ಬೆಂಗಳೂರು: ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸದೇ ಇರುವ ಕೆಇಎ ವಿರುದ್ಧ ಸಿಇಟಿ ರಿಪೀಟರ್ಸ್ ಪ್ರತಿಭಟನೆ (CET protest) ಮುಂದುವರಿದಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಾಧಿಕಾರದ ಮೇಲೆ ಅಸಮಾಧಾನವನ್ನು ಹೊರಹಾಕಿದ್ದಾರೆ.
2022-23ನೇ ಸಾಲಿನ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಫಲಿತಾಂಶದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಸಿಇಟಿ ರಿಪೀಟರ್ಸ್ ಅಸಮಾಧಾನವನ್ನು ಹೊರಹಾಕಿ, ಶನಿವಾರ ಬೀದಿಗಿಳಿದು ಪ್ರತಿಭಟಿಸಿದ್ದರು. ಸಿಬಿಎಸ್‌ಸಿ ಹಾಗೂ ಪಿಯು ಪರೀಕ್ಷೆಯ ಎರಡು ಅಂಕಗಳನ್ನು ಗಣನೆಗೆ ತೆಗೆದುಕೊಂಡಿರುವಂತೆ ನಮಗೂ ಪರಿಗಣಿಸಿ ಎಂದು ರಿಪೀಟರ್ಸ್ ವಿದ್ಯಾರ್ಥಿಗಳು (CET) ಆಗ್ರಹಿಸಿದ್ದರು. ಸೋಮವಾರವೂ ಈ ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಇಎ ಮುಂದೆ ಜಮಾಯಿಸಿ ಫಲಿತಾಂಶದಲ್ಲಿ ಅಸಮಾನತೆ ಇದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ರ‍್ಯಾಂಕಿಂಗ್ ಪರಿಗಣಿಸುವುದಿಲ್ಲ
ಜುಲೈ 30ರಂದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪಷ್ಟಪಡಿಸಿದ್ದು, ಸರ್ಕಾರದ ಆದೇಶದ ಪ್ರಕಾರ 2021ರ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು 2021-22ರ ಶೈಕ್ಷಣಿಕ ವರ್ಷಕ್ಕೆ ಸಿಇಟಿ ರ‍್ಯಾಂಕಿಂಗ್ ಪರಿಗಣಿಸಲಾಗಿಲ್ಲ ಹಾಗೂ 2022-23ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲೂ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
2021ರ ಮೇ 4ರಂದು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಪಡಿಸುವ ತೀರ್ಮಾನವನ್ನು ಮಾಡಲಾಯಿತು. ಹೀಗಾಗಿ ವಿದ್ಯಾರ್ಥಿಗಳ ಪ್ರಥಮ ಪಿಯು ಅಂಕ, ಎಸ್.ಎಸ್.ಎಲ್.ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡೆಗೊಳಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಕೇವಲ ಸಿಇಟಿ ಅಂಕ ಪರಿಗಣಿಸುವಂತೆ ಅಶ್ವತ್ಥನಾರಾಯಣ ಅವರಿಗೆ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. ಇದಕ್ಕೆ ಉನ್ನತ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಈಗ ಆ ವಿದ್ಯಾರ್ಥಿಗಳೇ 2022-23ನೇ ಸಾಲಿನಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದು, ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ನಿಯಮಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಕೆಇಎ ಸ್ಪಷ್ಟಪಡಿಸಿದೆ.
ಇದನ್ನೂ ಓದಿ | ಸಿಇಟಿ ಫಲಿತಾಂಶದಲ್ಲಿ ಅನ್ಯಾಯ: ಕೆಇಎ ಎದುರು ರಿಪೀಟರ್ಸ್ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ