ಬೆಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನು ಮತ್ತು ರಾಜ್ಯ ಬಿಜೆಪಿ (BJP Karnataka) ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕೇಂದ್ರದಿಂದ ಕಳಿಸಲಾಗಿದ್ದ ಮನಸುಖ್ ಮಂಡಾವಿಯಾ ಹಾಗೂ ವಿನೋದ್ ತಾವ್ಡೇ ಅವರ ವೀಕ್ಷಕರ ತಂಡ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರ್ಧ ದಿನ ಉಳಿದಿದ್ದ ಇಬ್ಬರೂ, ಬಿಜೆಪಿಯ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಅನೇಕ ಶಾಸಕರ ಅಭಿಪ್ರಾಯ ಸಂಗ್ರಹಿಸಿತು.
ನಂತರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ತೆರಳಿದ ಇಬ್ಬರೂ, ಅವರ ಜತೆಗೂ ಕೆಲಕಾಲ ಚರ್ಚೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷರ ಜತೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕನ ಕುರಿತೂ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.
ಸಭೆಯ ನಂತರ ಹೊರಬಂದು ಮಾತನಾಡಿದ ಆರ್. ಅಶೊಕ್, ಈಗ ಕೇಂದ್ರದ ನಾಯಕರು ಆಗಮಿಸಿ ಸೀನಿಯರ್ ನಾಯಕರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ವಿಚಾರಕ್ಕೆ ಅಭಿಪ್ರಾಯ ಪಡೆದುಕೊಂಡಿದ್ದಾರೆ. ವಿಪಕ್ಷ ನಾಯಕ ಹಾಗೂ ಅಧ್ಯಕ್ಷ ಸ್ಥಾನದಲ್ಲಿ ಯಾರೆಲ್ಲ ರೇಸ್ ನಲ್ಲಿ ಇದ್ದಾರೆ ಅಂತ ನಿಮಗೆ ಗೊತ್ತಿದೆ. ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಬಹುಶಃ ಮಂಗಳವಾರ ರಾತ್ರಿಯೇ ವಿಪಕ್ಷ ನಾಯಕ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಾನು ಪಕ್ಷ ಏನು ನಿರ್ಧಾರ ತಗೊಳ್ಳುತ್ತೋ ಅದಕ್ಕೆ ಬದ್ದ ಅಂತಾ ಹೇಳಿದ್ದೇನೆ ಎಂದಷ್ಟೇ ಹೇಳಿ ಹೊರಟರು.
ಇದನ್ನೂ ಓದಿ: BJP Politics : ಸೋಲಿಗೆ ಕಟೀಲ್ ಕಾರಣ, ರಾಜ್ಯಾಧ್ಯಕ್ಷತೆಗೆ ರಾಜೀನಾಮೆ ಕೊಡಲಿ; ರೇಣುಕಾಚಾರ್ಯ ಸವಾಲು
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ಕೇಂದ್ರ ಸಚಿವ ಮನ್ಸುಖ್ ಮಂಡಾವಿಯ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯರಾದ ವಿನೋದ್ ತಾವ್ಡೆ ಅವರು ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿ ತೆರಳಿದ್ದಾರೆ. ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇನ್ನೂ ಕೆಲವರ ಜತೆ ಚರ್ಚಿಸಿ ರಾಜ್ಯ ಅಧ್ಯಕ್ಷರು ಯಾರು ಮತ್ತು ಯಾರು ವಿಪಕ್ಷ ನಾಯಕರೆಂದು ಪಕ್ಷ ಪ್ರಕಟಿಸಲಿದ್ದಾರೆ.
ವಿಪಕ್ಷ ನಾಯಕರ ಕುರಿತು ಶೀಘ್ರವೇ ಅವರು ತಿಳಿಸಲಿದ್ದಾರೆ. ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆಯ ವಿಪಕ್ಷ ನಾಯಕರ ಹೆಸರನ್ನೂ ತಿಳಿಸುತ್ತಾರೆ. ಕೆಲವೇ ಸಮಯದಲ್ಲಿ ವಿಪಕ್ಷ ನಾಯಕರು ಮತ್ತು ರಾಜ್ಯ ಅಧ್ಯಕ್ಷರ ಕುರಿತ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.