ಉಡುಪಿ: ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ ಗ್ಯಾಂಗ್‌ನಿಂದ ಐದು ಕೋಟಿ ರೂ. ವಂಚನೆಗೆ (Chaitra Fraud Case) ಒಳಗಾದ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಒಂದು ಸಂದೇಶ ನೀಡಿದ್ದಾರೆ; ನಾನು ಮತ್ತೆ ಬಂದೇ ಬರ್ತೀನಿ (I will be back). ಹಿಡಿದ ಕೆಲಸ ನಿಲ್ಲಿಸೋ ಪ್ರಶ್ನೆಯೇ ಇಲ್ಲ ಎಂದವರು ಹೇಳಿದ್ದಾರೆ.
ಫೇಸ್ ಬುಕ್‌ನಲ್ಲಿ ತಮ್ಮ ಸಂದೇಶವನ್ನು (Face book post) ಹಾಕಿರುವ ಅವರು ಇದನ್ನು ಯಾರಿಗೋ ಎಚ್ಚರಿಕೆ ರೂಪದಲ್ಲಿ ನೀಡಿಲ್ಲ. ಬದಲಾಗಿ ತನ್ನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸುವುದು ನನ್ನ ತತ್ವ ಸಿದ್ಧಾಂತ ಅಲ್ಲ
ಹೀಗೆಂದು ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, ಕೆಲವು ಹಿರಿಯ ಜೀವಗಳ ಜತೆ ಸಂವಾದ ನಡೆಸುವ, ಯುವಕರಿಗೆ ಕಿಟ್ ವಿತರಿಸುವ ವಿಡಿಯೊ ಕ್ಲಿಪ್ ಹಾಕಿಕೊಂಡಿದ್ದಾರೆ. ವೃದ್ಧರೊಬ್ಬರನ್ನು ತಬ್ಬಿಕೊಳ್ಳುವ, ಒಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಕೇಳುವ, ಇನ್ನೊಬ್ಬ ಜತೆಗೆ ಸೆಲ್ಫಿ ತೆಗೆದುಕೊಳ್ಳುವ ದೃಶ್ಯಗಳು ವಿಡಿಯೊದಲ್ಲಿವೆ.
ಸಮಾಜ ಸೇವೆ ಮುಂದುವರಿಯಲಿದೆ
ಗೋವಿಂದ ಬಾಬು ಪೂಜಾರಿ ಅವರು ಕಳೆದ ಕೆಲವು ವರ್ಷಗಳಿಂದ ಬೈಂದೂರು ಭಾಗದ ಅಸಹಾಯಕರಿಗೆ ನೆರವಾಗುತ್ತಿದ್ದಾರೆ. ಹಿಂದೂ ಸಂಘಟನೆಯಲ್ಲಿದ್ದು ಕಷ್ಟದಲ್ಲಿರುವ ಕೆಲವರಿಗೆ ಮನೆಯನ್ನೂ ಕಟ್ಟಿ ಕೊಟ್ಟಿದ್ದಾರೆ. ಶಾಲೆಗಳಿಗೆ ಪುಸ್ತಕ ವಿತರಣೆ, ಮನೆಗಳಿಗೆ ಕಿಟ್ ವಿತರಣೆ, ಜನರ ಕಷ್ಟಗಳಿಗೆ ಒದಗುವುದು ಹೀಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದರು.
ಇದರಿಂದ ಹುಟ್ಟಿದ ಜನಪ್ರಿಯತೆಯನ್ನೇ ಬಳಸಿಕೊಂಡು ಚುನಾವಣೆಗೆ ನಿಲ್ಲಬಹುದಲ್ವಾ ಎಂದು ಯಾರೋ ಕಿವಿಯೂದಿದ್ದೇ ಅವರು ಚೈತ್ರಾ ಎಂಡ್ ಗ್ಯಾಂಗನ್ನು ಸಂಪರ್ಕಿಸಲು ಕಾರಣವಾಗಿದ್ದು. ಚೈತ್ರಾ, ಗಗನ್ ಕಡೂರು ಮತ್ತು ಹಾಲಶ್ರೀ ಸ್ವಾಮೀಜಿ ಎಲ್ಲರೂ ಸೇರಿ ಗೋವಿಂದ ಪೂಜಾರಿಯನ್ನು ಚೆನ್ನಾಗಿ ಬಳಸಿಕೊಂಡು ದುಡ್ಡು ಮಾಡಿದರು. ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ಇಲ್ಲದ ನಾಟಕ ಮಾಡಿ ಕೊನೆಗೆ ಕೈ ಕೊಟ್ಟರು.
ಗೋವಿಂದ ಪೂಜಾರಿ ಅವರು ತನಗೆ ಆಗಿರುವ ಮೋಸದ ವಿರುದ್ಧ ಸಿಡಿದುಬಿದ್ದು ಈಗ ಭಾಷಣಕಾರ್ತಿಯ ಬಣ್ಣ ಬಯಲು ಮಾಡಿದ್ದಾರೆ, ಸ್ವಾಮೀಜಿಯ ವೇಷ ಕಳಚಿದ್ದಾರೆ. ಈಗ ಅವರೆಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇಷ್ಟೆಲ್ಲದರ ನಡುವೆ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಸಮಾಜ ಸೇವೆಯ ಮೇಲೆ ನಂಬಿಕೆ ಹೋಯಿತಾ ಎಂಬ ಪ್ರಶ್ನೆ ಎದುರಾಗಿತ್ತು. ಯಾಕೆಂದರೆ ಈ ಪ್ರಕರಣದ ಬಳಿಕ ಅವರು ಹೆಚ್ಚು ಸಾಮಾಜಿಕ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಚೇರಿಯಲ್ಲಿ ನಡೆದ ಗಣೇಶನ ಹಬ್ಬದಲ್ಲಿ ಸಕ್ರಿಯರಾಗಿದ್ದರೂ ಹೊರಗಡೆ ಹಿಂದಿನಂತೆ ಜನರ ಜತೆ ಇರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ
ಆದರೆ, ಈಗ ತಾನು ಕೆಲವು ವಂಚಕರ ಕೈಗೆ ಸಿಕ್ಕಿದ್ದರಿಂದ ಜನರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ನನಗೆ ಸೀಟು, ಸ್ಥಾನಮಾನ ಮುಖ್ಯ ಅಲ್ಲ, ಜನರ ಕಣ್ಣೀರು ಒರೆಸುವುದೇ ಮುಖ್ಯ ಎಂಬ ಸಂದೇಶದೊಂದಿಗೆ ಮತ್ತೆ ಬಂದಿದ್ದಾರೆ. ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿ ಅವರ ಮೇಲೂ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿದೆ. ಇಷ್ಟು ಹಣ ಎಲ್ಲಿಂದ ಬಂತು? ಯಾಕೆ ನಗದಾಗಿ ವರ್ಗಾವಣೆ ಮಾಡಿದ್ದೀರಿ ಎಂಬೆಲ್ಲ ವಿಚಾರಗಳಿಗೆ ಸಂಬಂಧಿಸಿ ಅವರೂ ಉತ್ತರಿಸಬೇಕಾಗಿದೆ.