ಬೆಂಗಳೂರು: ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ದರೋಡೆ ಕೇಸ್‌ನಲ್ಲಿ ಸಿಸಿಬಿ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಸುಳ್ಳು ಕೇಸ್ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು, ಪ್ರಕರಣದಲ್ಲಿ ವರ್ಗಾವಣೆ, ವೇಶ್ಯಾವಾಟಿಕೆ ದಂಧೆಯ ಕಿಂಗ್‌ಪಿನ್ ಸ್ಯಾಂಟ್ರೋ ರವಿ ಹಾಗೂ ಇನ್ಸ್‌ಪೆಕ್ಟರ್ ಪ್ರವೀಣ್ ಕುತಂತ್ರದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಾಕು ತೋರಿಸಿ ದರೋಡೆ ಮಾಡಿದ್ದರು ಎಂದು ಪ್ರಕಾಶ್ ಎಂಬುವವರು ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದೂರು ನೀಡಿದ್ದರು. ತನಿಖೆ ವೇಳೆ ಹಲವಾರು ಸಾಕ್ಷ್ಯಗಳನ್ನು ಸಿಸಿಬಿ ಕಲೆಹಾಕಿತ್ತು. ಸ್ಯಾಂಟ್ರೋ ರವಿ ತನಗೆ ಪರಿಚಯವಿದ್ದ ಪ್ರಕಾಶ್ ಮೂಲಕ ಸುಳ್ಳು ದೂರು ಕೊಡಿಸಿದ್ದ ಎಂಬುವುದು ಬಯಲಾದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.
ಇದನ್ನೂ ಓದಿ | Road Accident: ಮಕ್ಕಳೂ ಸೇರಿ 7 ಪಾದಚಾರಿಗಳ ಮೇಲೆ ಹರಿದ ಟಂಟಂ; ಕುಡಿದ ಅಮಲಿನಲ್ಲಿ ಘೋರ ಅವಘಡ!
ವರ್ಗಾವಣೆ ದಂಧೆಯಲ್ಲಿ ಡೀಲ್ ಮಾಡಿದ್ದ ಹಣವನ್ನು ಸ್ಯಾಂಟ್ರೋ ರವಿ ಮನೆಯಲ್ಲಿಟ್ಟಿದ್ದ. ಆ ಹಣವನ್ನು ಸ್ಯಾಂಟ್ರೋ ಪತ್ನಿ ಬಳಸಿಕೊಂಡಿದ್ದರಿಂದ ಇಬ್ಬರ ಮಧ್ಯೆ ಜಗಳ ಆಗಿತ್ತು ಇದೇ ವಿಚಾರಕ್ಕೆ ಪತ್ನಿ ಹಾಗೂ ಆಕೆಯ ಸಹೋದರಿಯ ಮೇಲೆ ಸೇಡು ತೀರಿಸಿಕೊಳ್ಳಲು ಸ್ಯಾಂಟ್ರೋ ರವಿ ಮುಂದಾಗಿದ್ದ. ಇನ್ಸ್‌ಪೆಕ್ಟರ್ ಪ್ರವೀಣ್ ಬಳಿ ತನ್ನ ಪತ್ನಿ ಹಾಗೂ ಆಕೆಯ ಸಹೋದರಿಯ ಮೇಲೆ ಕೇಸ್ ದಾಖಲಿಸುವಂತೆ ಮಾತುಕತೆ ನಡೆಸಿದ್ದ. ನಂತರ ತನಗೆ ಪರಿಚಯವಿದ್ದ ಪ್ರಕಾಶ್ ಮೂಲಕ ಸುಳ್ಳು ಕೇಸ್ ಹಾಕಿಸಿದ್ದ. ಅದಕ್ಕೆ ಸಾಕ್ಷಿಯಾಗಿ ಶೇಖ್ ಸಲಾವುದ್ದೀನ್‌ನನ್ನು ರೆಡಿ ಮಾಡಿದ್ದ ಎನ್ನಲಾಗಿದೆ.
ಶೇಖ್ ಸಲಾವುದ್ದೀನ್ ಪ್ರಕರಣ ನಡೆದಾಗ ಸ್ಯಾಂಟ್ರೋ ರವಿ ಪತ್ನಿ ಜತೆ ಇದ್ದೆ ಅಂದಿದ್ದ. ಹೀಗಾಗಿ ಪ್ರಕಾಶ್ ನೀಡಿದ ದೂರಿನನ್ವಯ ಸ್ಯಾಂಟ್ರೋ ಪತ್ನಿ, ಆಕೆಯ ಸಹೋದರಿ ಹಾಗೂ ಸಲಾವುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದರು. ಪ್ರಕಾಶ್‌ಗೆ ಹೊಸ ಆಟೋ ಕೊಡಿಸುವ ಆಮಿಷವೊಡ್ಡಿ ದೂರು ನೀಡಲು ಸ್ಯಾಂಟ್ರೋ ರವಿ ತಯಾರಿ ಮಾಡಿದ್ದ ಎಂಬುವುದು ತಿಳಿದುಬಂದಿದೆ.
ಕೋಡೆ ಸರ್ಕಲ್ ಬಳಿ ಚಿನ್ನಾಭರಣ ಹಾಗೂ ನಗದನ್ನು ಸುಲಿಗೆ ಮಾಡಿದ್ದರು ಎಂದು ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಸ್ಯಾಂಟ್ರೋ ಪತ್ನಿ, ಆಕೆಯ ಸಹೋದರಿ ಹಾಗೂ ಶೇಖ್ ಸಲಾವುದ್ದೀನ್‌ನನ್ನ ಬಂಧಿಸಿ ಜೈಲಿಗಟ್ಟಿದ್ದರು.
ಜಾಮೀನು ಪಡೆದು ಬಂದ ಬಳಿಕ ಸುಳ್ಳು ಕೇಸ್ ಹಾಕಿದ್ದಾರೆ ಎಂದು ಸ್ಯಾಂಟ್ರೋ ಪತ್ನಿ ಆರೋಪಿಸಿದ್ದರು. ನಂತರ ತನಿಖೆ ಮಾಡುವಂತೆ ಪೊಲೀಸ್ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಆರೋಪಿ ಶೇಖ್ ಸಲಾವುದ್ದೀನ್‌ನನ್ನ ಕರೆಯಿಸಿ ಸಿಸಿಬಿ ವಿಚಾರಣೆ ನಡೆಸಿತ್ತು. ಈ ವೇಳೆ ಸ್ಯಾಂಟ್ರೋ ರವಿಯ ನಾಟಕ ಬಯಲಾಗಿದೆ.
ಇದನ್ನೂ ಓದಿ | Bangalore News: ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದ ಯುವಕ- ಯುವತಿ ಬಾತ್‌ರೂಮ್‌ನಲ್ಲಿ ಸಾವು
ಸದ್ಯ ಎಲ್ಲಾ ಮಾಹಿತಿಯನ್ನು ಕಲೆಹಾಕಿದ ಸಿಸಿಬಿ ಎಸಿಪಿ ಡಿ.ಕುಮಾರ್ ತಂಡ, ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಪೋಸ್ಟಿಂಗ್ ಆಸೆಗೆ ಬಿದ್ದು ಸುಳ್ಳು ಕೇಸ್ ದಾಖಲಿಸಿದ್ದಾಗಿ ಇನ್ಸ್‌ಪೆಕ್ಟರ್ ಪ್ರವೀಣ್ ನೀಡಿದ್ದ ಹೇಳಿಕೆಯನ್ನೂ ಬಿ ರಿಪೋರ್ಟ್‌ನಲ್ಲಿ ದಾಖಲು ಮಾಡಲಾಗಿದೆ. ಸಿಸಿಬಿ ತನಿಖೆಯಲ್ಲಿ ಸುಳ್ಳು ಕೇಸ್ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದ್ದು, ಕೋರ್ಟ್ ಅನುಮತಿ ಪಡೆದು ಇನ್ಸ್‌ಪೆಕ್ಟರ್ ಮೇಲೆ ಕೇಸ್ ದಾಖಲಿಸುವ ಸಾಧ್ಯತೆ ಇದೆ.