Site icon Vistara News

Chaitra Fraud Case : ಚೈತ್ರಾ ವಂಚನೆ ಪ್ರಕರಣ; ಸಿಸಿಬಿ ತನಿಖೆ ಪೂರ್ಣ, ಮುಂದಿನ ವಾರ ಚಾರ್ಜ್‌ಶೀಟ್‌?

Chaitra Kundapura

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಐದು ಕೋಟಿ ರೂ. ವಂಚಿಸಿದ ಚೈತ್ರಾ ವಂಚನೆ ಪ್ರಕರಣದ (Chaitra Fraud Case) ತನಿಖೆಯನ್ನು ಸಿಸಿಬಿ ಪೊಲೀಸರು (CCB Police) ಪೂರ್ಣಗೊಳಿಸಿದ್ದಾರೆ.

ಎಂಎಲ್ಎ ಟಿಕೆಟ್ ಡೀಲ್ ಸಂಬಂಧ 68 ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಿಸಿಬಿ ತಂಡವು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದೆ. ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather : ಕರಾವಳಿ, ದಕ್ಷಿಣ ಒಳನಾಡಲ್ಲಿ ಮಳೆ ಸಾಧ್ಯತೆ; ಉತ್ತರದಲ್ಲಿ ಒಣ ಹವೆ

ಎಂಎಲ್ಎ ಡೀಲ್ ಬಗ್ಗೆ 68 ಸಾಕ್ಷಿಗಳ ಹೇಳಿಕೆಯನ್ನು ಸಿಸಿಬಿ ಪಡೆದುಕೊಂಡಿದೆ. ಎಲ್ಲ ಸಾಕ್ಷಿಗಳ ಹೇಳಿಕೆ ಪಡೆದು ಚಾರ್ಜ್‌ಶೀಟ್‌ಗೆ ಸಿದ್ಧತೆ ನಡೆಸಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಈಗಾಗಲೇ 4 ಕೋಟಿ 11 ಲಕ್ಷ ರೂಪಾಯಿಯನ್ನು ಸಿಸಿಬಿ ರಿಕವರಿ ಮಾಡಿದೆ. ವಂಚನೆ ಪ್ರಕರಣದಲ್ಲಿ ದೊಡ್ಡ ಮಟ್ಟದ ರಿಕವರಿ ಆಗಿದ್ದರಿಂದ ಚೈತ್ರಾ ಮತ್ತು ತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ 7 ಮಂದಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಅನ್ನು ಸಿದ್ಧಪಡಿಸಿದ್ದಾರೆ.

ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಮಂದಿ ವಿರುದ್ಧ ಚಾರ್ಜ್‌ಶೀಟ್‌ಗೆ ತಯಾರಿ ಮಾಡಿಕೊಳ್ಳಲಾಗಿದೆ. ಇನ್ನು ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲ ಆಡಿಯೊ, ವಿಡಿಯೊವನ್ನು ಸಿಸಿಬಿ ಪಡೆದುಕೊಂಡಿದೆ. ಈ ಆಡಿಯೊ ಮತ್ತು ವಿಡಿಯೊಗಳ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ‌ ಉಲ್ಲೇಖ ಮಾಡಲಾಗಿದೆ.

ಗೋವಿಂದ ಪೂಜಾರಿ ಬಳಿ ಡೀಲ್ ಸಂಬಂಧ 10 ವಿಡಿಯೊವನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಮೊಬೈಲ್‌ಗಳ ಡೇಟಾ ರಿಟ್ರೀವ್ ವರದಿ ಕೂಡ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗುತ್ತದೆ. ಆರೋಪಿಗಳ ಮೊಬೈಲ್ ಚಾಟ್, ಕರೆಗಳ ಸಂಬಂಧ ಡೇಟಾ ರಿಟ್ರೀವ್ ಆಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದಂತೆ ಆಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲ ಆರೋಪಿಗಳು ಇದ್ದಾರೆ. ಇನ್ನೂ ಕೂಡ ಯಾವ ಆರೋಪಿಗಳಿಗೂ ಜಾಮೀನು ಸಿಗುತ್ತಿಲ್ಲ.

ವಜ್ರದೇಹಿ ಸ್ವಾಮೀಜಿ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ!

ವಜ್ರದೇಹಿ ಸ್ವಾಮೀಜಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಜತೆಗೆ ಮಾತನಾಡಿದ್ದಾಗಿ ತಿಳಿದುಬಂದಿದ್ದು ಚೈತ್ರಾ ಬರೆದಿದ್ದ ಒಂದು ಪತ್ರದ ಮೂಲಕ. ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗುವ ಕೆಲವು ದಿನಗಳ ಮೊದಲು ಆದಾಯ ತೆರಿಗೆ ಇಲಾಖೆಗೆ ಒಂದು ಪತ್ರವನ್ನು ಬರೆದಿದ್ದಳು. ಇದರಲ್ಲಿ ಗೋವಿಂದ ಪೂಜಾರಿ ಅವರನ್ನು ಟಿಕೆಟ್‌ಗಾಗಿ ಹಣ ನೀಡಿದ ಒಬ್ಬ ಆರೋಪಿಯಾಗಿ ಗುರುತಿಸಲಾಗಿತ್ತು. ಚೈತ್ರಾ ತಾನೊಬ್ಬ ಪತ್ರಕರ್ತೆ ಎಂದೂ ಗೋವಿಂದ ಪೂಜಾರಿ ಈ ರೀತಿ ಹಣ ನೀಡಿ ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಬರೆದಿದ್ದಳು. ಈ ಪತ್ರವನ್ನು ಆಕೆ ಆದಾಯ ತೆರಿಗೆ ಇಲಾಖೆಗೆ ಪೋಸ್ಟ್‌ ಮಾಡಿದ್ದಳೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಆದರೆ, ಆ ಪತ್ರವು ಸಿಸಿಬಿ ಕೈಗೆ ಸಿಕ್ಕಿತ್ತು. ಆ ಪತ್ರದಲ್ಲಿ ರಾಜಶೇಖರಾನಂದ ಸ್ವಾಮೀಜಿ ಬಗ್ಗೆ ಪ್ರಸ್ತಾಪವಿತ್ತು.

ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿ ಬಗ್ಗೆ ಏನಿತ್ತು?

1.ಕೃಷ್ಣ ಪೂಜಾರಿ ಎಂದು ಪರಿಚಯಿಸಿ ಕೊಂಡ ವ್ಯಕ್ತಿಯಿಂದ ಜುಲೈ 21,2023ರಂದು 918217220747 ಎಂಬ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಅವರು ನನ್ನ ಗೋವಿಂದ ಬಾಬು ಪೂಜಾರಿ ಅವರು ಚುನಾವಣೆ ಟಿಕೆಟ್ ಗಾಗಿ 5 ಕೋಟಿ ರೂಪಾಯಿ ಕೊಟ್ಟಿರುವ ಕುರಿತು ನನ್ನನ್ನು ಪ್ರಶ್ನಿಸಿರುತ್ತಾರೆ ಈ ಕುರಿತು ನಾನು ಅವರ ಬಳಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡು ಪೊಲೀಸ್ ಕೇಸ್ ದಾಖಲಿಸುವಂತೆ ಸಲಹೆ ನೀಡಿರುತ್ತೇನೆ.

2.ತದ ನಂತರ ಪುನಃ ಜುಲೈ 29ರಂದು ಮಧ್ಯಾಹ್ನ 12:43ಕ್ಕೆ ನನಗೆ ಪರಿಚಿತರಾಗಿರುವ ರಾಜಶೇಖರಾನಂದ ಸ್ವಾಮೀಜಿಯವರ ಫೋನ್ ನಂಬರ್+919986126131ರಿಂದ ಕರೆ ಬಂದಿದ್ದು, ಅದರಲ್ಲಿ ಅವರು ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ರೂಪಾಯಿಯನ್ನು ನೀಡಿರುವ ಕುರಿತು ಅವರ ಆಪ್ತರೊಬ್ಬರು ಅವರಿಗೆ ಮಾಹಿತಿ ನೀಡಿರುವ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ.

ಇದರ ಬಗ್ಗೆ ವಜ್ರದೇಹಿ ಮಠದ ಸ್ವಾಮೀಜಿ ಹೇಳಿದ್ದೇನು?

ಆವತ್ತು ಈ ಆರೋಪ ಕೇಳಿಬಂದಾಗಲೇ ರಾಜಶೇಖರಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದರು.

ನಾನು ಜುಲೈ 29ರಂದು ನಾನು ಚೈತ್ರಾ ಕುಂದಾಪುರಗೆ ಕಾಲ್‌ ಮಾಡಿದ್ದು ಹೌದು. ಆದರೆ, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ. ನನ್ನ ಹೆಸರು ಥಳುಕುಹಾಕಿಕೊಂಡಿದೆ ಎಂದು ಕೆಲವರು ಈ ಹಿಂದೆ ಹೇಳಿದ್ದರು. ಅವರಿಗೆಲ್ಲ ನಾನು ಬೈದು ಫೋನ್‌ ಇಟ್ಟಿದ್ದೇನೆ. ನಾನು ಇಂಥ ಬೇನಾಮಿ ವ್ಯವಹಾರ ಮಾಡುವವನಲ್ಲ. ನನ್ನನ್ನು ನೇರಾನೇರ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಸಂಗತಿಯ ಕೆಲವೊಂದು ಒಳಸುಳಿಗಳು ಹಿಂದಿನಿಂದಲೇ ತನಗೆ ಗೊತ್ತೆಂದೂ, ಅದರ ಬಗ್ಗೆ ತಾನು ಹಾಲಶ್ರೀ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಜತೆ ಚರ್ಚೆ ಮಾಡಿದ್ದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪೆನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್‌ ಹೆಗ್ಡೆ?

ನಮ್ಮ ಹೆಸರು ಕೂಡಾ ಉಲ್ಲೇಖವಾಗಿದೆ, ಐಟಿಗೆ ಬರೆದ ಪತ್ರದಲ್ಲಿದೆ

ಚೈತ್ರಾ ಕುಂದಾಪುರ ಅವರು ಆದಾಯ ಇಲಾಖೆಗೆ ಬರೆದ ಪತ್ರದಲ್ಲಿ ನಮ್ಮ ಹೆಸರು ಉಲ್ಲೇಖ ಮಾಡಿರುವುದು ನನಗೆ ಮಾಧ್ಯಮಗಳ ಮೂಲಕ ತಿಳಿದುಬಂತು. ಹೀಗಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಜೂನ್‌ ತಿಂಗಳ ಮಧ್ಯಭಾಗದಲ್ಲಿ ಅಭಿನವ ಹಾಲಸ್ವಾಮಿಗಳು ನನಗೆ ಫೋನ್‌ ಮಾಡಿದ್ದರು. ʻನಂದೊಂದು ಒಂದು ಕೋಟಿ ರೂ. ಸಮಸ್ಯೆಯಾಗಿದೆ ಸ್ವಾಮೀಜಿ, ನೀವು ಸ್ವಲ್ಪ ಜಾಗೃತೆಯಾಗಿರಿ. ನಿಮ್ಮ ಹೆಸರು ಕೂಡಾ ಹಾಳಾಗಬಹುದು ಎಂದಿದ್ದರು. ಆಗ ನಾನು ಇಲ್ಲ ಅದು ಬೇನಾಮಿ ವ್ಯವಹಾರ ಮಾಡುವವರಿಗೆ ಮಾತ್ರ ಹೆದರಿಕೆ. ನಾವು ಅಂಥದ್ರಲ್ಲಿ ಇದ್ದರೆ ಮಾತ್ರ ಭಯ ಇರಬೇಕು, ಇಲ್ಲದಿದ್ದರೆ ಯಾಕೆ ಎಂದಿದ್ದೆ.

ಜುಲೈ 29ಕ್ಕೆ ಸತ್ಯಜಿತ್‌ ಸುರತ್ಕಲ್‌ ಕಾಲ್‌ ಮಾಡಿ ಆರೋಪ ಮಾಡಿದರು

ಜುಲೈ 29ನೇ ತಾರೀಕು ಸತ್ಯಜಿತ್‌ ಸುರತ್ಕಲ್‌ (ಹಿಂದು ಮುಖಂಡ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಖ್ಯಾತಿ) ಅವರು ನನಗೆ ಫೋನ್‌ ಮಾಡಿದರು. ಅವರು ನನ್ನ ಮೇಲೆ ನೇರ ಆರೋಪ ಮಾಡಿದರು. ಸ್ವಾಮೀಜಿ ನೀವು ಒಂದುವರೆ ಕೋಟಿ ರೂ. ತೆಗೆದುಕೊಂಡಿದ್ದೀರಿ. ಅದನ್ನು ನೀವು ಗೋವಿಂದ ಬಾಬು ಪೂಜಾರಿ ಅವರಿಗೆ ವಾಪಸ್‌ ಕೊಡಿ. ಅದನ್ನು ಕೊಡದೆ ಹೋದರೆ ನಿಮ್ಮ ಹೆಸರು ಮೀಡಿಯಾದಲ್ಲಿ ಬರ್ತದೆ, ಪೊಲೀಸ್‌ ತನಿಖೆಯಲ್ಲಿ ಬರುತ್ತದೆ, ನಿಮ್ಮ ಹೆಸರಿಗೆ ಕಳಂಕ ಬರುತ್ತದೆ. ಹೀಗಾಗಿ ನೀವು ಈಗಲೇ ಅದನ್ನು ಮುಗಿಸಿಕೊಳ್ಳಿ ಎಂದು ಹೇಳಿದರು. ಆಗ ನನಗೆ ಸಿಟ್ಟುಬರ್ತದೆ. ಯಾಕೆ ನಮ್ಮ ಹೆಸರು ಬರ್ತದೆ? ನಾನು ಇದರಲ್ಲಿ ಇಲ್ವೇ ಇಲ್ವಲ್ಲ.. ನಾನು ಹಿಂದೆ ಒಮ್ಮೆ ಕೊಲ್ಲೂರಿನಲ್ಲಿ ಅವರನ್ನು ನೋಡಿದ್ದೇನೆ. ಅದು ಕೂಡಾ ಜಗದೀಶ್‌ ಕೊಲ್ಲೂರು ಎಂಬವರು ಆಯೋಜಿಸಿದ ಬಜರಂಗ ದಳ ಕಾರ್ಯಕ್ರಮದಲ್ಲಿ ಪರಿಚಯ ಮಾಡಿದ್ದರು ಅಷ್ಟೆ. ಅದು ಬಿಟ್ಟರೆ ಪರಿಚಯವೇ ನನಗಿಲ್ಲ.

ನಾನು ಶರಣ್‌ ಪಂಪ್‌ವೆಲ್‌ ಜತೆಗೆ ವಿಷಯದ ಚರ್ಚೆ ಮಾಡಿದೆ

ಈ ವಿಚಾರವನ್ನು ನಾನು ಶರಣ್‌ ಪಂಪ್‌ವೆಲ್‌, ಪುನೀತ್‌ ಕೊಟ್ಟಾರಿ, ಭುಜಂಗ ಕುಲಾಲ್‌ ಅವರಲ್ಲಿ ಚರ್ಚೆ ಮಾಡಿದೆ. ಹೀಗೀಗೆ ನನ್ನ ಹೆಸರು ಥಳುಕು ಬಿದ್ದಿದೆಯಂತೆ ಎಂದು. ಆಗ ಅವರು ನೀವು ಇಲ್ವಲ್ಲ ಇದರಲ್ಲಿ ಯಾಕೆ ಹೆದರಿ ಕೊಳ್ತೀರಿ ಎಂದು ಹೇಳಿ ಸಮಾಧಾನ ಮಾಡಿದರು. ಆಮೇಲೆ ಅರ್ಧ ಗಂಟೆಯಲ್ಲಿ ಸತ್ಯಜಿತ್‌ ಸುರತ್ಕಲ್‌ ಮತ್ತೆ ಫೋನ್‌ ಮಾಡ್ತಾರೆ. ಇದರಲ್ಲಿ ನೀವಿಲ್ಲ ಯಾರೋ ಒಬ್ಬರು ಅಭಿನವ ಹಾಲಶ್ರೀ ಸ್ವಾಮೀಜಿಯಂತೆ, ಅವರ ಹೆಸರು ಇದ್ಯಂತೆ ಎಂದು ಹೇಳಿದರು. ಅಲ್ಲಿಗೆ ಅದು ಮುಗಿಯಿತು.

ನಾನು ನಂತರ ಕಾಲ್‌ ಮಾಡಿದ್ದು ಚಕ್ರವರ್ತಿ ಸೂಲಿಬೆಲೆಗೆ

ಸತ್ಯಜಿತ್‌ ಸುರತ್ಕಲ್‌ ಅಭಿನವ ಹಾಲಶ್ರೀ ಹೆಸರು ಹೇಳಿದಾಗ ನನಗೆ ಈ ಹಿಂದೆ ಅಭಿನವ ಹಾಲಶ್ರೀಗಳು ಹೇಳಿದ ಮಾತು ನೆನಪಾಯಿತು. ನಾನು ಕೂಡಲೇ ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್‌ ಮಾಡಿದೆ. ಅವರ ಆಪ್ತ ಸಹಾಯಕರು ಎತ್ತಿದರು. ಅವರಿಲ್ಲ, ಪ್ರೋಗ್ರಾಂನಲ್ಲಿದ್ದಾರೆ ಎಂದು ಹೇಳಿದರು. ನನಗೆ ಸಿಟ್ಟು ಬಂದು ಬೈದೆ. ಆಗ ಅವರು ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್‌ ಕೊಟ್ರು.

ಚಕ್ರವರ್ತಿಯವರೇ ವಂಚನೆ ಪ್ರಕರಣವೊಂದರಲ್ಲಿ ಅಭಿನವ ಹಾಲಸ್ವಾಮಿಗಳ ಹೆಸರು ಥಳುಕು ಹಾಕಿಕೊಂಡಿದೆ. ಇದು ಮುಂದೆ ನಿಮಗೂ ತೊಂದರೆಯಾಗಬಹುದು, ಹೀಗಾಗಿ ನೀವು ಇದು ಏನು ಎಂದು ವಿಚಾರಿಸಿ ಸರಿ ಮಾಡುವುದು ಒಳ್ಳೆಯದು ಎಂದು ಹೇಳಿದೆ. ಆಗ ಅವರು, ನಾನು ಈ ಬಗ್ಗೆ ಒಂದು ಸುತ್ತಿನ ಮಾತುಕತೆಯನ್ನು ಆಗಲೇ ಮಾಡಿದ್ದೇನೆ, ಸಿ.ಟಿ. ರವಿಯವರ ಗಮನಕ್ಕೂ ತಂದಿದ್ದೇನೆ. ಈ ವಿಷಯ ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ನೀವು ಒಂದು ಕೆಲಸ ಮಾಡಿ, ನಿಮಗೆ ಚೈತ್ರಾ ಕುಂದಾಪುರ ಪರಿಚಯ ಇದ್ದರೆ, ನೀವು ಅವಳಲ್ಲಿ ಮಾತನಾಡಿ, ವಿಷಯ ಏನೂ ಅಂತ ವಿಚಾರಿಸಿ ಎಂದು ನನಗೆ ಸಲಹೆ ನೀಡಿದರು.

ಹಾಗೆ ನಾನು ಚೈತ್ರಾ ಕುಂದಾಪುರಕ್ಕೆ ಕರೆ ಮಾಡಿದ್ದು ಜುಲೈ 29ರಂದು

ನಾನು ಫೋನ್‌ ಮಾಡಿದ ಒಂದೇ ರಿಂಗ್‌ನಲ್ಲಿ ಚೈತ್ರಾ ಕುಂದಾಪುರ ಫೋನ್‌ ಎತ್ತಿಕೊಳ್ತಾರೆ. ನೋಡಮ್ಮಾ ಗೋವಿಂದ ಬಾಬು ಪೂಜಾರಿಯವರ ಹಣದ ವಿಷಯದಲ್ಲಿ ನಿನ್ನ ಹೆಸರು ಥಳುಕು ಹಾಕಿಕೊಂಡಿದೆ. ಇದೇನೋ ಒಂದು ದೊಡ್ಡ ಗೋಲ್‌ ಮಾಲ್‌ ಅಂತ ನನಗೆ ಅನಿಸ್ತಾ ಇದೆ. ಏನು ಸತ್ಯ ಇದ್ರೂ ನೀನು ನಮ್ಮಲ್ಲಿ ಹೇಳು, ಇದನ್ನು ಏನು ಅಂತ ವಿಚಾರಿಸೋಣ. ಯಾಕೆಂದರೆ ನನ್ನ ಹೆಸರು ಕೂಡಾ ಇದರಲ್ಲಿ ಥಳುಕು ಹಾಕಿಕೊಂಡಿದೆ ಎಂದು ಹೇಳಿದೆ.

ಆಗ ಚೈತ್ರಾ ಕುಂದಾಪುರ, ಇಲ್ಲ ಸ್ವಾಮೀಜಿ, ಇದು ಏನೂ ನನಗೆ ಗೊತ್ತಿಲ್ಲ. ಅವರು ಯಾರಿಗೆ ಹಣ ಕೊಟ್ಟಿದ್ದಾರೆ, ಯಾರ ಜತೆ ವ್ಯವಹಾರ ಮಾಡಿದ್ದಾರೆ ಎನ್ನುವುದು ಒಂದೂ ಗೊತ್ತಿಲ್ಲ ಎಂದರು. ಆಗ ನಾನು ʻನಿನ್ನ ಹೆಸರು ಇದರಲ್ಲಿ ಹೇಗೆ ಬಂತುʼ ಎಂದು ಕೇಳಿದೆ. ಅದಕ್ಕೆ ಆಕೆ ʻʻಒಮ್ಮೆ ಗೋವಿಂದ ಪೂಜಾರಿ ಅವರು ಮನೆ ಗೃಹ ಪ್ರವೇಶಕ್ಕೆ ಒಬ್ಬ ಸ್ವಾಮೀಜಿ ಬೇಕು ಎಂದು ಕೇಳಿದ್ದರು. ನಂಗೆ ಹಾಲಶ್ರೀ ಸ್ವಾಮೀಜಿಗಳ ಪರಿಚಯ ಇದ್ದಿದ್ದರಿಂದ ಅವರನ್ನು ಶಿಫಾರಸು ಮಾಡಿದ್ದೆ. ಅವರ ಫೋನ್‌ ನಂಬರ್‌ ಕೊಟ್ಟು ಅವರ ಕಾಂಟಾಕ್ಟ್‌ ಮಾಡಿಸಿದೆ. ಹಾಗೆ ಗೋವಿಂದ ಬಾಬು ಪೂಜಾರಿ ಅವರಿಗೂ ಸ್ವಾಮೀಜಿಗೂ ನಂಟಿದೆ. ಅವರೊಳಗೆ ಏನು ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲʼʼ ಎಂದು ಹೇಳಿದಳು. ನನಗೆ ಒಂದೂ ವಿಷಯ ಗೊತ್ತಿಲ್ಲ ಎಂದು ಹೇಳಿದಳು. ನಾನು ಮತ್ತೆ ಮತ್ತೆ ಒತ್ತಾಯ ಮಾಡಿ ಕೇಳಿದೆ. ಏನಾದರೂ ವಿಷಯ ಇದ್ರೆ ಹೇಳು ಎಂದಾಗ, ಅದು ಏನೋ ಇಂದಿರಾ ಕ್ಯಾಂಟೀನ್‌ ಬಿಲ್‌ ಗೊಂದಲಗಳಿಗಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ 150 ಇಂದಿರಾ ಕ್ಯಾಂಟೀನ್‌ ಇದೆ ಎಂದೆಲ್ಲ ಹೇಳಿದರು.

ಇದನ್ನೂ ಓದಿ: Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್‌ ಐಡಿಯಾ; ITಗೆ ದೂರು

ನಂತರ ಆಕೆಯ ಬಂಧನವಾದಾಗಲೇ ನನಗೆ ಇದು ಇಷ್ಟು ತೀವ್ರತೆ ಪಡೆದದ್ದು ಗೊತ್ತಾಗಿದ್ದು. ಹಣದ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇದ್ದುದು ಹೌದು. ಹಾಗಂತ, ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದರು.

ಇದೀಗ ಸಿಸಿಬಿ ರಾಜಶೇಖರಾನಂದ ಸ್ವಾಮೀಜಿ ಅವರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ. ಅವರು ತಮಗೆ ತಿಳಿದಿರುವ ಎಲ್ಲ ಅಂಶಗಳನ್ನು ತಿಳಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

Exit mobile version