Site icon Vistara News

CM Siddaramaiah: ಹೆಸರು ಪಿಎಂ ಆವಾಸ್ ಯೋಜನೆ, ಕೇಂದ್ರ ಕೊಡೋದು ಮಾತ್ರ ಬರೀ 12 ಸಾವಿರ ಎಂದ ಸಿಎಂ

CM Siddaramaiah

ತಿ.ನರಸೀಪುರ: ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ 1.28 ಲಕ್ಷ ಕೊಡುತ್ತಿತ್ತು. ಉಳಿದ 3.80 ಲಕ್ಷ ರೂಪಾಯಿಯನ್ನು ಫಲಾನುಭವಿ ಕೊಡಬೇಕು. ಆಗ ಅವರಿಗೆ ಮನೆ ಸಿಗುತ್ತದೆ. ಆದರೆ ಕೇಂದ್ರ ಸರ್ಕಾರ ಪ್ರತಿ ಮನೆಗೆ 18% GST ವಸೂಲಿ ಮಾಡುತ್ತದೆ. ಅಂದರೆ ಪ್ರತಿ ಕೊಳೆಗೇರಿ ಮನೆಗೆ 1.38 ಲಕ್ಷ ಸಾವಿರ ರೂಪಾಯಿಯನ್ನು GST ಹೆಸರಲ್ಲಿ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುತ್ತದೆ. ಅಂದರೆ, 1.50 ಲಕ್ಷ ರೂಪಾಯಿ ಸಹಾಯಧನ ಕೊಟ್ಟು, ಅದರಲ್ಲಿ 1.38 ಲಕ್ಷ ರೂ. ವಾಪಸ್ ವಸೂಲಿ ಮಾಡಿದರೆ ಕೇಂದ್ರ ಸರ್ಕಾರ ಎಷ್ಟು ಕೊಟ್ಟಂಗಾಯ್ತು? ಬರೀ 12 ಸಾವಿರ ರೂಪಾಯಿ ಮಾತ್ರ. ಬರೀ 12 ಸಾವಿರ ಕೊಟ್ಟು ಅದಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಟೀಕಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ನರಸೀಪುರ ವಿಧಾನಸಭಾ ಕ್ಷೇತ್ರದ ನರಸೀಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೊಳೆಗೇರಿ ನಿವಾಸಿಗಳಿಂದಲೂ 18% GST ಸುಲಿಗೆ ಮಾಡುವ ಈ ಕ್ರಮದಿಂದ ನನಗೆ ಬಹಳ ಬೇಸರ ಆಯಿತು. ಹೀಗಾಗಿ ಪ್ರತಿ ಫಲಾನುಭವಿಗಳು ಕಟ್ಟಬೇಕಿದ್ದ ಅವರ ಪಾಲಿನ 3.80 ಲಕ್ಷ ರೂ.ಗಳಲ್ಲಿ 1 ಲಕ್ಷ ಮಾತ್ರ ಅವರಿಂದ ಕಟ್ಟಿಸಿಕೊಂಡು ಉಳಿದ ಹಣವನ್ನು ನಮ್ಮ ಸರ್ಕಾರದಿಂದಲೇ ಕಟ್ಟಿಸಲು ನಾನು ನಿರ್ಧರಿಸಿದೆ. ಹೀಗಾಗಿ ಪ್ರತಿ ಕೊಳೆಗೇರಿ ಮನೆಗೆ 4 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ನಮ್ಮ ರಾಜ್ಯ ಸರ್ಕಾರ ಕಟ್ಟುತ್ತೆ . ಕೇಂದ್ರ ಸರ್ಕಾರದ ಪಾಲು ಕೇವಲ 12 ಸಾವಿರ ರೂಪಾಯಿ. ಆದರೆ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ವ್ಯಂಗ್ಯವಾಡಿದರು.

ಇದು ವಂಚನೆ ಅಲ್ವಾ ? ಇದು ಅನ್ಯಾಯ ಅಲ್ವಾ ? ಈ ಅನ್ಯಾಯಕ್ಕೆ ಮೋದಿ ಸರ್ಕಾರಕ್ಕೆ ಮತ ಹಾಕಬೇಕಾ ಎಂದು ಪ್ರಶ್ನಿಸಿದ ಅವರು, ಹಾಗೆಯೇ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಹಣ 4 ಲಕ್ಷ ಕೋಟಿ. ಇದರಲ್ಲಿ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 53 ಸಾವಿರ ಕೋಟಿ. ಇದು ಅನ್ಯಾಯ ಅಲ್ವಾ? ಈ ಅನ್ಯಾಯಕ್ಕೆ ಬಿಜೆಪಿಗೆ ಮತ ಹಾಕ್ಬೇಕಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | ವರುಣಾದಲ್ಲಿ 60 ಸಾವಿರ ಲೀಡ್‌ ಕೊಟ್ಟರೆ ಮಾತ್ರ ಸಿಎಂ ಸ್ಥಾನದಲ್ಲಿ ಉಳಿಯುವೆ ಎಂದ ಸಿದ್ದರಾಮಯ್ಯ!

ರಾಜ್ಯಕ್ಕೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಈಗ ಓಟು ಕೇಳೋಕೆ ಮಾತ್ರ ಬರುತ್ತಿದ್ದಾರೆ. ಈ ಚಂದಕ್ಕೆ ಮೋದಿಗೆ ಓಟು ಹಾಕ್ಬೇಕಾ ಎಂದು ವ್ಯಂಗ್ಯದಿಂದ ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಕೇಂದ್ರದ ಮೋದಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಬಲಪಡಿಸಿ ಎಂದು ಕರೆ ನೀಡಿದರು.‌

Exit mobile version