ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನವೇ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ (Illegal Mining Case) ಸಂಬಂಧಿಸಿದಂತೆ ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಸ್ವಿಟ್ಜರ್‌ಲೆಂಡ್ ಸೇರಿ ನಾಲ್ಕು ದೇಶಗಳಲ್ಲಿ ಜನಾರ್ದನ ರೆಡ್ಡಿ ಅವರು ಹೂಡಿಕೆ ಮಾಡಿರುವ ಕುರಿತು ಮಾಹಿತಿ ಪಡೆಯುವ ದಿಸೆಯಲ್ಲಿ ಆಯಾ ರಾಷ್ಟ್ರಗಳ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಸಿಬಿಐಗೆ ಅನುಮತಿ ನೀಡಿದೆ.
ವಿದೇಶದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಹೂಡಿಕೆ ಮಾಡಿರುವ ಕುರಿತು ಮಾಹಿತಿ ನೀಡುವಂತೆ ಸ್ವಿಟ್ಜರ್‌ಲೆಂಡ್, ಐಲ್ ಆಫ್ ಮ್ಯಾನ್, ಸಿಂಗಾಪುರ ಹಾಗೂ ಯುಎಇಯಲ್ಲಿರುವ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಿಬಿಐ ಈಗ ಮನವಿ ಮಾಡಲಿದೆ. ಹಾಗೊಂದು ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆ ಕುರಿತು ನಾಲ್ಕೂ ದೇಶಗಳು ಮಾಹಿತಿ ನೀಡಿದರೆ ಜನಾರ್ದನ ರೆಡ್ಡಿ ಅವರು ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Janardhan Reddy: ನಮ್ಮವರೇ ನನ್ನನ್ನು ಬಳ್ಳಾರಿಯಲ್ಲಿ ಇರದಂತೆ ಮಾಡಿದರು: ಗಾಲಿ ಜನಾರ್ದನ ರೆಡ್ಡಿ
ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವ ದಿಸೆಯಲ್ಲಿ ಆಯಾ ದೇಶಗಳ ಪ್ರಾಧಿಕಾರಗಳ ನೆರವು ಪಡೆಯಲು ಭಾರತೀಯ ಅಪರಾಧ ಸಂಹಿತೆ (CrPC)ಯ ಸೆಕ್ಷನ್ 166-ಎ ಅಡಿಯಲ್ಲಿ ಸಿಬಿಐ ಸಲ್ಲಿಸಿದ ಮನವಿಗೆ ಸಿಬಿಐ ಕೇಸ್‌ಗಳ ವಿಶೇಷ ನ್ಯಾಯಾಧೀಶೆ ಚಂದ್ರಕಲಾ ಅವರು ಸಮ್ಮತಿ ಸೂಚಿಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಜನಾರ್ದನ ರೆಡ್ಡಿ ಅವರು ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರಿಗೆ ಹಿನ್ನಡೆಯಾದಂತಾಗಿದೆ.