನು ಮನೆಗೆ ಕಳುಹಿಸುವುದು ನಮಗೆ ಗೊತ್ತು. ನಮ್ಮ ಕಾವೇರಿ ನೀರು ನಮಗೇ ಇಲ್ಲದಿದ್ದರೆ ಇವರು ಏನು ಆಡಳಿತ ನಡೆಸುತ್ತಾರೆ ಎಂದು ರಾಜ್ಯ ಸರ್ಕಾರದ ಎದುರು ರೈತರು ಆಕ್ರೋಶ ಹೊರಹಾಕಿದರು.
ಕಳೆದ 10 ದಿನಗಳಿಂದ 10ರಿಂದ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ನಮ್ಮಲ್ಲೇ ಮಳೆಯಿಲ್ಲ, ಮಳೆಯಾಗಿಲ್ಲ. ಜಿಲ್ಲೆಯಲ್ಲಿ 1 ಲಕ್ಷ ಎಕರೆ ಕಬ್ಬು ಇದೆ, ಒಂದೂವರೆ ಲಕ್ಷ ಎಕರೆ ಭತ್ತ ನಾಟಿಯಾಗುತ್ತಿದೆ. ನೀರಿಲ್ಲದಿದ್ದರೆ ಬೆಳೆಗಳು ಒಣಗುತ್ತವೆ. ತಮಿಳುನಾಡಿಗೆ ಕೂಡಲೇ ಕಾವೇರಿ ನೀರು ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್‌ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ