ಮಂಡ್ಯ: ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದ ಪರವಾಗಿ ಬರುತ್ತೆ ಎಂಬ ಆಸೆ ಇತ್ತು. ಆದರೆ, ಅದು ಪ್ರತಿ ಬಾರಿ ಸುಳ್ಳಾಗುತ್ತಿದೆ. ರಾಜಕೀಯ ವಿಚಾರ ನಾನು ಮಾತನಾಡಲ್ಲ, ನಮ್ಮ ಪರವಾಗಿ ನಿಂತು ಮಾತನಾಡಿ ಎಂಬ ಕಾರಣಕ್ಕೆ ಜನ ನನಗೆ ಅಧಿಕಾರ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ. ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಎರಡು ಸೆಕೆಂಡ್ ಯೋಚನೆ ಮಾಡದೆ ರಾಜೀನಾಮೆ ನೀಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಯಾರೊಬ್ಬರೂ ಮಧ್ಯೆ ಪ್ರವೇಶ ಮಾಡಲಾಗದಂತಹ ಸ್ಥಿತಿ ಇದೆ. ಕೇಂದ್ರ ಸರ್ಕಾರವೂ ಮಧ್ಯ ಪ್ರವೇಶ ಮಾಡಲಾಗಲ್ಲ ಎಂದು ಕೇಂದ್ರದ ಪರ ಬ್ಯಾಟಿಂಗ್ ಮಾಡಿದ ಅವರು, ಅಧಿಕಾರಿಗಳು ಹೇಳುವುದನ್ನು ಕೇಳಿದರೆ ಭಯವಾಗುತ್ತೆ. ಕೃಷಿ ಬಿಡಿ, ಕುಡಿಯುವ ನೀರಿಗೆ ತೊಂದರೆ ಎದುರಾಗುವ ಆತಂಕ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ | Cauvery Water Dispute: ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ; ಕೆಆರ್‌ಎಸ್‌ಗೆ ನುಗ್ಗಲು ಯತ್ನಿಸಿದ ರೈತರು ವಶಕ್ಕೆ
ಸಿಎಂ ಮೂರು ಸಭೆ ಕರೆದಿದ್ದದು, ಎಲ್ಲಾ ಸಭೆಯಲ್ಲೂ ನಾನು ಭಾಗವಹಿಸಿದ್ದೆ. ಪ್ರಾಧಿಕಾರ ಹಾಗೂ ಸಮಿತಿಯ ಮುಂದೆ ನಾವು ಹಿನ್ನಡೆ ಅನುಭವಿಸಿದ್ದೇವೆ ಎಂದರೆ, ನಾವೆಲ್ಲೋ ಸರಿಯಾದ ಮಾಹಿತಿ ನೀಡುತ್ತಿಲ್ಲ ಅಂತಾಯಿತು. ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಭಾಗವಹಿಸಿ ಮಾತನಾಡಿದರೆ, ನಮ್ಮ ರಾಜ್ಯದ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಅಟೆಂಡ್ ಮಾಡುತ್ತಾರೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು.
ಕುಡಿಯುವ ನೀರಿನ ಅಗತ್ಯತೆಗೆ ನೀರು ಬಿಟ್ಟರೆ, ಕೃಷಿಗೆ ನೀರು ಬಿಡಲಾಗಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಪರವಾಗಿ ನಿಲ್ಲಬೇಕಿದೆ. ಸರ್ಕಾರಕ್ಕೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇರುವ ನೀರು ಕುಡಿಯಲು ಬಳಸಿಕೊಂಡರೆ, ಸರ್ಕಾರ ಕೂಡಲೇ ರೈತರಿಗೆ ನಷ್ಟ ಪರಿಹಾರ ಘೋಷಣೆ ಮಾಡಲಿ ಎಂದು ಮನವಿ ಮಾಡಿದರು.
ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ
ನಾವು ನೀರು ಕೊಡಲ್ಲ ಎಂದು ವಾದ ಮಾಡಲು ಸಾಧ್ಯವಾಗಲ್ಲ. ನಮ್ಮಲ್ಲಿ ನೀರಿಲ್ಲ ಎಂಬುವುದನ್ನು ಮನದಟ್ಟು ಮಾಡಿಕೊಡಬೇಕು. ಇಲ್ಲಿ ತುಂಬಾ ರಾಜಕೀಯ ನಡೆಯುತ್ತಿದೆ. ಪರಸ್ಪರ ಕೂತು ಮಾತುಕತೆ ನಡೆಸಿ ಪರಿಹಾರ ಕಂಡು ಹಿಡಿದುಕೊಳ್ಳಬೇಕು. ಪಾಕಿಸ್ತಾನ ಜತೆಗೆ ನಾವು ಕೂತು ಮಾತುಕತೆ ನಡೆಸುತ್ತೇವೆ. ಆದರೆ, ತಮಿಳುನಾಡಿನ ಜತೆಗೆ ಯಾಕೆ ಮಾತನಾಡಲು ಆಗಲ್ಲ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Cauvery Dispute : ಹೆಜ್ಜೆ ಹೆಜ್ಜೆಗೂ ತಪ್ಪು, ನಿರ್ಲಕ್ಷ್ಯ, ಸ್ವಾರ್ಥ ರಾಜಕಾರಣ; ಕಾವೇರಿ ಹಿನ್ನಡೆಗೆ ಕಾರಣ ಪಟ್ಟಿ ಮಾಡಿದ HDK
ಅಂಬರೀಶ್ ಅವರು ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಾವೂ ಅದೇ ಹಾದಿಯಲ್ಲಿ ಹೋರಾಟ ರೂಪಿಸುತ್ತೇವೆ. ಜನ, ರೈತರು ಏನು ಹೇಳುತ್ತಾರರೋ ಅದನ್ನೇ ಮಾಡುತ್ತೇನೆ ಎನ್ನುವ ಮೂಲಕ, ಜನರು ಹೇಳಿದರೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು.