ನವದೆಹಲಿ: ಕಾವೇರಿ ಜಲಾನಯನ ವ್ಯಾಪ್ತಿಯ ರಾಜ್ಯಗಳಿಗೆ ಸೇರಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (cauvery water management authority) ಸಭೆಯು ಜೂನ್ 16, ಶುಕ್ರವಾರ ದಿಲ್ಲಿಯಲ್ಲಿ ನಡೆಯಲಿದೆ. ಆದರೆ, ಕರ್ನಾಟಕದ ಮಟ್ಟಿಗೆ ಅಂಥ ಖುಷಿಯ ಸುದ್ದಿಯೇನೂ ಇಲ್ಲ. ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು (mekedatu project) ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿಯ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಾಗಿ, ಶುಕ್ರವಾರ ನಡೆಯುವ ಸಭೆಯಲ್ಲಿ ಮೇಕೆದಾಟು ವಿಷಯ ಚರ್ಚೆಗೆ ಬರುವುದಿಲ್ಲ ಎನ್ನಲಾಗುತ್ತಿದೆ.
ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ವಿವಾದಗಳಿವೆ. ರಾಜ್ಯವು ತನ್ನಪಾಲಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದ್ದರೂ ನೆರೆಯ ತಮಿಳುನಾಡು ಅದಕ್ಕೂ ಕ್ಯಾತೆ ತೆಗೆದಿದೆ. ಅಲ್ಲದೇ, ಕರ್ನಾಟಕದ ಕೈಗೊಳ್ಳಲಿರುವ ಮೇಕೆದಾಟು ಪ್ರಾಜೆಕ್ಟ್ ಕುರಿತು ತಮಿಳುನಾಡು ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಈ ಹಿಂದೆ ನಡೆದ ಸಭೆಯಲ್ಲಿ ಕಾವೇರಿ ಅಂತಿಮ ತೀರ್ಪಿನ ಪ್ರಕಾರ, ಮೇಕೆದಾಟು ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಪ್ರಾಧಿಕಾರಕ್ಕೆ ಇದೆ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಭಿಪ್ರಾಯಪಟ್ಟಿದ್ದರು. ಆ ಬಳಿಕ ಹಲವು ಪ್ರಾಧಿಕಾರದ ಸಭೆಗಳ ನಡೆದರೂ ಮೇಕೆದಾಟು ಯೋಜನೆಯ ಕುರಿತು ಚರ್ಚೆ ನಡೆದಿಲ್ಲ.
ಈ ಸುದ್ದಿಯನ್ನೂ ಓದಿ: Mekedatu Project: ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ!, ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ
ವಿಧಾನಸಭೆ ಚುನಾವಣೆಗಿಂತಲೂ ಮುಂಚೆ ಕರ್ನಾಟಕದಲ್ಲಿ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್, ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡಿತ್ತು. ಆ ಪಕ್ಷವೇ ಈಗ ಅಧಿಕಾರದಲ್ಲಿದೆ. ಹಾಗಾಗಿ, ಶುಕ್ರವಾರ ನಡೆಯುವ ಸಭೆಯ ಮೇಲೆ ಹೆಚ್ಚು ಕುತೂಹಲ ಮೂಡಿದೆ. ಅಲ್ಲದೇ, ಈ ಕುರಿತು ಕಾಂಗ್ರೆಸ್ ಸರ್ಕಾರವು ಕೇಂದ್ರ ಸರಕಾರದ ಮೇಲೆ ಯಾವ ರೀತಿ ಒತ್ತಟ ಹಾಕಲಿದೆ ಎಂದು ಕಾದು ನೋಡಬೇಕಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.