ಬೆಂಗಳೂರು: ಒಂದು ಹಂತದಲ್ಲಿ ಕಸುವನ್ನೇ ಕಳೆದುಕೊಂಡಿದ್ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಕೇಸ್‌ಗೆ ಸಿಬಿಐ ಮರುಜೀವ ನೀಡಿದೆ. ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮೇಲಿನ ಪ್ರಕರಣವಾಗಿದ್ದು, ಸಿಬಿಐ ಅದನ್ನು ಮತ್ತೆ ಕೆಣಕಿರುವುದರಿಂದ ಕೆಪಿಸಿಸಿ ಅಧ್ಯಕ್ಷರಿಗೆ ಭೂಸಂಕಟ ಎದುರಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಏನಾಗಿತ್ತು? ಈಗ ಏನಾಗಿದೆ?
ಡಿ.ಕೆ. ಶಿವಕುಮಾರ್ ಅವರು ಬೆನ್ನಿಗಾನಹಳ್ಳಿಯಲ್ಲಿ ಡಿನೋಟಿಫಿಕೇಶನ್ ಮೂಲಕ ಭೂಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಈ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತದಲ್ಲಿ ಎಫ್ ಐ ಆರ್ ಆಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ದಾಖಲಾಗಿತ್ತು.
ದೂರು ಸಲ್ಲಿಸಿದ್ದರೂ ಸರಿಯಾದ ದಾಖಲೆ ನೀಡಿಲ್ಲ ಎಂಬ ಕಾರಣಕ್ಕಾಗಿ ಅಬ್ರಹಾಂ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿತ್ತು. ಆಗ ಸುಪ್ರೀಂಕೋರ್ಟ್ ಅಬ್ರಹಾಂಗೆ ೨೫ ಲಕ್ಷ ರೂ. ದಂಡ ವಿಧಿಸಿತ್ತು. ಇದಾದ ಬಳಿಕ ಅಬ್ರಹಾಂ ಪ್ರಕರಣವನ್ನು ವಾಪಸ್ ಪಡೆದಿದ್ದರು.
ಈಗ ಮತ್ತೆ ಸಿಕ್ಕಿತು ಜೀವ
ಈ ನಡುವೆ, ಸಿಬಿಐ ಟಿ.ಜೆ ಅಬ್ರಹಾಂ ಅವರಿಗೆ ಒಂದು ನೋಟಿಸ್ ಜಾರಿಗೊಳಿಸಿದೆ. ಅದರಲ್ಲಿ, ನೀವು ಈ ಹಿಂದೆ ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಬಗ್ಗೆ ನಿಮ್ಮ ಬಳಿ ದಾಖಲೆಗಳಿದ್ದರೆ ತೆಗೆದುಕೊಂಡು ಬನ್ನಿ ಎಂದು ಅಬ್ರಹಾಂಗೆ ಸೂಚಿಸಿದೆ. ಶುಕ್ರವಾರ (ಡಿಸೆಂಬರ್ ೧೬) ಸಂಜೆ ನಾಲ್ಕು ಗಂಟೆಯ ಒಳಗೆ ದಾಖಲೆಗಳನ್ನು ತಂದು ಕೊಡಬೇಕು, ವಿಚಾರಣೆಗೆ ಹಾಜರಾಗಬೇಕು ಎಂದು ಅದು ತಿಳಿಸಿದೆ.
ಸಿಬಿಐ ಈಗಾಗಲೇ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದೆ. ಈ ವಿಚಾರಕ್ಕೆ ಪೂರಕವಾದ ಕೆಲವು ವಿಚಾರಗಳು ಅಬ್ರಹಾಂ ಅವರು ಸಲ್ಲಿಸಿರುವ ದೂರಿನಲ್ಲಿ ಇರಬಹುದು ಎನ್ನುವ ಇರಾದೆಯಲ್ಲಿ ಸಿಬಿಐ ಮಾಹಿತಿ ಕೇಳಿದೆ ಎಂದು ಭಾವಿಸಲಾಗಿದೆ.
ಇದನ್ನೂ ಓದಿ | CBI RAID: ಡಿ.ಕೆ. ಶಿವಕುಮಾರ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ: ಆಸ್ತಿಪಾಸ್ತಿ ದಾಖಲೆಗಳ ಪರಿಶೀಲನೆ