Site icon Vistara News

Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

Chaitra kundapura

ಉಡುಪಿ: ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaithra Kundapura) ಬೆಂಗಳೂರಿನ ಉದ್ಯಮಿ ಗೋವಿಂದ ಪೂಜಾರಿಯವರಿಗೆ (Govinda Poojari) ಐದು ಕೋಟಿ ರೂ. ವಂಚನೆ (Fraud Case) ಮಾಡಿದ್ದು ಮಾತ್ರವಲ್ಲ, ಈ ವಂಚನೆಯ ಮಹಾಪುರಾಣದ ನಡುವೆ ಒಬ್ಬ ವ್ಯಕ್ತಿಯ ಕೊಲೆಯೂ ನಡೆದು ಹೋಗಿದೆ. ಚೈತ್ರಾ ಕುಂದಾಪುರ ಎಂಡ್‌ ಟೀಮ್‌ ಪ್ರಧಾನಿ ಮೋದಿಯಿಂದ ಹಿಡಿದು ಆರೆಸ್ಸೆಸ್‌ ಪ್ರಚಾರಕರವರೆಗೆ (RSS Pracharak) ಎಲ್ಲರನ್ನೂ ಈ ವಂಚನೆಗೆ ಬಳಸಿಕೊಂಡಿದೆ. ಕೆಲವೊಬ್ಬರನ್ನು ಇವರೇ ಸೃಷ್ಟಿ ಮಾಡಿದ್ದಾರೆ, ಅವರ ರೋಲ್‌ ಮುಗಿದ ಕೂಡಲೇ ಕೊಲೆ ಮಾಡಿದ್ದಾರೆ. ಈ ವಂಚನೆಯ ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ, ಕಣ್ಣೀರಿದೆ, ಆಕ್ರೋಶವಿದೆ ಮತ್ತು ಯಾವ ಸಿನಿಮಾವನ್ನೂ ಮೀರಿಸಬಲ್ಲ ಅತ್ಯದ್ಭುತ ಚಿತ್ರಕತೆ ಇದೆ. ಈ ಕಥೆಯ ಇಂಚಿಂಚು ವಿವರಗಳನ್ನು ಇಲ್ಲಿ ಹೇಳ್ತಾ ಹೋಗುತ್ತೇವೆ… ಕೇಳುವಂತವರಾಗಿ!

ಈ ಸಿನಿಮಾದ ಕಥಾ ನಾಯಕ ಗೋವಿಂದ ಪೂಜಾರಿ

ಮೂಲತಃ ಕುಂದಾಪುರದವರಾದ ಮತ್ತು ಈಗ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗೋವಿಂದ ಪೂಜಾರಿ ಅವರು ಈ ಸಿನಿಮಾ ಕಥಾ ನಾಯಕ. ಬೆಂಗಳೂರಿನ ಹರಳೂರು ರಸ್ತೆಯಲ್ಲಿ ವಾಸಿಸುವ ಅವರಿಗೆ ಸಮಾಜಸೇವೆ ಆಸಕ್ತಿಯ ಕ್ಷೇತ್ರ. ಕಳೆದ ಏಳು ವರ್ಷಗಳಿಂದ ‘ವರಲಕ್ಷ್ಮಿ- ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆ ನಡೆಸುತ್ತಿರುವ ಅವರಿಗೆ ಅವರ ಗೆಳೆಯರು ಮತ್ತು ಹಿತೈಷಿಗಳು ರಾಜಕೀಯ ಸೇರುವಂತೆ ಸಲಹೆ ನೀಡಿದ್ದರು. ಆಗ ಕೆಲವರು ಗೋವಿಂದ ಪೂಜಾರಿ ಅವರಿಗೆ ಹಿಂದೂ ಸಿಂಹಿಣಿ ಎಂದು ಕರೆಸಿಕೊಳ್ಳುವ ಚೈತ್ರಾ ಕುಂದಾಪುರ ಅವರನ್ನು ಪರಿಚಯಿಸುತ್ತಾರೆ. ಇವರು ಈ ಸಿನಿಮಾದ ಹೀರೋಯನ್‌ ಕಂ ವಿಲನ್!

ನಂಗೆ ಬೈಂದೂರು ಕ್ಷೇತ್ರದ ಟಿಕೆಟ್‌ ಒಂದು ಮಾಡಿಸಿಕೊಡಬಹುದಾ‌ ಮಾರ‍್ರೆ ಎಂದು ಕೇಳಿದಾಗ, ಅದಕ್ಯಾಕೆ ತಲೆ ಕೆಡಿಸಿಕೊಳ್ತೀರಿ ಮಾರ‍್ರೆ.. ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ ಬಿಜೆಪಿ, ಆರೆಸ್ಸೆಸ್‌ನವರಿಗೆಲ್ಲ ನಾನು ಭಾರಿ ಹತ್ತಿರ. ಪ್ರಧಾನಿ ಕಚೇರಿಯಲ್ಲೂ ನಂಗೆ ಕನೆಕ್ಷನ್‌ ಉಂಟು. ಸುಪ್ರೀಂ ಕೋರ್ಟ್ ಜಡ್ಡುಗಳಿಗೂ ಆಪ್ತಳಾಗಿದ್ದು ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳುತ್ತಾರೆ.

ಈಗ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್‌ ಎಂಟ್ರಿ

ಚೈತ್ರಾ ಕುಂದಾಪುರ ಅವರು ಗೋವಿಂದ ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವ ಪ್ರಕ್ರಿಯೆಯಲ್ಲಿ ಎಂಟ್ರಿ ಪಡೆಯುತ್ತಾರೆ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್‌ ಕಡೂರು. 2022ರ ಜುಲೈ 4ರಂದು ಚಿಕ್ಕಮಗಳೂರಿನ ಸರ್ಕಾರಿ ಅತಿಥಿಗೃಹದಲ್ಲಿ ಚೈತ್ರಾ ಕುಂದಾಪುರ ಅವರು ಗಗನ್‌ ಕಡೂರು ಅವರನ್ನು ಭೇಟಿ ಮಾಡಿಸುತ್ತಾರೆ. ಇವರು ಪ್ರಧಾನಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿ ಎಂದು ಪರಿಚಯಿಸಲಾಗುತ್ತದೆ.

🛑LIVE🛑 : ಕಬಾಬ್ & ಬಿಜೆಪಿ ಟಿಕೆಟ್.. ಏನಿದು ಕೇಸ್?| Hindu Activist Chaitra Kundapura Arrest | Vistara News

ಗಗನ್ ಕಡೂರು ಅವರು ಮಾತನಾಡುತ್ತಾ, ಬಿಜೆಪಿಯಲ್ಲಿ ಟಿಕೆಟ್‌ ಪಡೆಯಲು ಗಿಟ್ಟಿಸಿಕೊಳ್ಳಲು ಆರೆಸ್ಸೆಸ್‌ನ ರಾಷ್ಟ್ರೀಯ ಪ್ರಮುಖರ ಶಿಫಾರಸು ಬೇಕೇಬೇಕು. ಆದಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿ ಆರೆಸ್ಸೆಸ್‌ ಹಿರಿಯ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್ ಜೀ ಮೂಲಕ ಶಿಫಾರಸು ಮಾಡಿಸುತ್ತೇನೆ ಎನ್ನುತ್ತಾರೆ.

ಮಾತಿನ ಮಧ್ಯೆ, ವಿಶ್ವನಾಥ್‌ಜಿ ಅವರು ಇಲ್ಲೇ ಇದ್ದಾರಂತೆ ಎಂದು ಚೈತ್ರಾ ಹೇಳುತ್ತಾರೆ. ಆಗ ಓ ಹೌದಾ, ದೈವ ಬಲ ಕೂಡಿಬಂದಿದೆ. ಇವತ್ತೇ ಹೋಗಿಬರೋಣ ಎಂದು ಅಂದೇ ವಿಶ್ವನಾಥ್‌ ಜೀ ಅವರ ಮನೆಗೆ ಹೋಗುತ್ತಾರೆ.

ನಾನು ವಿಶ್ವನಾಥ್‌ ಜೀ ಬಿಜೆಪಿ ಕೇಂದ್ರ ಆಯ್ಕೆ ಸಮಿತಿ ಸದಸ್ಯ!

ಚೈತ್ರಾ, ಗಗನ್‌ ಮತ್ತು ಗೋವಿಂದ ಪೂಜಾರಿ ಅವರು ವಿಶ್ವನಾಥ್‌ಜೀ ಅವರನ್ನು ಭೇಟಿ ಮಾಡುತ್ತಾರೆ. ಆಗ ವಿಶ್ವನಾಥ್‌ಜಿ ಅವರು, “ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯನಾಗಿದ್ದು, RSS ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದೇನೆ, ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು” ಎಂದು ಪೀಠಿಕೆ ಹಾಕುತ್ತಾರೆ.

ನಿಮ್ಮ ಪರವಾಗಿ ಬೈಂದೂರು ಕ್ಷೇತ್ರದ ಟಿಕೆಟ್‌ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ ರೂ.50,00,000 (ಐವತ್ತು ಲಕ್ಷ) ಗಗನ್ ಕಡೂರ್ ಅವರ ಕೈಗೆ ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ ರೂ.3,00,00,000 (ಮೂರು ಕೋಟಿ ರೂಪಾಯಿ) ನೀಡಬೇಕು ಎಂದು ಹೇಳುತ್ತಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಸಂಬಂಧ ಈ ಹಣವನ್ನು ಪಡೆಯಲಾಗುತ್ತಿದೆ. ಒಂದು ವೇಳೆ ಟಿಕೆಟ್‌ ಕೊಡಿಸಲು ಸಾಧ್ಯವಾಗದೆ ಇದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡುತ್ತಾರೆ. ಜತೆಗಿರುವ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ವಿವರಿಸುತ್ತಾರೆ.

ಗೋವಿಂದ ಪೂಜಾರಿ ಅವರು ತಾವು ಕೊಟ್ಟ ಮಾತಿನಂತೆ ಜುಲೈ 7, 2022ರಂದು ಪ್ರಸಾದ್‌ ಬೈಂದೂರು ಎಂಬವರ ಮೂಲಕ 50 ಲಕ್ಷ ರೂ.ಯನ್ನು ಗಗನ್‌ ಕಡೂರ್‌ಗೆ ಕೊಡುತ್ತಾರೆ. ಅದಕ್ಕೆ ಸಾಕ್ಷಿಯಾಗುವುದು ಶಿವಮೊಗ್ಗದ ಆರೆಸ್ಸೆಸ್‌ ಕಚೇರಿ!. ನಂತರ ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ಅವರಿಬ್ಬರೂ ಗೋವಿಂದ ಪೂಜಾರಿ ಅವರಿಗೆ ಕರೆ ಮಾಡಿ ನಿಮ್ಮ ಹಣ ತಲುಪಿದೆ. ನಿಮಗೆ ಬೈಂದೂರು ಟಿಕೆಟ್‌ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆ ಎಂಬ ಸಂತಸದ ಸುದ್ದಿಯನ್ನು ನೀಡುತ್ತಾರೆ.

🛑LIVE🛑 : ಕಬಾಬ್ & ಬಿಜೆಪಿ ಟಿಕೆಟ್.. ಏನಿದು ಕೇಸ್?| Hindu Activist Chaitra Kundapura Arrest | Vistara News

ಈಗ ಎಂಟ್ರಿ ಪಡೆಯುವುದು ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮೀಜಿ!

ಇದಾಗಿ ಎರಡು ತಿಂಗಳು ಸಣ್ಣ ಪುಟ್ಟ ಮಾತುಕತೆ ಬಿಟ್ಟರೆ ಹೆಚ್ಚೇನೂ ಚಟುವಟಿಕೆ ಇಲ್ಲ. 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವನಾಥ್ ಜೀ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕಾಲ್‌ ಮಾಡಿ, ಕರ್ನಾಟಕದ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಿ ಎಂಬ ಸಲಹೆಯನ್ನು ಗೋವಿಂದ ಪೂಜಾರಿ ಅವರಿಗೆ ನೀಡಲಾಗುತ್ತದೆ.

ಒಂದೂವರೆ ಕೋಟಿ ರೂ. ಕೇಳಿದ ಸ್ವಾಮೀಜಿ!

ಗೋವಿಂದ ಪೂಜಾರಿ ಅವರು ಬೆಂಗಳೂರಿನಿಂದ ಹೊಸಪೇಟೆಗೆ ಹೋಗಿ ಅಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯ ಮುಂದೆ ಕುಕ್ಕರುಗಾಲಲ್ಲಿ ಕೂರುತ್ತಾರೆ. ಆಗ ಸ್ವಾಮೀಜಿಯವರು, ʻʻಗೋವಿಂದ ಪೂಜಾರಿಯವರೇ ವಿಶ್ವನಾಥಜೀ ಅವರು ಎಲ್ಲ ವಿಷಯ ತಿಳಿಸಿದ್ದಾರೆ. ಅವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಟ್ಟಿದ್ದು. ನನಗೆ ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದೆ. ಖಂಡಿತ ಟಿಕೆಟ್‌ ಕೊಡಿಸೋಣ. ಆದರೆ, ಮುಂದಿನ ಪ್ರಕ್ರಿಯೆ 1,50,00,000 ರೂ. (1.5 ಕೋಟಿ ರೂ.) ಬೇಕಾಗುತ್ತದೆ ಎಂದರು. ಗೋವಿಂದ ಪೂಜಾರಿ ಅವರು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. ಕೊನೆಗೆ 2023ರ ಜನವರಿ 16ರಂದು ಬೆಂಗಳೂರಿನ ಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ 1.5 ಕೋಟಿ ರೂ.ಯನ್ನು ನೀಡುತ್ತಾರೆ ಗೋವಿಂದ ಪೂಜಾರಿ. ಟಿಕೆಟ್‌ ಸಿಗದಿದ್ದರೆ ಹಣ ವಾಪಸ್‌ ಎಂಬ ಭರವಸೆ!

ಬೆಂಗಳೂರಿನಲ್ಲಿ ಕೇಂದ್ರ ನಾಯಕರ ಭೇಟಿ!

ಅವರ ನಡುವೆಯೇ ಇನ್ನೊಂದು ಘಟನೆ ನಡೆಯುತ್ತದೆ. ಒಂದು ದಿನ ವಿಶ್ವನಾಥ್ ಜಿ, ಗಗನ್ ಕಡೂರು ಮತ್ತು ಚೈತ್ತಾ, ಕುಂದಾಪುರ ಅವರು ಗೋವಿಂದ ಪೂಜಾರಿ ಅವರಿಗೆ ಕಾನ್ಫರೆನ್ಸ್‌ ಕಾಲ್‌ನಲ್ಲಿ ಮಾತನಾಡಿ, 23.10.2022ರಂದು ಬಿಜೆಪಿಯ ಕೇಂದಿಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದಾರೆ. ನೀವು ಬೆಂಗಳೂರಿನ ಕುಮಾರ ಕೃಪಾಕ್ಕೆ ಬನ್ನಿ ಎಂದಿದ್ದಾರೆ. ಅಲ್ಲಿ ಹೋದಾಗ ʻನಾಯ್ಕ್‌ʼ ಎಂಬವರು ನಾನು ದೆಹಲಿ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರನ್ನು ಕೇಂದ್ರೀಯ ಚುನಾವಣಾ ಸಮಿತಿ ಅಂತಿಮಗೊಳಿಸಿದೆ. ಹೀಗಾಗಿ ಮಾತುಕತೆಯಾದ ಬಾಕಿ ಮೊತ್ತ 3,00,00,000 (ಮೂರು ಕೋಟಿ ರೂಪಾಯಿ) ಹಣವನ್ನು ಗಗನ್ ಕಡೂರ್ ಹೇಳಿದ ಜಾಗಕ್ಕೆ ತಲುಪಿಸಬೇಕು ಎಂದು ಸೂಚಿಸುತ್ತಾರೆ. ಹೀಗೆ 29.10.2022ರಂದು ಮಂಗಳೂರಿನ ಒಂದು ಜಾಗದಲ್ಲಿ ಹಣದ ಹಸ್ತಾಂತರ ನಡೆಯುತ್ತದೆ.

ಈಗ ಶುರುವಾಗುತ್ತದೆ ನೋಡಿ ನಾಟಕ ಮತ್ತು ಒಂದು ಕೊಲೆ!

ಈ ನಡುವೆ 7.3.2023ರಂದು ಗಗನ್‌ ಕಡೂರು ಅವರು ಗೋವಿಂದ ಪೂಜಾರಿ ಅವರಿಗೆ ಕರೆ ಮಾಡಿ, ಸರ್‌ ನಮ್ಮ ವಿಶ್ವನಾಥ್‌ ಜೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಶ್ಮೀರದಲ್ಲಿರುವ ವೇಳೆ ಉಸಿರುಗಟ್ಟಿದೆ ಎನ್ನುತ್ತಾರೆ. ಮರುದಿನ ಗೋವಿಂದ ಪೂಜಾರಿ ಅವರೇ ವಿಶ್ವನಾಥ್‌ ಜೀ ಅವರು ಹೋಗಿಬಿಟ್ರು ಅನ್ನುತ್ತಾರೆ.

ಇದನ್ನು ಕೇಳಿದ ಗೋವಿಂದ ಪೂಜಾರಿ ಅವರಿಗೆ ಲೈಫಲ್ಲಿ ಮೊದಲ ಸಲ ಸಣ್ಣ ಸಂಶಯವೊಂದು ಕಾಡಲು ಶುರುವಾಗುತ್ತದೆ. ಅವರು ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬವರಿಗೆ ಕರೆ ಮಾಡುತ್ತಾರೆ. ಆಗ ಅವರು ವಿಶ್ವನಾಥ್ ಜಿ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎನ್ನುತ್ತಾರೆ. ಇದನ್ನು ಕೇಳಿದ ಗೋವಿಂದ ಪೂಜಾರಿ ಅವರು ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಇಬ್ಬರನ್ನೂ ಮಾತುಕತೆಗೆ ಬರುವಂತೆ ಹೇಳುತ್ತಾರೆ.

ಎಲ್ಲಾ ಹಣ ವಿಶ್ವನಾಥ್‌ಜೀ ಅವರಲ್ಲಿದೆ ಎನ್ನುವ ಚೈತ್ರಾ!

24.04.2023ರಂದು ಬೊಮ್ಮನಹಳ್ಳಿಯಲ್ಲಿರುವ ಗೋವಿಂದ ಪೂಜಾರಿ ಅವರ ಕಚೇರಿಯಲ್ಲಿ ಮಾತುಕತೆ ನಡೆಯುತ್ತದೆ. ಗೋವಿಂದ ಪೂಜಾರಿಯವರು ನನಗೆ ಟಿಕೆಟ್‌ ಬೇಡ, ದಯವಿಟ್ಟು ಹಣ ವಾಪಸ್‌ ಕೊಡಿ ಎಂದು ಕೇಳುತ್ತಾರೆ. ಆಗ ಚೈತ್ರಾ ಕುಂದಾಪುರ ನೀವು ಕೊಟ್ಟ ಎಲ್ಲಾ ಮೂರುವರೆ ಕೋಟಿ ರೂ. ವಿಶ್ವನಾಥಜಿ ಬಳಿ ಇದೆ. ಅವರೀಗ ವಿಧಿವಶರಾಗಿದ್ದಾರೆ ಏನು ಮಾಡೋಣ ಎಂಬ ನಾಟಕ ಮಾಡುತ್ತಾಳೆ.

ಆಗ ನಿಜ ಬಣ್ಣ ಬಯಲು ಮಾಡುತ್ತಾರೆ ಗೋವಿಂದ ಪೂಜಾರಿ

ನೋಡಿ.. ನನಗೆ ಎಲ್ಲಾ ವಿಷಯ ಗೊತ್ತಾಗಿದೆ. ನಿಮ್ಮದು ಎಲ್ಲಾ ಮೋಸ. ವಿಶ್ವನಾಥ್‌ಜೀ ಎಂಬ ಯಾವ ಪ್ರಚಾರಕರೂ ಇಲ್ಲೆ ಎನ್ನುವುದನ್ನು ದೃಢಪಡಿಸಿಕೊಂಡಿದ್ದೇನೆ ಎನ್ನುತಾರೆ. ನಾನು ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ ಎಂದು ಹೇಳುತ್ತಾರೆ. ಆಗ ಚೈತ್ರಾ ಕುಂದಾಪುರ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾಳೆ ಮತ್ತು ಹಣ ವಾಪಸ್‌ ಮಾಡಲು ಕಾಲಾವಕಾಶ ಕೇಳುತ್ತಾಳೆ. ಓಕೆ ಅಂತಾರೆ ಗೋವಿಂದ ಪೂಜಾರಿ. (ನಾವು ಆರಂಭದಲ್ಲಿ ಚೈತ್ರಾ ಕುಂದಾಪುರ ಅವರು ಒಂದು ಕೊಲೆ ಕೂಡಾ ಮಾಡಿದ್ದಾರೆ ಎಂದಿದ್ದು ಇದೇ ವಿಶ್ವನಾಥ್‌ಜೀ ಪ್ರಕರಣವನ್ನು. ಒಂದು ಪಾತ್ರವನ್ನು ಸೃಷ್ಟಿಸಿ, ಅದನ್ನು ಸಾಯಿಸಿದ ರೀತಿ ಭಯಾನಕವಾಗಿದೆ)

1.5 ಕೋಟಿ ರೂ. ವಾಪಸ್‌ ಕೊಡ್ತೇನೆ ಎಂದ ಹಾಲಶ್ರೀ ಸ್ವಾಮೀಜಿ

ಈ ನಡುವೆ, 25.04.2023ರಂದು ಗೋವಿಂದ ಪೂಜಾರಿ ಅವರು ಅಭಿನವ ಹಾಲಶ್ರೀ ಸ್ವಾಮೀಜಿಯ ಬೆಂಗಳೂರಿನ ಜಯನಗರದಲ್ಲಿರುವ ನಿವಾಸಕ್ಕೆ ಹೋಗುತ್ತಾರೆ. ಇವರನ್ನು ಕಂಡು ಹೆದರಿದ ಸ್ವಾಮೀಜಿ, ನನಗೆ ವಿಶ್ವನಾಥ್ ಜಿ ಯಾರೆಂದು ಸರಿಯಾಗಿ ಗೊತ್ತಿಲ್ಲ. ನಾನು ಪಡೆದಿರುವ 1.5 ಕೋಟಿ ರೂಪಾಯಿ ಹಣವನ್ನು ಒಂದು ತಿಂಗಳೊಳಗೆ ವಾಪಸ್‌ ನೀಡುತ್ತೇವೆ. ಈ ವಿಚಾರದಲ್ಲಿ ತಮ್ಮನ್ನು ಬಿಟ್ಟು ಬಿಡಿ’ ಎಂದು ಗೋಗರೆಯುತ್ತಾರೆ. 3.5 ಕೋಟಿ ರೂ. ಚೈತ್ರಾ ಕುಂದಾಪುರ ಬಳಿಯೇ ಇದೆ ಎಂಬ ಸತ್ಯವನ್ನು ಅವರು ಬಿಚ್ಚಿಡುತ್ತಾರೆ.

ಹಾಗಿದ್ದರೆ ಈ ವಿಶ್ವನಾಥ್‌ ಜೀ ಯಾರು?

ಇದೇ ವೇಳೆ, ಆರ್‌ಎಸ್‌ಎಸ್‌ ಪ್ರಚಾರಕರೆಂದು ಪರಿಚಯಿಸಿಕೊಂಡ ವಿಶ್ವನಾಥ್ ಜೀ ಯಾರು ಎಂದು ಹುಡುಕಲು ಶುರು ಮಾಡುತ್ತಾರೆ ಗೋವಿಂದ ಪೂಜಾರಿ. ಅವರು ಚಿಕ್ಕಮಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತ ಮಂಜು ಅವರನ್ನು ಸಂಪರ್ಕಿಸುತ್ತಾರೆ. ಅವರಲ್ಲಿ ವಿಷಯ ತಿಳಿಸಿದಾಗ ಅವರು ಕೆಲವು ದಿನಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪು ಮಾಡಿಕೊಂಡರು. ಅದಕ್ಕೂ ವಿಶ್ವನಾಥ್‌ಜೀ ಪ್ರಕರಣಕ್ಕೂ ಸಾಮ್ಯತೆ ಕಂಡುಬಂದಿತ್ತು.

ಕಡೂರಿನ ಸೆಲೂನ್‌ನಲ್ಲಿ ಸೃಷ್ಟಿಯಾಯಿತು ವಿಶ್ವನಾಥ್‌ಜಿ ಪಾತ್ರ!

ಆವತ್ತು ಮಂಜು ಅವರು ಕಡೂರಿನ ಸೆಲೂನ್‌ನಲ್ಲಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಬಂದು ಆರೆಸ್ಸೆಸ್‌ ಪ್ರಚಾರಕರ ರೀತಿ ಮೇಕಪ್‌ ಮಾಡಿಸಲಾಗಿತ್ತು. ಆ ಸಲೂನ್‌ಗೆ ತೆರಳಿ ವಿಚಾರಿಸಿದ ಆವತ್ತು ಬಂದವರು ಧನರಾಜ್ ಹಾಗೂ ರಮೇಶ್‌ ಎಂದು ತಿಳಿಯಿತು. ರಮೇಶ್‌ ಎಂಬಾತನಿಗೆ ವಿಶ್ವನಾಥ್‌ಜಿ ವೇಷ ಹಾಕಿಸಲಾಗಿತ್ತು. ಈ ರೀತಿ RSS ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತರಬೇತಿ ನೀಡಿದ್ದಲ್ಲದೆ, 1.2 ಲಕ್ಷ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ನಾಟಕವಾಡುವಾಗ ಆರೆಸ್ಸೆಸ್ ವಾಹನವಾಗಿ ಬಳಸಲು ಗಾಡಿ ಕೊಟ್ಟಿದ್ದು ಧನರಾಜ್‌. ಅವನಿಗೆ ಪಾವತಿಯಾದ ಮೊತ್ತ ರೂ. 2,50,000!

ಕೆಆರ್‌ ಮಾರ್ಕೆಟ್‌ನ ಕಬಾಬ್‌ ವ್ಯಾಪಾರಿಯೇ ಬಿಜೆಪಿ ಕೇಂದ್ರ ಸಮಿತಿ ಸದಸ್ಯ

ಇನ್ನು ಬೆಂಗಳೂರಿನಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ನಾಯ್ಕ ಯಾರು ಎಂದು ಧನರಾಜ್‌ ಬಳಿ ವಿಚಾರಿಸಿದಾಗ ಆತ ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ ಬಳಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಯಿತು. ಅವನನ್ನು ಭೇಟಿಯಾದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93,000 ರೂ. ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇಷ್ಟೆಲ್ಲದರ ನಡುವೆ ಈ ವಿಚಾರವನ್ನ ಯಾರ ಮುಂದೆಯೂ ಬಾಯಿ ಬಿಡಬಾರದು. ಬಿಟ್ಟರೆ ಭೂಗತ ಪಾತಕಿಗಳ ಮೂಲಕ ಕೊಲೆ ಮಾಡಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಗೋವಿಂದ ಪೂಜಾರಿ ಹೇಳಿದ್ದಾರೆ! ಈ ಎಲ್ಲ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ತನ್ನಿಂದ ಲೂಟಿ ಮಾಡಿರುವ ಐದು ಕೋಟಿ ರೂ.ಯನ್ನು ವಾಪಸ್‌ ಕೊಡಿಸಬೇಕು ಎಂದು ಗೋವಿಂದ ಪೂಜಾರಿ ಆಗ್ರಹಿಸಿದ್ದಾರೆ.

Exit mobile version