ಬೆಂಗಳೂರು: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ (Bengaluru bandh) ಹಾಗೂ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ (Karnataka bandh) ನಡೆಯುತ್ತಿದೆ. ಈ ವಿಚಾರವಾಗಿ ಜನರು ಪ್ರತಿಭಟನೆ ಮಾಡಲು ನಾವು ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇವೆ. ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಯಾವುದೇ ಪಕ್ಷದವರಾದರೂ ಉಳಿಸಿಕೊಳ್ಳಬೇಕು. ಜನರ ಹೋರಾಟಕ್ಕೆ ನಾವು ಅಡಚಣೆ ಮಾಡೋದಿಲ್ಲ. ಆದರೆ, ಎಲ್ಲರೂ ಶಾಂತಿ ಕಾಪಾಡಬೇಕು. ಜನರಿಗೆ ತೊಂದರೆ ಆಗಬಾರದು. ಜನ ಹೋರಾಟ ಮಾಡಲಿ. ಅದು ಅವರ ಹಕ್ಕು. ಆದರೆ ಶಾಂತಿ ಕಾಪಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರಿಗೂ ನಾವು ತೊಂದರೆ ಕೊಡೋಕೆ ಹೋಗುವುದಿಲ್ಲ. ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಕೆಲಸ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ (Supreme Court), ಹೈಕೋರ್ಟ್ (High Court) ತೀರ್ಪು ಇದೆ. ಅದನ್ನು ಅರಿತುಕೊಳ್ಳಬೇಕು. ಟಿವಿಯವರು ಕರೆಯುತ್ತಾರೆ, ಹೆಸರು ಕೊಡುತ್ತಾರೆ ಅಂತ ಮಾತನಾಡಿ ನಾಳೆ ಕೋರ್ಟ್‌ನಲ್ಲಿ ಸಮಸ್ಯೆ ಆಗೋದು ಬೇಡ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಂದ್ ಮಾಡೋರು ತೀರ್ಮಾನ ಮಾಡಲಿ ಎಂದು ಡಿ.ಕೆ. ಶಿವಕುಮಾರ್ ಪರೋಕ್ಷ ಎಚ್ಚರಿಕೆಯನ್ನು ನೀಡಿದರು.
ಈಗ ಎರಡು ಮೂರು ದಿನಗಳಿಂದ ಮಳೆ ಆಗಿ ಒಳ ಹರಿವು ಉತ್ತಮವಾಗಿ ಆಗಿದೆ. ಮೋಡ ಬಿತ್ತನೆ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಏನಾದರೂ ಮಾಡಲು ಸಾಧ್ಯ ಇದೆಯೇ ಅಂತ ಚರ್ಚೆ ಮಾಡಿದ್ದೇವೆ. ಈ ಸಂಬಂಧ ಎರಡು-ಮೂರು ಅಭಿಪ್ರಾಯಗಳು ಬಂದಿವೆ. ಈಗ ಇರುವ ಪರಿಸ್ಥಿತಿಯಲ್ಲಿ ಮುಂದೆ ನೀರು ಬಿಡೋದು ಕಷ್ಟ ಆಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜನ ಸಹಕಾರ ಕೊಡದಿದ್ದರೆ ಬಂದ್ ಮರ್ಯಾದೆ ಹೋಗುತ್ತದೆ
ಎರಡೆರಡು ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾವು ಜನರ ಜತೆ ಇದ್ದೇವೆ. ಜನಕ್ಕೆ ತೊಂದರೆ ಆಗಬಾರದು. ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ. ಅವರಲ್ಲಿಯೇ ಚರ್ಚೆಗಳು ಆಗುತ್ತಿದೆ. ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕೋರ್ಟ್ ವಿಚಾರವೂ ಅವರಿಗೆ ಗೊತ್ತಿದೆ. ಅದನ್ನು ಅವರು ನೋಡಲಿ ಎಂದು ಹೇಳಿದರು.
ಇದನ್ನೂ ಓದಿ: Camphor Benefits: ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ?
ನಾನು ಒಬ್ಬ ಮಂತ್ರಿಯಾಗಿ ಏನೂ ಮಾತನಾಡಲು ಆಗುತ್ತಿಲ್ಲ. ನಾನು ಕೋರ್ಟ್‌ಗೂ ಗೌರವ ಕೊಡಬೇಕು. ಜನರನ್ನೂ ಉಳಿಸಿಕೊಳ್ಳಬೇಕು. ಡೆವಿಲ್ ಆ್ಯಂಡ್ ದಿ ಡೀಪ್ ಸೀ ಅನ್ನೋ ರೀತಿ ನನ್ನ ಮತ್ತು ನಮ್ಮ ಸರ್ಕಾರದ ಪರಿಸ್ಥಿತಿ ಆಗಿದೆ. ಏನೇ ಆದರೂ ನಮ್ಮ ರಾಜ್ಯದ ಹಿತವನ್ನು ನಾವು ಕಾಪಾಡಬೇಕು. ಇದು ನಮ್ಮ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.