Site icon Vistara News

Cauvery Water Dispute: ಕಾವೇರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು; ಸುಪ್ರೀಂ ಕೋರ್ಟ್‌ಗೆ ಅರ್ಜಿ

8 votes cast in Chandigarh mayoral election were Valid Says Supreme Court

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ (Cauvery Water Dispute) ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಎರಡು ರಾಜ್ಯಗಳ ನಡುವಿನ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದು, ನಮ್ಮ ಪಾಲಿಗೆ ಬರಬೇಕಿದ್ದ ಕಾವೇರಿ ನೀರನ್ನು ಕರ್ನಾಟಕ ಸರ್ಕಾರ ಬಿಡುತ್ತಿಲ್ಲ ಎಂದು ಆರೋಪಿಸಿದೆ.

ಆ.11ರಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನದಿ ನೀರು ಬಿಡುಗಡೆ ಬಗ್ಗೆ ತಮಿಳುನಾಡು ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದೆ. ಈ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸರ್ಕಾರ 113 ಪುಟಗಳ ವಿವರವಾದ ಅರ್ಜಿ ಸಲ್ಲಿಕೆ ಮಾಡಿದೆ.

ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪ್ರಧಾನಿಗೆ ಬರೆದ ಪತ್ರ ಸೇರಿದಂತೆ ಎಲ್ಲ ವಿವರಗಳನ್ನು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖ ಮಾಡಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ತಮಿಳುನಾಡಿಗೆ ನೀರಿನ ಕೊರತೆಯಾಗಿದೆ. ಕೊರತೆಯಾಗಿರುವ 28.8 ಟಿಎಂಸಿ ನೀರನ್ನು ಕರ್ನಾಟಕ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಪ್ರಸ್ತುತ ಆಗಸ್ಟ್ ತಿಂಗಳ ಪೂರ್ತಿ ನೀರು ಬಿಡಲು ಸೂಚಿಸಬೇಕು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಜಲ ಆಯೋಗವನ್ನು ಪ್ರತಿವಾದಿಯಾಗಿ ಸೇರಿಸಬೇಕು ಎಂದು ತಮಿಳುನಾಡು ಸರ್ಕಾರ ಮನವಿ ಮಾಡಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯು ಆಗಸ್ಟ್ 22 ರವರೆಗೆ 15 ದಿನಗಳ ಕಾಲ 15,000 ಕ್ಯೂಸೆಕ್ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಇದಕ್ಕೆ ಶುಕ್ರವಾರ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಅಸಮ್ಮತಿ ಸೂಚಿಸಿದ್ದರು. ಆಗಸ್ಟ್ 22 ರವರೆಗೆ ತಮಿಳುನಾಡಿಗೆ ಕೇವಲ 8,000 ಕ್ಯೂಸೆಕ್‌ಗಳನ್ನು ಮಾತ್ರ ಬಿಡುಗಡೆ ಮಾಡಬಹುದಷ್ಟೇ ಎಂದು ಕರ್ನಾಟಕ ಸರ್ಕಾರ ತಿಳಿಸಿತ್ತು. ಇದು ತಮಿಳುನಾಡಿನ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Karnataka Politics : ಡಿಕೆಶಿ ಕೈಯಲ್ಲಿ ಕಮಿಷನ್‌ ಬಾಂಬ್! ಆಪರೇಷನ್‌ ಹಸ್ತದ ಸುಳಿವು ಕೊಟ್ಟರಾ ಡಿಸಿಎಂ?

ತಮಿಳುನಾಡಿನ ವಾದವೇನು?

ನೀರು ಬಿಡದ ಕಾರಣ ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಬೆಳೆಗಳು ಒಣಗುತ್ತಿವೆ. ಹೀಗಾಗಿ ತಮ್ಮ ಪಾಲಿನ ನೀರು ಬಿಡುಗಡೆಗ ಮಾಡಬೇಕು ಎಂದು ಕರ್ನಾಟಕವನ್ನು ತಮಿಳುನಾಡು ಒತ್ತಾಯಿಸಿದೆ. ಆದರೆ, ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಇದರಿಂದ ರಾಜ್ಯದ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

Exit mobile version