Site icon Vistara News

ಎಕ್ಸಾಂ ಟೆನ್ಷನ್‌, ಹಿಜಾಬ್‌ ಕನ್ಫ್ಯೂಷನ್‌ ನಡುವೆ ನಡೆದ ಸಿಇಟಿ ಪರೀಕ್ಷೆ

puc

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ಮಹಾದ್ವಾರವಾಗಿರುವ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಒಂದೆಡೆ ಎಕ್ಸಾಂ ಟೆನ್ಷನ್‌ ಆದರೆ ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ಸರ್ಕಾರ, ಅಧಿಕಾರಿಗಳಿಗೆ ಹಿಜಾಬ್‌ ಕನ್ಫ್ಯೂಷನ್‌. ಇದೆರಡರ ನಡುವೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಮೊದಲ ದಿನ ಜೀವಶಾಸ್ತ್ರ ಹಾಗೂ ಗಣಿತ ವಿಷಯಕ್ಕೆ ಪರೀಕ್ಷೆ ನಡೆದಿದ್ದು, ನೀಟ್ ಮಾದರಿಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ |KCET 2022: ವೃತ್ತಿಪರ ಕೋರ್ಸ್‌ಗಳಿಗೆ ಜೂನ್‌ 16 ಮತ್ತು 18ಕ್ಕೆ ಸಿಇಟಿ ಪರೀಕ್ಷೆ

ಪರೀಕ್ಷೆ ಸಂಬಂಧ ಪ್ರಾಧಿಕಾರದ ಡೆಪ್ಯೂಟಿ ಡೈರೆಕ್ಟರ್ (DDPU) ಶ್ರೀರಾಮ್ ಪ್ರತಿಕ್ರಿಯಿಸಿದ್ದು, ಇಂದಿನ ಸಿಇಟಿ ಪರೀಕ್ಷೆ ಸರ್ಕಾರದ ಕ್ರಮದಂತೆ ನಡೆದಿದೆ. ಪರೀಕ್ಷಾ ಅಕ್ರಮ ತಡೆಯಲು ಸ್ಕ್ವಾಡ್ ನಿಯೋಜನೆ ಮಾಡಲಾಗಿತ್ತು. ಒಂದು ಎಕ್ಸಾಂ ಹಾಲ್‌ನಲ್ಲಿ 25 ವಿದ್ಯಾರ್ಥಿಗಳನ್ನ ಕೂರಿಸಿ ಪರೀಕ್ಷೆ ಬರೆಸಲಾಗಿದೆ.

ಇತ್ತೀಚೆಗೆ ನಡೆದ PSI ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳ ಅಕ್ರಮದಿಂದಾಗಿ ಕಳೆದ ಬಾರಿಗಿಂತ ಈ ಬಾರಿ ಶಿಸ್ತು ಕ್ರಮಕೈಗೊಳ್ಳಲಾಗಿದ್ದು, ಹೆಚ್ಚಿನ ನಿಗಾವಹಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಂತೆ ಯಾವುದೇ ತೊಂದರೆ ಇಲ್ಲದೆ ಸಿಇಟಿ ಪರೀಕ್ಷೆ ನಡೆದಿರುವುದಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ 87 ಪರೀಕ್ಷಾ ಕೇಂದ್ರಗಳು ಇದ್ದು, ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳ ಪೋಷಕರು ಇರದಂತೆ ಸೂಚನೆ ನೀಡಲಾಗಿತ್ತು. ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದಿದ್ದರು. ಇದಕ್ಕೆ ಅನುಮತಿ ನೀಡದ ಕಾರಣ ವಿದ್ಯಾರ್ಥಿನಿಗೆ ಆವರಣದಲ್ಲಿಯೇ ಹಿಜಾಬ್ ತೆಗೆದಿಡುವಂತೆ ಅಧಿಕಾರಿಗಳು ತಾಕೀತು ಮಾಡಿದ ಘಟನೆ ನಡೆಯಿತು. ನಂತರ ವಿದ್ಯಾರ್ಥಿನಿ ಹಿಜಾಬ್‌ ತೆಗೆದು ಪರೀಕ್ಷೆ ಬರೆಯಲು ತೆರಳಿದರು.

ಪ್ರಶ್ನೆಪತ್ರಿಕೆಯಲ್ಲಿ ಕಠಿಣ ಪ್ರಶ್ನೆ ಕೇಳುವ ಆತಂಕ ಹೊಂದಿದ್ದ ವಿದ್ಯಾರ್ಥಿಗಳು ನಂತರ ನಗುಮುಖದಿಂದಲ್ಲೇ ಹೊರಬಂದರು. ಕೇಳಿದ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಉತ್ತರ ಬರೆದಿದ್ದು, ನಾಳಿನ ಪರೀಕ್ಷೆಗೂ ತಯಾರಿ ನಡೆಸಿರುವುದಾಗಿ ವಿದ್ಯಾರ್ಥಿ ಅಮೋಘ್‌ ಹೇಳಿದರು.

ನಾಳಿನ ವೇಳಾಪಟ್ಟಿ ಹೀಗಿದೆ

ದಿನಾಂಕ: 17-6-2022
ಬೆಳಗ್ಗೆ 10.30 ರಿಂದ 11.50- ಭೌತಶಾಸ್ತ್ರ
ಮಧ್ಯಾಹ್ನ 2.30 ರಿಂದ 3.50- ರಸಾಯನಶಾಸ್ತ್ರ

ಇದನ್ನೂ ಓದಿ | Made In China Film | ಕನ್ನಡದ ಮೊದಲ ವರ್ಚುವಲ್‌ ಕತೆಯ ಸಿನಿಮಾ ಜೂನ್‌ 17ಕ್ಕೆ ತೆರೆಗೆ

Exit mobile version