ಬೆಂಗಳೂರು: ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸದೇ ಇರುವ ಕೆಇಎ ವಿರುದ್ಧ ಸಿಇಟಿ ರಿಪೀಟರ್ಸ್ ಪ್ರತಿಭಟನೆ (CET protest) ಮುಂದುವರಿದಿದೆ. ವಾರದೊಳಗೆ ಫಲಿತಾಂಶ ಸರಿಪಡಿಸಲು ಒತ್ತಾಯಿಸಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಆಗಸ್ಟ್ 4ರಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
2022-23ನೇ ಸಾಲಿನ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಫಲಿತಾಂಶದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಸಿಇಟಿ ರಿಪೀಟರ್ಸ್ ಅಸಮಾಧಾನವನ್ನು ಹೊರಹಾಕಿದ್ದು ಈ ಸಂಬಂಧ ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಇದನ್ನೂ ಓದಿ | ಸಿಇಟಿ ಫಲಿತಾಂಶದಲ್ಲಿ ಅನ್ಯಾಯ: ಕೆಇಎ ಎದುರು ರಿಪೀಟರ್ಸ್ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ
ಸರ್ಕಾರ ಹಾಗೂ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಬಾರದು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸರ್ಕಾರವೇ ಅನ್ಯಾಯ ಮಾಡುತ್ತಿದೆ. ಕೆಇಎ ಬೋರ್ಡ್ ಮುಂದೆ ಹೋರಾಟ ನಡೆಸಿದರೂ ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಂದು ಕಡೆ ಕೆಇಎ ಬೋರ್ಡ್ ನಿರ್ದೇಶಕಿ ವಿದ್ಯಾರ್ಥಿಗಳ ವಿರುದ್ದ ಹಗುರವಾಗಿ ಮಾತನಾಡಿದ್ದು, ನಿಮ್ಮ ಮಕ್ಕಳು ದಡ್ಡರು. ಕೋವಿಡ್ ಟೈಮ್‌ನಲ್ಲಿ ಎಕ್ಸಾಂ ಇಲ್ಲದೆ ಪಾಸ್ ಆಗಿದ್ದಾರೆ ಎಂದು ತುಚ್ಛವಾಗಿ ಮಾತನಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
24 ಸಾವಿರ ರಿಪೀಟರ್ಸ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಮುಂದಿನ ವಾರದಲ್ಲಿ ಡಾಕ್ಯುಮೆಂಟ್ ವೆರಿಫಿಕೇಷನ್ ಶುರುವಾಗಲಿದೆ. ಅಷ್ಟರೊಳಗೆ ನಮಗೆ ನ್ಯಾಯ ದೊರಕಿಸಿ ಇಲ್ಲದಿದ್ದಲ್ಲಿ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದು, ಜತೆಗೆ ಆಗಸ್ಟ್ 4ರಂದು ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | CET protest | ಕೆಇಎ ನಡೆ ವಿರೋಧಿಸಿ ಮತ್ತೊಮ್ಮೆ ಬೀದಿಗಿಳಿದ ರಿಪೀಟರ್ಸ್