Site icon Vistara News

CET REVISED RESULTS | ಸಿಇಟಿ ಪರಿಷ್ಕೃತ ರ‍್ಯಾಂಕ್ ಪಟ್ಟಿ ಬಿಡುಗಡೆ, ಹಿಂದಿನ ಲಿಸ್ಟ್‌ಗೂ ಪರಿಷ್ಕೃತಕ್ಕೂ ಭಾರಿ ವ್ಯತ್ಯಾಸವಿಲ್ಲ

CET results

ಬೆಂಗಳೂರು: 2021-22ನೇ ಸಾಲಿನ ವೃತ್ತಿಪರ ಶಿಕ್ಷಣ ಪ್ರವೇಶ ಪರೀಕ್ಷೆ (ಸಿಇಟಿ)ಯ ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಗೊಂಡಿದೆ.
ಹೈಕೋರ್ಟ್‌ ಆದೇಶದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲು ಬಂದ ಫಲಿತಾಂಶಕ್ಕೂ ಪರಿಷ್ಕೃತ ಪಟ್ಟಿಗೂ ಭಾರಿ ವ್ಯತ್ಯಾಸವೇನೂ ಇಲ್ಲ ಎಂದು ತಿಳಿದು ಬಂದಿದೆ. ಮೊದಲ ೫೦೦ ರ‍್ಯಾಂಕ್‌ಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಸಿಇಟಿ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಕೆಇಎ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, Karresults.nic.in ವೆಬ್ ಸೈಟ್ ನೋಡಬಹುದು. ಕೋರ್ಸ್‌ ಮತ್ತು ಕಾಲೇಜುಗಳ ಆಯ್ಕೆಗಾಗಿ ಅಕ್ಟೋಬರ್‌ ೩ರಿಂದ ಕೌನ್ಸೆಲಿಂಗ್‌ ನಡೆಯಲಿದೆ.

ಮೊದಲ ೫೦೦ ರ‍್ಯಾಂಕ್‌ನಲ್ಲಿ ಬದಲಾವಣೆ ಇಲ್ಲ
ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್‍ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ. ಜುಲೈ 30ರಂದು ಹೊರಡಿಸಿದ್ದ ರ್‍ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್‍ಯಾಂಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೋದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡಾ 50ರಷ್ಟು ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡಾ 50ರಷ್ಟನ್ನು ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೋದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ 1,000ನೇ ರ್‍ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.

ಹಾಗೆಯೇ, 501ರಿಂದ 10,000ನೇ ರ್‍ಯಾಂಕಿಂಗ್‌ನಲ್ಲಿ ಹೋದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ 1 ಲಕ್ಷದವರೆಗಿನ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಾಕೆ ಪರಿಷೃತ ಪಟ್ಟಿ?
ಇತ್ತೀಚೆಗೆ ಪ್ರಕಟವಾದ ರ‍್ಯಾಂಕ್‌ ಪಟ್ಟಿಯ ಬಗ್ಗೆ ರಿಪೀಟರ್‌ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಹೊಸ ಪಟ್ಟಿ ಬಿಡುಗಡೆಯಾಗುತ್ತಿದೆ.
ಸಿಇಟಿ ರ‍್ಯಾಂಕ್‌ ಪಟ್ಟಿ ಪ್ರಕಟಿಸುವಾಗ ಸಾಮಾನ್ಯವಾಗಿ ಆ ವರ್ಷ ನಡೆದ ಸಿಇಟಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ 2020-21ನೇ ಸಾಲಿನಲ್ಲಿ ಸಾಂಕ್ರಾಮಿಕ ಕೋವಿಡ್‌ ಸೋಂಕು ಹರಡುವ ಭೀತಿಯಿಂದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಈ ಕಾರಣದಿಂದ ೨೦೨೨ರಲ್ಲಿ ನಡೆದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿತ್ತು. 2022ನೇ ಸಾಲಿನಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ರಿಪೀಟರ್ಸ್‌ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು (CET Ranking) ಪರಿಗಣಿಸುವುದಿಲ್ಲವೆಂದು ಕೆಇಎ ಸ್ಪಷ್ಟಪಡಿಸಿತ್ತು.

ಈ ನಡುವೆ ಪುನರಾವರ್ತಿತ ವಿದ್ಯಾರ್ಥಿಗಳು ಇದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಸುಮಾರು 24,000 ಮಂದಿ ರಿಪೀಟರ್ಸ್‌ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಇವರ ಮನವಿಯನ್ನು ಆಧರಿಸಿ ಹೈಕೋರ್ಟ್‌, ಪಿಯುಸಿ ಅಂಕಗಳನ್ನೂ ಪರಿಗಣಿಸಿ ರ‍್ಯಾಂಕ್‌ ಪಟ್ಟಿ ಪ್ರಕಟಿಸುವಂತೆ ಆದೇಶ ನೀಡಿದೆ.‌

KCET 2022 | ಸಿಇಟಿ ರ‍್ಯಾಂಕಿಂಗ್‌ ಬಿಕ್ಕಟ್ಟು ಶಮನ, ಸೆ.29ಕ್ಕೆ ಪರಿಷ್ಕೃತ ರ‍್ಯಾಂಕಿಂಗ್‌, ಅ.3ರಿಂದ ಕೌನ್ಸೆಲಿಂಗ್

Exit mobile version