Site icon Vistara News

‌Cauvery water dispute : ಸುಪ್ರೀಂ ಕೋರ್ಟ್‌ ನೀರು ಬಿಡಲು ಹೇಳಿದರೆ ಬೊಮ್ಮಾಯಿ ಕೂಡಾ ಏನು ಮಾಡೋಕೆ ಆಗುತ್ತೆ: ಡಿ.ಕೆ. ಶಿವಕುಮಾರ್

Basavaraj Bommai and DK Shivakumar talk about Cauvery water dispute

ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಾವೇರಿ ನೀರು (Cauvery water to Tamil Nadu) ಬಿಡಿ ಅಂದಾಗ, ನಾವೇನು ಮಾಡಲು ಆಗುತ್ತದೆ? ಬಸವರಾಜ ಬೊಮ್ಮಾಯಿ (Basavaraj Bommai) ಏನು ಮಾಡಲು ಆಗುತ್ತದೆ? ನಾವೆಲ್ಲರೂ ಸುಪ್ರೀಂ ಕೋರ್ಟ್‌ಗೆ ಗೌರವ ಕೊಡಲೇ ಬೇಕು ಎಂದು ಕಾವೇರಿ ಜಲ ವಿವಾದಕ್ಕೆ (‌Cauvery water dispute) ಸಂಬಂಧಪಟ್ಟಂತೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ತಿರುಗೇಟು ನೀಡಿದ್ದಾರೆ.

ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿರುವುದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಂಡಿಸಿದ್ದರು. ಅಲ್ಲದೆ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು, ಕಾನೂನು ಹೋರಾಟ ಮಾಡಬೇಕು ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಿಜೆಪಿ ಸರ್ಕಾರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ. ಅವರ ಸಲಹೆಯನ್ನು ಒಪ್ಪುತ್ತೇನೆ. ಆದರೆ, ಅವರ ಸರ್ಕಾರ ಇದ್ದಾಗ ಏನು ಮಾಡಿದ್ದರು? ರಾತ್ರೋ ರಾತ್ರಿ ನೀರು ಬಿಟ್ಟಿಲ್ಲವೇ? ನಮಗೂ ಯಾವುದೇ ಕಾರಣಕ್ಕೂ ನೀರು ಬಿಡಲು ಇಷ್ಟ ಇಲ್ಲ. ಆದರೆ, ಸೆಪ್ಟೆಂಬರ್‌ 21ರಂದು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕು. ಹಾಗಾಗಿ ಕೋರ್ಟ್ ಸೂಚನೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವ ಸಂಬಂಧ ನಾನು ನವ ದೆಹಲಿಗೆ ಹೋಗುತ್ತಿದ್ದೇನೆ. ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಮೇಲೆ ನಾವೆಲ್ಲರೂ ಸೇರಿ ಒತ್ತಡ ಹಾಕುತ್ತೇವೆ. ನಮ್ಮ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ, ಅವರಿಂದ ಸಲಹೆ ಕೊಡಿಸಬೇಕು. ರಾಜಕಾರಣವನ್ನು ಪಕ್ಕಕ್ಕೆ ಇಟ್ಟು, ಜನರ ಹಿತ ಕಾಪಾಡಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ದೇವೇಗೌಡರು ಪಾರ್ಲಿಮೆಂಟ್‌ನಲ್ಲಿ ಇದ್ದಾರೆ. ಅವರ ಸಲಹೆ ಕೂಡ ನಮಗೆ ಬಹಳ ಮುಖ್ಯವಾಗುತ್ತದೆ. ಅವರ ಹಿರಿತನದ ಅನುಭವವು ನಮಗೆ ಬೇಕಿದೆ. ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಸಿಎಂ ಆಗಿದ್ದವರು. ಈಗ ಇರುವ ತಜ್ಞರೆಲ್ಲರೂ ಅವರ ಸರ್ಕಾರ ನೇಮಕ ಮಾಡಿದವರೇ ಇದ್ದಾರೆ. ಹೀಗಾಗಿ ಮೊದಲು ದೆಹಲಿಗೆ ನಡೆಯಿರಿ, ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತವನ್ನು ಕಾಪಾಡಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು: ಸಚಿವ ದಿನೇಶ್ ಗುಂಡೂರಾವ್

ಕಾವೇರಿ ಜಲವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಕೆಲವು ತೀರ್ಮಾನ ತೆಗೆದುಕೊಂಡಿತ್ತು. ಈ ಬೆಳವಣಿಗೆ ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕುಳಿತು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ರಾಜ್ಯದ ಪರವಾಗಿ ಏನೇನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಪಡುವಂಥದ್ದು ಇಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇದನ್ನೂ ಓದಿ: Weather report : ಬೆಂಗಳೂರು ಸೇರಿ ಕರಾವಳಿಯಲ್ಲಿಂದು ಮಳೆ ಚುರುಕು

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಒಂದೊಂದು ಸನ್ನಿವೇಶದಲ್ಲಿ ಒಂದೊಂದು ಬೇಡಿಕೆ ಬರುತ್ತಿರುತ್ತವೆ. ಮಳೆ‌ ಕಡಿಮೆಯಾದಾಗ ಬೇಡಿಕೆಗಳು ಹೆಚ್ಚಾಗುತ್ತದೆ. ಬೇಡಿಕೆಗಳು ಹೆಚ್ಚಾದಾಗ ಒತ್ತಡಗಳು ಬರುತ್ತವೆ. ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಪಾದಯಾತ್ರೆ ಮಾಡಿದ್ದೆವು. ತಮಿಳುನಾಡು – ಕರ್ನಾಟಕ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆದಿವೆ. ಈಗ ಪ್ರಾಧಿಕಾರ ರಚನೆ ಆಗಿದೆ. ಒಂದೆಡೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಪ್ರಾಧಿಕಾರಕ್ಕೆ ಸಂಪೂರ್ಣ ನಿಯಂತ್ರಣದ ಅಧಿಕಾರ ಇದೆ. ಈ ಹಿಂದೆ ಏನಾಯಿತು ಎಂಬುದು ಮುಖ್ಯ ಅಲ್ಲ, ಇವತ್ತು ಏನಾಯಿತು ಎಂಬುದು ಮುಖ್ಯ. ನೀರಿನ ವಿಚಾರ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಈಗಲೂ ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದರು.

Exit mobile version