Site icon Vistara News

Cauvery water dispute : ಕನ್ನಡಿಗರಿಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಡಿಸಿಎಂಗೆ ಸಂತೋಷವಾಗುತ್ತಿದೆ!

HD kumaraswamy infront of KRS dam

ಬೆಂಗಳೂರು: ರಾಜ್ಯದ ಜನರು ನೀರಿಲ್ಲದೆ ಸಂಕಷ್ಟದಲ್ಲಿ ಇದ್ದರೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌ (Water Resources Minister and Deputy CM DK Shivakumar) ಅವರು ತಮಿಳುನಾಡಿಗೆ ಕಾವೇರಿ ನೀರನ್ನು (Cauvery water to Tamil Nadu) ಸಂತೋಷವಾಗಿ ಬಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನು ಮಳೆ ಬರುವ ಸಾಧ್ಯತೆ ಬಹಳ ಕಡಿಮೆ. ಜಲಾಶಯಗಳು ಬರಿದಾಗಿವೆ. ಇದ್ದ ನೀರಿನಲ್ಲಿ ಬಹುಪಾಲನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ಬಗ್ಗೆ ಪ್ರಾಯಶ್ಚಿತ್ತವೇ ಇಲ್ಲದ ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ನೀರು ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇವರಿಗೆ ರಾಜ್ಯದ ಜನ ಕಷ್ಟದಲ್ಲಿ ಇದ್ದರೆ ಸಂತೋಷ ಆಗುತ್ತದೆ ಎನ್ನುವ ವಿಷಯ ತಿಳಿದು ಅಚ್ಚರಿ ಆಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಇದನ್ನೂ ಓದಿ: Operation Hasta : ಆಪರೇಷನ್‌ ಹಸ್ತ ಮಾಡಲ್ಲ, ಹಾಲಿ ಶಾಸಕರನ್ನು ಸೆಳೆಯಲ್ಲ; ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಡಿ.ಕೆ. ಶಿವಕುಮಾರ್‌ ತಮಿಳುನಾಡಿನ ಏಜೆಂಟಾ?

ಕಾವೇರಿ ಜಲ ನಿಯಂತ್ರಣ ಮಂಡಳಿಯ (Cauvery Water Regulation Board) ಮುಂದೆ ತಮಿಳುನಾಡು 12,500 ಕ್ಯೂಸೆಕ್ ನೀರು ಬಿಡಿಸಿ ಎಂದು ಬೇಡಿಕೆ ಇಟ್ಟಿತ್ತು. ಸಮಿತಿ ದೊಡ್ಡ ಮನಸ್ಸು ಮಾಡಿ ಕೇವಲ ಮುಂದಿನ 18 ದಿನಗಳ ಕಾಲ 3,000 ಕ್ಯೂಸೆಕ್ ಮಾತ್ರ ಬಿಡುಗಡೆ ಮಾಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ಅದು ತಮಗೆ ಸಂತಸ ಉಂಟು ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ಇವರು ಕರ್ನಾಟಕದ ಉಪ ಮುಖ್ಯಮಂತ್ರಿಯಾ? ಅಥವಾ ತಮಿಳುನಾಡಿನ ಏಜೆಂಟಾ? (Agent of Tamil Nadu) ಎಂದು ಎಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಎಚ್‌ಡಿಕೆ ಬೇಸರ

ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬೇಡಿ ಎಂದು ಜನರು ಮತ್ತು ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿದ್ದರೆ ಇವರು ಸಂತೋಷವಾಗಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಡಿಸಿಎಂ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ

ಜಲ ಸಂಪನ್ಮೂಲ ಸಚಿವರು ನೀಡುತ್ತಿರುವ ಹೇಳಿಕೆಗಳು ರಾಜ್ಯಕ್ಕೆ ಧಕ್ಕೆ ತರುತ್ತಿವೆ. ಬುಧವಾರ ಹೇಳಿಕೆ ನೀಡಿದ್ದ ಅವರು ಕೆಆರ್‌ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅಧಿಕಾರಿಗಳು ನೀರೇ ಇಲ್ಲ ಎಂದು ನಿಯಂತ್ರಣ ಸಮಿತಿ ಸಭೆಯಲ್ಲಿ ಹೇಳುತ್ತಾರೆ. ಜನರು ಯಾರ ಮಾತು ನಂಬುವುದು? ಮಂಗಳವಾರ ಸಚಿವರು ನೀಡಿರುವ ಹೇಳಿಕೆಯಂತೂ ಬೇಜವಾಬ್ದಾರಿಯ ಪರಮಾವಧಿ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಇದನ್ನೂ ಓದಿ: Cauvery water dispute : ಕರ್ನಾಟಕ ಬಂದ್‌ಗೆ ಬಿಜೆಪಿ-ಜೆಡಿಎಸ್‌ ಜಂಟಿ ಬೆಂಬಲ; ಕಾವೇರಲಿದೆಯೇ ಹೋರಾಟ?

ಈ ವಿವರ ಸಚಿವರ ಬಳಿ ಇದೆಯಾ?

ನಾನಿಂದು ಮೆಟ್ಟೂರು ಜಲಾಶಯದ ನೀರಿನ ಮಟ್ಟದ ವಿವರಗಳನ್ನು ತರಿಸಿದ್ದೇನೆ. 124.80 ಅಡಿ ಗರಿಷ್ಠ ಮಟ್ಟದ ಆ ಜಲಾಶಯದಲ್ಲಿ ಬುಧವಾರ 38.02 ಅಡಿ ನೀರಿತ್ತು. 11.09 ಟಿಎಂಸಿ ನೀರು ಸಂಗ್ರಹ ಇದೆ. 7231 ಕ್ಯೂಸೆಕ್ ಒಳಹರಿವು ಇದ್ದರೆ, 6500 ಕ್ಯೂಸೆಕ್ ಹೊರ ಹರಿವು ಇದೆ. ಈ ವಿವರ ಸಚಿವರ ಬಳಿ ಇದೆಯಾ? ಅವರು ಕೊಡುತ್ತಿರುವ ಹೇಳಿಕೆಗಳಿಗೆ ತಾಳಮೇಳ ಇದೆಯಾ? ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

Exit mobile version