ಬೆಂಗಳೂರು: ಎಂಜಿನಿಯರಿಂಗ್ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET 2024) ಔಟ್ ಆಫ್ ಸಿಲಬಸ್ (Out Of Syllabus) ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ (Karnataka Government) ವರದಿ ಸಲ್ಲಿಸಿದೆ. ತಜ್ಞರ ಸಮಿತಿಯ ವರದಿ ಅನ್ವಯ ರಾಜ್ಯ ಸರ್ಕಾರವು ಸೋಮವಾರ (ಏಪ್ರಿಲ್ 29) ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಮರು ಪರೀಕ್ಷೆ ನಡೆಸಲಾಗುತ್ತದೆಯೋ ಅಥವಾ ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆಯೋ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಮೂಡಿದೆ.
ಪಿಯು ಬೋರ್ಡ್ ಹಾಗೂ ಕೆಇಎ ನಡುವೆ ಪಠ್ಯಕ್ರಮದ ಕುರಿತು ಪತ್ರಗಳ ಸಮರ ನಡೆದಿದೆ. ಇದರ ಮಧ್ಯೆಯೇ, ಸಿಇಟಿ ಗೊಂದಲವೂ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ. ಹಾಗಾಗಿ, ಸಿಇಟಿ ವೇಳೆ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲು ಏನು ಕಾರಣ? ಎಲ್ಲಿ ಲೋಪವಾಯಿತು ಎಂಬುದರ ಕುರಿತು ವರದಿ ಆಧರಿಸಿ ರಾಜ್ಯ ಸರ್ಕಾರವು ಸೋಮವಾರವೇ ತೀರ್ಮಾನ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನವೀಗ ರಾಜ್ಯ ಸರ್ಕಾರದ ಮೇಲಿದೆ.
ಎಂಜಿನಿಯರಿಂಗ್ ಸೇರಿ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏಪ್ರಿಲ್ 18 ಮತ್ತು 19ರಂದು ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳ ಕುರಿತಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ಈಗಾಗಲೇ ಭುಗಿಲೆದ್ದಿದೆ. 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಮಾಡಲಾಗಿದೆ. ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರದಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ಪಿಯು ಬೋರ್ಡ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡುವೆ ಪತ್ರ ಸಮರವೂ ನಡೆದಿತ್ತು. ಕೊನೆಗೆ ಎಚ್ಚೆತ್ತ ಸರ್ಕಾರ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.
ಪ್ರತಿ ಪತ್ರಿಕೆಯೂ 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎಷ್ಟು ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿವೆಯೋ ಅಷ್ಟು ಕೃಪಾಂಕ ನೀಡಬಹುದು. ಹಾಗೆ ನೀಡಿದರೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಪಿಯು ಅಂಕಗಳನ್ನಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿದರೆ ಸಿಇಟಿ ಉದ್ದೇಶ, ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹಾಗಾಗಿ, ಮರು ಪರೀಕ್ಷೆ ನಡೆಸುವ ಅಥವಾ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಶೇ.100ಕ್ಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಕೆಇಎ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಪದವಿ ಪೂರ್ಣ ಶಿಕ್ಷಣ ಇಲಾಖೆಯು 2023-24ನೇ ಶೈಕ್ಷಣಿಕ ಸಾಲಿನಲ್ಲಿ ಕೈಬಿಟ್ಟಿರುವ ಪಾಠದ ಪ್ರಶ್ನೆಗಳನ್ನು ಕೇಳಿರುವ ಕುರಿತು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆರೋಪಿಸಿದ್ದರು. ಹಾಗಾಗಿ, ರಾಜ್ಯ ಸರ್ಕಾರವು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಿತ್ತು. ತಜ್ಞರ ಸಮಿತಿಯು ಏಪ್ರಿಲ್ 25ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದನ್ನೂ ಓದಿ: UPSC EXAM-2023: ಲಕ್ಷಾಂತರ ರೂಪಾಯಿ ಸಂಬಳವಿದ್ದ ಉದ್ಯೋಗವನ್ನೇ ತೊರೆದಿದ್ದ ಯುಪಿಎಸ್‌ಸಿ ಟಾಪರ್ ಆದಿತ್ಯ ಶ್ರೀವಾಸ್ತವ