ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ರಿಪೀಟರ್ಸ್ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು (CET Ranking) ಪರಿಗಣಿಸುವುದಿಲ್ಲವೆಂದು ಕೆಇಎ ಸ್ಪಷ್ಟಪಡಿಸಿದೆ. ಇದುವೇ ಈಗ ತಮ್ಮ ಭವಿಷ್ಯಕ್ಕೆ ಕುತ್ತು ತಂದಿದೆ ಎಂದು ರಿಪೀಟರ್ಸ್ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಒತ್ತಾಯ ಕೇಳಿ ಬಂದಿದೆ.
2020-21ನೇ ಸಾಲಿನಲ್ಲಿ ಸಾಂಕ್ರಾಮಿಕ ಕೋವಿಡ್ ಸೋಂಕು ಹರಡುವ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಲಾಯಿತು. ಈ ಕಾರಣದಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿತ್ತು. ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ | Teacher Recruitment 2022 | ಅರ್ಹ ಅಭ್ಯರ್ಥಿಗಳ ಕೊರತೆ ಎದುರಾದರೆ ಮತ್ತೊಮ್ಮೆ ಸಿಇಟಿ
ಈ ಬಾರಿ ಸುಮಾರು 24,000 ಮಂದಿ ರಿಪೀಟರ್ಸ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಕಳೆದ ವರ್ಷದ ನಿಯಮವನ್ನೇ ಈ ಬಾರಿ ಪರೀಕ್ಷೆ ಬರೆದ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಅನ್ವಯಿಸಿದ್ದು, ಕೇವಲ ಸಿಇಟಿ ಅಂಕ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಮೊದಲ ಬಾರಿಗೆ ಪರೀಕ್ಷೆ ಬರೆದ(ಫ್ರೆಶರ್) ವಿದ್ಯಾರ್ಥಿಗಳಿಗೆ ಪಿಯುಸಿ ಜತೆಗೆ ಸಿಇಟಿ (CET) ಅಂಕಗಳನ್ನು ಸೇರಿಸಿ ಫಲಿತಾಂಶ ನೀಡಲಾಗಿದೆ. ಕಳೆದ ಬಾರಿ ಶೇ.90 ಅಂಕ ಪಡೆದವರಿಗೂ 15,000 ಒಳಗೆ ರ‍್ಯಾಂಕಿಂಗ್ ದೊರೆತಿತ್ತು. ಆದರೆ ಈ ಬಾರಿ ಶೇ.98 ಅಂಕ ಪಡೆದಿದ್ದರೂ 1 ಲಕ್ಷದ ಮೇಲೆ ರ‍್ಯಾಂಕಿಂಗ್ ದೊರೆತಿದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ರಿಪೀಟರ್ಸ್ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವರ ಮನವಿಗೆ ಸ್ಪಂದಿಸಿದ್ದ ಅಶ್ವತ್ಥನಾರಾಯಣ
ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಕೇವಲ ಸಿಇಟಿ ಅಂಕ ಪರಿಗಣಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. 2021ರ ಮೇ 4ರಂದು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನವನ್ನು ಮಾಡಲಾಯಿತು. ವಿದ್ಯಾರ್ಥಿಗಳ ಪ್ರಥಮ ಪಿಯು ಅಂಕಗಳಲ್ಲದೇ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲಾಗಿತ್ತು.
ಸಾಮಾನ್ಯ ನಿಯಮವೇನು?
ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತದೆ. ದ್ವಿತೀಯ ಪಿಯುಸಿಯ ಶೇ.50ರಷ್ಟು ಹಾಗೂ ಸಿಇಟಿಯ ಶೇ.50ರಷ್ಟು ಅಂಕಗಳನ್ನು ಸೇರಿಸಿ ರ‍್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ ಈ ನಿಯಮವನ್ನು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಅನ್ವಯಿಸಿಲ್ಲ.
ಕಳೆದ ಬಾರಿಯ ಗ್ರೇಡಿಂಗ್ ಫಲಿತಾಂಶವನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು. ಹಾಗಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಸಿಇಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವಾಗ, ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು ಎಂಬುದನ್ನು ಗಮನಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಇದನ್ನೂ ಓದಿ | CET Result | ಜಿಲ್ಲಾವಾರು ಸಿಇಟಿ ಫಲಿತಾಂಶ, ಯಾವುದು ಫಸ್ಟ್, ಯಾವುದು ಲಾಸ್ಟ್?