Site icon Vistara News

Drought Relief: 3,454 ಕೋಟಿ ರೂ. ಬರ ಪರಿಹಾರ; ‘ಅರೆಕಾಸಿನ ಮಜ್ಜಿಗೆ’ ಎಂದ ಸಿದ್ದರಾಮಯ್ಯ!

cm siddaramaiah

ಕಲಬುರಗಿ: ಕರ್ನಾಟಕ ಸರ್ಕಾರವು ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋದ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ (Drought Relief) ನೀಡಿದೆ. ಬರ ಪರಿಹಾರ ಬಿಡುಗಡೆ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, “ಕೇಂದ್ರ ಸರ್ಕಾರವು ನಾವು ಕೇಳಿದ್ದಕ್ಕಿಂತ ತುಂಬ ಕಡಿಮೆ ಹಣ ಬಿಡುಗಡೆ ಮಾಡಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

“ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ಬೆಳೆ ನಷ್ಟವಾಗಿದೆ. 48 ಸಾವಿರ ಹೆಕ್ಟೇರ್‌ ಬೆಳೆ ನಾಶ ಆಗಿದೆ. 223 ತಾಲೂಕುಗಳು ಬರಪೀಡಿತ ಎಂಬುದಾಗಿ ಘೋಷಣೆ ಮಾಡಿದ್ದೇವೆ. ಹಾಗಾಗಿ, ನಾವು ಕೇಂದ್ರ ಸರ್ಕಾರಕ್ಕೆ 18,172 ಕೋಟಿ ರೂ. ಪರಿಹಾರ ಕೇಳಿದ್ದೆವು. ಆದರೆ, ಈಗ ಕೇಂದ್ರ ಸರ್ಕಾರವು ನಾವು ಕೇಳಿದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಪರಿಹಾರ ನೀಡಿದೆ. ಇದು ತುಂಬ ಕಡಿಮೆ ಆಯಿತು. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂಬುದಾಗಿ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.

ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಅವರು, “ಕರ್ನಾಟಕದಲ್ಲಿ ನಿನ್ನೆ (ಏಪ್ರಿಲ್‌ 26) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತದಾನವಾಗಿದೆ ಎಂಬುದಾಗಿ ವರದಿ ತಿಳಿಸಿದೆ. ಕರ್ನಾಟಕ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳು ಜನ ನಮ್ಮ ಮೇಲೆ ಹೆಚ್ಚು ವಿಶ್ವಾಸ ಇರಿಸಲು ಕಾರಣವಾಗಿದೆ. ಹಾಗಾಗಿ, ಎಲ್ಲ ಕ್ಷೇತ್ರಗಳಲ್ಲೂ ನಮಗೆ ಮುನ್ನಡೆ ಸಿಗುವುದು ನಿಶ್ಚಿತ” ಎಂದು ಹೇಳಿದರು. ನರೇಂದ್ರ ಮೋದಿ ಅಬ್ಬರದ ಭಾಷಣ, ಕಾಂಗ್ರೆಸ್‌ ವಿರುದ್ಧ ಟೀಕೆಗಳ ಕುರಿತು ಮಾತನಾಡಿದ ಅವರು, “ಪ್ರಧಾನಿಯವರಿಗೆ ಸುಳ್ಳು ಹೇಳುವುದು ರೂಢಿಯಾಗಿದೆ. ಆ ಸುಳ್ಳುಗಳನ್ನು ಜನ ಇನ್ನು ನಂಬುವುದಿಲ್ಲ” ಎಂದು ಕುಟುಕಿದರು.

ಮಲತಾಯಿ ಧೋರಣೆ ಎಂದ ಕೃಷ್ಣ ಭೈರೇಗೌಡ

ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಕೇವಲ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಈ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಧನ್ಯವಾದ ಎಂದ ಕರ್ನಾಟಕ ಬಿಜೆಪಿ

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಬಿಜೆಪಿ, “ಬರ ಪರಿಹಾರ ಮಾಡಿದ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದಿದೆ.

ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ನರೇಂದ್ರ ಮೋದಿಯವರು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ” ಎಂದಿದೆ.

ಇದನ್ನೂ ಓದಿ: Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Exit mobile version