Site icon Vistara News

CET REVISED RESULTS | ಮೊದಲ 500 ರ್‍ಯಾಂಕಿಂಗ್‌ನಲ್ಲಿ ವ್ಯತ್ಯಾಸವಾಗಿಲ್ಲ: ಸಚಿವ ಅಶ್ವತ್ಥನಾರಾಯಣ

CN Ashwathanarayana

ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್‍ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ. ಜುಲೈ 30ರಂದು ಹೊರಡಿಸಿದ್ದ ರ್‍ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್‍ಯಾಂಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೋದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡಾ 50ರಷ್ಟು ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡಾ 50ರಷ್ಟನ್ನು ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೋದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ 1,000ನೇ ರ್‍ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.

ಹಾಗೆಯೇ, 501ರಿಂದ 10,000ನೇ ರ್‍ಯಾಂಕಿಂಗ್‌ನಲ್ಲಿ ಹೋದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ 1 ಲಕ್ಷದವರೆಗಿನ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲಾಗಿತ್ತು. ಬಳಿಕ, ದ್ವಿತೀಯ ಪಿಯುಸಿ ಅಂಕಗಳನ್ನು ಮಾತ್ರ ಪರಿಗಣಿಸಿ ಅವರಿಗೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕೊಡಲಾಗಿತ್ತು. ಅಂಥವರ ಪೈಕಿ 24 ಸಾವಿರ ವಿದ್ಯಾರ್ಥಿಗಳು ಈ ವರ್ಷವೂ ಸಿಇಟಿ ಬರೆದಿದ್ದರು. ಇವರೆಲ್ಲ, ತಮ್ಮ ಸಿಇಟಿ ಅಂಕವನ್ನೂ ಪರಿಗಣಿಸಬೇಕೆಂದು ಕೋರಿ ಹೈಕೋರ್ಟಿನ ಮೆಟ್ಟಿಲು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

CET REVISED RESULTS | ಸಿಇಟಿ ಪರಿಷ್ಕೃತ ರ‍್ಯಾಂಕ್ ಪಟ್ಟಿ ಬಿಡುಗಡೆ, ಹಿಂದಿನ ಲಿಸ್ಟ್‌ಗೂ ಪರಿಷ್ಕೃತಕ್ಕೂ ಭಾರಿ ವ್ಯತ್ಯಾಸ

Exit mobile version