ಬೆಂಗಳೂರು: ದ್ವಿತೀಯ ಪಿಯುಸಿ ಅಂಕ ಪರಿಗಣಿಸುವಂತೆ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು (CET Repeaters) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆಗಸ್ಟ್ 18ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನೈಜ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಕೆಇಎ ಮುಂದಿನ ವಿಚಾರಣೆಯವರೆಗೆ ವಾಸ್ತವಿಕ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲವೆಂದು ಸರ್ಕಾರದ ಪರವಾಗಿ ಹೈಕೋರ್ಟ್ ಹೆಚ್ಚುವರಿ ಅಡ್ವೋಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಎಎಜಿ ಧ್ಯಾನ್ ಚಿನ್ನಪ್ಪ ವಾದ ದಾಖಲೆ ಉಲ್ಲೇಖಿಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಬಾರಿ ಸುಮಾರು 24,000 ಮಂದಿ ರಿಪೀಟರ್ಸ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ, ಕಳೆದ 2020-21ನೇ ಸಾಲಿನಲ್ಲಿ ಸಾಂಕ್ರಾಮಿಕ ಕೋವಿಡ್ ಸೋಂಕು ಹರಡುವ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಲಾಯಿತು.
ಈ ಕಾರಣದಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿತ್ತು. ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆದ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿತ್ತು.
2022ನೇ ಸಾಲಿನಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಿಪೀಟರ್ಸ್‌ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು (CET Ranking) ಪರಿಗಣಿಸುವುದಿಲ್ಲವೆಂದು ಕೆಇಎ ಸ್ಪಷ್ಟಪಡಿಸಿತ್ತು. ಇದಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ | ಸಿಇಟಿ ಫಲಿತಾಂಶದಲ್ಲಿ ಅನ್ಯಾಯ: ಕೆಇಎ ಎದುರು ರಿಪೀಟರ್ಸ್ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ