ವಿಜಯಪುರ: ಡಾಬಾದಲ್ಲಿ ಚಹಾ ಕುಡಿಯಲು ಕುಳಿತಕೊಳ್ಳುವ ಸಲುವಾಗಿ ಟೇಬಲ್‌ಗಾಗಿ ನಡೆದ ಜಗಳ ಚಾಕು ಇರಿತದಲ್ಲಿ ಕೊನೆಗೊಂಡು ಒಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ (Vijayapura News) ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ನಗರದ ಮನಗೂಳಿ ಬೈಪಾಸ್ ರಸ್ತೆಯ ಟೋಲ್ ಗೇಟ್ ಬಳಿಯ ಡಾಬಾದಲ್ಲಿ ಆಗಸ್ಟ್ 20ರಂದು ಈ ಘಟನೆ ನಡೆದಿತ್ತು. ಆದರೆ, ಆರೋಪಿಗಳು ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ವಿಜಯಪುರ ನಗರದ ಮನಗೂಳಿ ಬೈಪಾಸ್ ರಸ್ತೆಯ ಟೋಲ್ ಗೇಟ್ ಬಳಿಯ ಡಾಬಾಕ್ಕೆ ಆಗಸ್ಟ್ 20ರಂದು ಗಣಪತಿ ಸಿಂಗ್, ರಮೇಶ್ ಬಂದಿದ್ದಾರೆ. ಆಗ ಅಲ್ಲಿ ಖಾಲಿ ಇದ್ದ ಟೇಬಲ್ ಒಂದರಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಗೇಶ್, ಅಭಿಲಾಷ್, ರಮೇಶ್, ಶಿವಪುತ್ರ ಜಾಗ ಬಿಡುವಂತೆ ತಾಕೀತು ಮಾಡಿದ್ದಾರೆ. ಅದು ತಾವು ಕುಳಿತುಕೊಳ್ಳಬೇಕಿದ್ದ ಜಾಗವಾಗಿದ್ದು, ಬಿಟ್ಟುಕೊಡುವಂತೆ ಹೇಳಿದ್ದಾರೆ. ಆದರೆ, ಇದನ್ನು ಗಣಪತಿ ಮತ್ತು ರಮೇಶ್ ವಿರೋಧಿಸಿದ್ದರಿಂದ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿದ್ದು, ಆ ನಾಲ್ವರು ಇವರಿಬ್ಬರಿಗೆ ಚಾಕು ಇರಿದು ಬಳಿಕ ಅಲ್ಲಿಂದ ಪರಾರಿಯಾಗಿದ್ದರು.
ಚಾಕು ಇರಿತಕ್ಕೊಳಗಾಗಿ ರಸ್ತೆ ಮೇಲೆ ಬಿದ್ದಿದ್ದ ಗಣಪತಿ ಸಿಂಗ್ ರಜಪೂತ, ರಮೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ವಿಜಯಪುರದ ಯೋಗಾಪುರ ಕಾಲೋನಿ ನಿವಾಸಿ ಗಣಪತಿ ಸಿಂಗ್ ರಜಪೂತ (28) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ರಮೇಶ್ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಗಂಡನ ಮನೆ ಚಿನ್ನಾಭರಣ ಕದ್ದು ತವರಿಗೆ ಕಳುಹಿಸಿ ಕಳವಾಗಿದೆ ಎಂದು ದೂರು ನೀಡಿದ ಚಾಲಾಕಿ ಸೊಸೆ ಅರೆಸ್ಟ್