ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯ ಸರ್ಕಾರ ನಡೆಸಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಪೂರ್ವ ಟಂಡನ್ ಇಂಜಿಯರಿಂಗ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದೆ.
ಅಪೂರ್ವ ಟಂಡನ್ ಶೇ. 98.611, ಬಿಎನ್‌ವೈಎಸ್ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಹೃಷಿಕೇಶ್ ನಾಗಭೂಷಣ್(ಶೇ.99.167), ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ಎಚ್‌ಎಎಲ್ ಪಬ್ಲಿಕ್ ಶಾಲೆಯ ಅರ್ಜುನ್ ರವಿಶಂಕರ್(ಶೇ.96.292) ಮೊದಲ ಸ್ಥಾನ ಗಳಿಸಿದ್ದಾರೆ.
ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಜೂನ್ 16 ರಿಂದ 18ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) (CET Result) ಪರೀಕ್ಷೆ ನಡೆದಿತ್ತು. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ 2,16,525 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು.
ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಫಲಿತಾಂಶ ಪ್ರಕಟಿಸಿದರು. ಕೆಇಎ ವೆಬ್‌ಸೈಟ್ kea.kar.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದೆ.
ಇದನ್ನೂ ಓದಿ | Teacher Recruitment 2022 | ಅರ್ಹ ಅಭ್ಯರ್ಥಿಗಳ ಕೊರತೆ ಎದುರಾದರೆ ಮತ್ತೊಮ್ಮೆ ಸಿಇಟಿ
ಬಾಗಲಕೋಟೆ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ. 82.59, ಬಿಎನ್‌ವೈಎಸ್ ವಿಭಾಗದಲ್ಲಿ ಶೇ. 78.31, ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಶೇ. 78, ಬಿವಿಎಸ್‌ಸಿ ವಿಭಾಗದಲ್ಲಿ ಶೇ. 78.31, ಬಿ ಫಾರ್ಮಾ ವಿಭಾಗದಲ್ಲಿ ಶೇ. 82.98 ಹಾಗೂ ಫಾರ್ಮಾ ಡಿ ವಿಭಾಗದಲ್ಲಿ ಶೇ. 82.98 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.